ಬೆಂಗಳೂರು ಎಲಿವೇಟೆಡ್ ಕಾರಿಡಾರ್‌ಗೆ ಎಎಪಿ ವಿರೋಧ
ಬೆಂಗಳೂರು, ಜು.31: ಸರಕಾರ ನಿರ್ಮಿಸಲು ಉದ್ದೇಶಿಸಿರುವ ಬೆಂಗಳೂರು ಎಲಿವೇಟೆಡ್ ಕಾರಿಡಾರ್ ಯೋಜನೆಗೆ ಆಮ್‌ಆದ್ಮಿ ಪಕ್ಷ ವಿರೊಧ ವ್ಯಕ್ತಪಡಿಸಿದ್ದು, ಇದೊಂದು ವಿವೇಚನಾ ರಹಿತ ಯೋಜನೆಯಾಗಿದೆ ಎಂದು ಟೀಕಿಸಿದೆ.
ಎಲಿವೇಟೆಡ್ ಕಾರಿಡಾರ್ ಯೋಜನೆಯನ್ನು ಮೆಟ್ರೋಪಾಲಿಟಿನ್ ಪ್ಲಾನಿಂಗ್ ಕಮಿಟಿ(ನಗರ ಯೋಜನಾ ಸಮಿತಿ)ಯ ಶಿಫಾರಸ್ಸುಗಳನ್ನು ಉಲ್ಲಂಘಿಸಿ ತಯಾರಿಸಲಾಗಿದೆ. ಅಂದಾಜು 15 ಸಾವಿರ ಕೋಟಿ ವೆಚ್ಚದಲ್ಲಿ ಕಾರಿಡಾರ್ (ಎತ್ತರಿಸಿದ ರಸ್ತೆ) ನಿರ್ಮಾಣ ಮಾಡಲು ಮುಂದಾಗಿದೆ ಎಂದು ಎಎಪಿ ಹೇಳಿದೆ.
ರಸ್ತೆ ನಿರ್ಮಾಣಕ್ಕೆಂದೇ ಮೀಸಲಾಗಿರುವ ಅನುದಾನವನ್ನು ಖರ್ಚು ಮಾಡುವ ಉದ್ದೇಶದಿಂದಷ್ಟೆ ಈ ಕಾರಿಡಾರ್ ಅನ್ನು ನಿರ್ಮಿಸುವ ಪ್ರಯತ್ನ ಮಾಡಲಾಗುತ್ತಿದೆ. ಕಾರಿಡಾರ್ ನಿರ್ಮಾಣದ ಬದಲಿಗೆ ಉಪನಗರ ರೈಲು ವ್ಯವಸ್ಥೆ, ಬಸ್ ವ್ಯವಸ್ಥೆ ಬಗ್ಗೆ ಸರಕಾರ ಗಮನ ಹರಿಸಲಿ ಎಂದು ಎಎಪಿ ಸಲಹೆ ನೀಡಿದೆ.
ನಗರದ ಯೋಜನೆಯನ್ನು ನಗರ ಯೋಜನಾ ಸಮಿತಿಯೇ ಮಾಡಬೇಕು ಎಂಬ ನಿಯಮವಿದ್ದರೂ, ಇಂದಿನ ಸರಕಾರ ಹಾಗೂ ಹಿಂದಿನ ಸರಕಾರಗಳು ಈ ನಿಯಮವನ್ನು ಗಾಳಿಗೆ ತೂರುತ್ತಾ ಬಂದಿವೆ. ಹೈಕೋರ್ಟ್ ಈ ಬಗ್ಗೆ ಸರಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು. ಆದರೂ ಸರಕಾರಗಳು ಯೋಜನಾ ಸಮಿತಿಯ ರಚನೆಯನ್ನೇ ಮಾಡಿಲ್ಲ ಎಂದು ಎಎಪಿ ಆರೋಪಿಸಿದೆ.