ಮುಸ್ಲಿಂ ಸಮುದಾಯಕ್ಕೆ ಶಿಕ್ಷಣದಲ್ಲಿ ಮೀಸಲಾತಿ ಒದಗಿಸಬೇಕು: ಶಿವಸೇನೆ

Update: 2018-08-01 09:05 GMT

ಮುಂಬೈ, ಆ.1: ಮುಸ್ಲಿಂ ಸಮುದಾಯಕ್ಕೆ ಶಿಕ್ಷಣದಲ್ಲಿ ಮೀಸಲಾತಿಯೊದಗಿಸಬೇಕೆಂಬ ಶಿವಸೇನೆಯ ಬೇಡಿಕೆಯನ್ನು ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮೀನ್ ಸ್ವಾಗತಿಸಿದೆ. ಅದೇ ಸಮಯ ಬಾಂಬೆ ಹೈಕೋರ್ಟ್ ಆದೇಶದಂತೆ ಮುಸ್ಲಿಮರಿಗೆ ಶಿಕ್ಷಣದಲ್ಲಿ ಶೇ.5ರಷ್ಟು ಮೀಸಲಾತಿ ನೀಡಬೇಕೆಂಬ ಆದೇಶವನ್ನು ಪಾಲಿಸದ ಮಹಾರಾಷ್ಟ್ರದ ದೇವೇಂದ್ರ ಫಡ್ನವಿಸ್ ಸರಕಾರವನ್ನು ಪಕ್ಷ ಟೀಕಿಸಿದೆ.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಶಿವಸೇನೆ ಅಧ್ಯಕ್ಷ ಉದ್ಧವ್ ಠಾಕ್ರೆ, ಮರಾಠರ ಹೊರತಾಗಿ ಧಂಗರ್, ಮುಸ್ಲಿಮರು ಮತ್ತಿತರ ಸಮುದಾಯಗಳ ಮೀಸಲಾತಿ ಬೇಡಿಕೆಯನ್ನೂ ಪರಿಗಣಿಸಬೇಕೆಂದು ಆಗ್ರಹಿಸಿದ್ದರಲ್ಲದೆ ರಾಜ್ಯ ಮತ್ತು ಕೇಂದ್ರ ಸರಕಾರ ಈ ನಿಟ್ಟಿನಲ್ಲಿ ಕೈಗೊಳ್ಳುವ ಕ್ರಮವನ್ನು ತಾನು ಬೆಂಬಲಿಸುವುದಾಗಿಯೂ ತಿಳಿಸಿದ್ದರು.

ಶಿವಸೇನೆಯ ನಿಲುವನ್ನು ಸ್ವಾಗತಿಸಿದ ಎಐಎಂಐಎಂ ಶಾಸಕ ಇಮ್ತಿಯಾಝ್ ಜಲೀಲ್, “ಇದು ಉತ್ತಮ ಬೆಳವಣಿಗೆ. ಬಿಜೆಪಿ ಇದರಿಂದ ಕಲಿಯಬೇಕು. ಆದರೆ ಕೆಲ ಬಿಜೆಪಿ ನಾಯಕರು ತಮ್ಮ ಮಾತು ಹಾಗೂ ಕೃತಿಗಳಿಂದ ಮುಸ್ಲಿಮರನ್ನು ಟಾರ್ಗೆಟ್ ಮಾಡುತ್ತಿದ್ದಾರೆ'' ಎಂದು ಹೇಳಿದರು.

ಬಾಂಬೆ ಹೈಕೋರ್ಟ್ ತನ್ನ ಈ ಹಿಂದಿನ ಆದೇಶದಲ್ಲಿ ಒಬಿಸಿ ವಿಭಾಗಕ್ಕೆ ತಮ್ಮನ್ನು ಸೇರಿಸಬೇಕೆಂಬ ಮರಾಠರ ಬೇಡಿಕೆಯನ್ನು ತಿರಸ್ಕರಿಸಿ ಮುಸ್ಲಿಂ ಸಮುದಾಯಕ್ಕೆ ಶೇ 5 ಮೀಸಲಾತಿಗೆ ಅನುಮತಿಸಿತ್ತು ಎಂದರು. ಮುಸ್ಲಿಮರಿಗೆ ಉದ್ಯೋಗ ಕ್ಷೇತ್ರದಲ್ಲಿಯೂ ಮೀಸಲಾತಿ ಆಗ್ರಹಿಸಿ ತಮ್ಮ ಪಕ್ಷ ಹೋರಾಟ ನಡೆಸುವುದಾಗಿಯೂ ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News