ಒಂದು ವರ್ಷದಲ್ಲಿ ಸಾವಿರ ಮಕ್ಕಳ ರಕ್ಷಣೆ: ಆರ್‌ಪಿಎಫ್ ರಕ್ಷಣಾ ಆಯುಕ್ತೆ ದೆಬಾಸ್ಮಿತಾ
ಬೆಂಗಳೂರು, ಜು.31: ನೈರುತ್ಯ ರೈಲ್ವೆಯ ಆರ್‌ಪಿಎಫ್‌ನಿಂದ ಕಳೆದ ಒಂದು ವರ್ಷದಲ್ಲಿ 1,100 ಮಕ್ಕಳನ್ನು ರಕ್ಷಿಸಲಾಗಿದೆ ಎಂದು ಆರ್‌ಪಿಎಫ್ ರಕ್ಷಣಾ ಆಯುಕ್ತೆ ದೆಬಾಸ್ಮಿತಾ ಚಟ್ಟೋಪಾಧ್ಯಾಯ ತಿಳಿಸಿದ್ದಾರೆ.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವಿಮಾನ ನಿಲ್ದಾಣದಲ್ಲಿ ಮಾನವ ಕಳ್ಳ ಸಾಗಣೆ ವಿರೋಧಿ ದಿನದ ಅಂಗವಾಗಿ ಅಂತಾರಾಷ್ಟ್ರೀಯ ನ್ಯಾಯ ಆಯೋಗ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರಯಾಣಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಳ್ಳತನದಂತಹ ಕೃತ್ಯಕ್ಕೆ ರೈಲುಗಳನ್ನು ಬಳಕೆ ಮಾಡಿಕೊಳ್ಳುತ್ತಿರುವುದು ರಾಜ್ಯಾದ್ಯಂತ ನಡೆಯುತ್ತಿದೆ. ಇಂತಹ ಕತ್ಯಗಳನ್ನು ತಡೆಗಟ್ಟುವ ಸಲುವಾಗಿ ಆರ್‌ಪಿಎಫ್ ಅನೇಕ ಬಾರಿ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದೆ ಎಂದು ಹೇಳಿದರು.
ರೈಲು ನಿಲ್ದಾಣಗಳಲ್ಲಿ ಮಕ್ಕಳು ಅಥವಾ ಮಹಿಳೆಯರ ಕಳ್ಳ ಸಾಗಣೆ ಬಗ್ಗೆ ಅನುಮಾನ ಕಂಡುಬಂದಲ್ಲಿ ಆರ್‌ಪಿಎಫ್ ಸಹಾಯವಾಣಿ 182 ಕ್ಕೆ ಮಾಹಿತಿ ನೀಡುವಂತೆ ಪ್ರಯಾಣಿಕರನ್ನು ಪ್ರೋತ್ಸಾಹ ನೀಡಬೇಕು ಎಂದು ಚಟ್ಟೋಪಾಧ್ಯಾಯ ತಿಳಿಸಿದರು.
ಐಜಿಎಂ ಸಹಾಯಕ ನಿರ್ದೇಶಕಿ ಎಂ.ಪ್ರತಿಭಾ ಮಾತನಾಡಿ, ಕಳ್ಳಸಾಗಣೆ ಜಾಲಕ್ಕೊಳಪಟ್ಟವರು ಜೀತದಾಳುಗಳಾಗಿ ನರಳುವಂತಾಗಿದೆ. ಸಹಸ್ರಾರು ಜನರ ಸ್ವಾತಂತ್ರ, ಘನತೆ ಹಾಗೂ ಮನುಷ್ಯತ್ವವೇ ಕಳ್ಳತನವಾಗುತ್ತಿದೆ ಎಂದರು.