ರಾಜತಾಂತ್ರಿಕ ಪ್ರಬುದ್ಧತೆಯಿಂದ ಡೋಕಾ ಲಾ ಬಿಕ್ಕಟ್ಟು ಪರಿಹಾರ: ಸುಷ್ಮಾ ಸ್ವರಾಜ್

Update: 2018-08-01 16:51 GMT

ಹೊಸದಿಲ್ಲಿ, ಆ.1: ಭಾರತ- ಚೀನಾ ನಡುವಿನ ಡೋಕಾ ಲಾ ಬಿಕ್ಕಟ್ಟನ್ನು ರಾಜತಾಂತ್ರಿಕ ಪ್ರಬುದ್ಧತೆಯಿಂದ , ಯಾವುದೇ ಭೂಭಾಗವನ್ನು ಕಳೆದುಕೊಳ್ಳದೆ ಬಗೆಹರಿಸಲಾಗಿದೆ. ಅಲ್ಲಿ ಈಗ ಯಥಾಸ್ಥಿತಿಯನ್ನು ಕಾಯ್ದುಕೊಳ್ಳಲಾಗಿದೆ ಎಂದು ವಿದೇಶ ವ್ಯವಹಾರ ಇಲಾಖೆಯ ಸಚಿವೆ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ.

ಪರಸ್ಪರ ಹಿತರಕ್ಷಣೆ, ಪರಸ್ಪರ ತಿಳುವಳಿಕೆ ಹಾಗೂ ಪರಸ್ಪರ ವಿಶ್ವಾಸವನ್ನು ಖಾತರಿ ಪಡಿಸುವ ಮುಖ್ಯ ಉದ್ದೇಶದಿಂದ ವುಹಾನ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾದ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಮಧ್ಯೆ ಅನೌಪಚಾರಿಕ ಶೃಂಗ ಸಭೆ ನಡೆದಿತ್ತು ಮತ್ತು ಈ ಮೂರೂ ಗುರಿಗಳನ್ನು ಸಾಧಿಸಲಾಗಿದೆ ಎಂದು ಸಚಿವೆ ತಿಳಿಸಿದರು. ಲೋಕಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಮಾತನಾಡಿದ ಸುಷ್ಮಾ, 2017ರ ಆಗಸ್ಟ್ 28ರಂದು ಡೋಕಾ ಲಾ ಬಿಕ್ಕಟ್ಟು ಬಗೆಹರಿದಿದೆ. ಆ ಬಳಿಕದ ಸ್ಥಿತಿಗತಿಯಲ್ಲಿ ಕಿಂಚಿತ್ತೂ ಬದಲಾಗಿಲ್ಲ ಎಂದರು.

ವುಹಾನ್ ಶೃಂಗಸಭೆ ಅನೌಪಚಾರಿಕವಾಗಿತ್ತು ಮತ್ತು ಯಾವುದೇ ನಿರ್ದಿಷ್ಟ ವಿಷಯದ ಬಗ್ಗೆ ಚರ್ಚಿಸುವ ಅಜೆಂಡಾವನ್ನು ಹೊಂದಿರಲಿಲ್ಲ. ಈ ಶೃಂಗಸಭೆಗೂ ಮುನ್ನ ಭೇಟಿಯಾಗಿದ್ದ ಉಭಯ ದೇಶಗಳ ವಿದೇಶ ಸಚಿವರು, ವುಹಾನ್ ಶೃಂಗಸಭೆಯಲ್ಲಿ ಉಭಯ ನಾಯಕರು ಯಾವುದೇ ನಿರ್ದಿಷ್ಟ ವಿಷಯಕ್ಕೆ ಸೀಮಿತಗೊಳ್ಳಬಾರದೆಂದು ನಿರ್ಧರಿಸಿದ್ದರು ಎಂದು ಸುಷ್ಮಾ ಹೇಳಿದರು. ಈ ಶೃಂಗಸಭೆಯ ಮುಂದುವರಿದ ಪ್ರಕ್ರಿಯೆಯಾಗಿ ಉಭಯ ದೇಶಗಳ ನಡುವಿನ ಸೇನಾ ಸಂಬಂಧ ಸುಧಾರಣೆ ಉದ್ದೇಶದಿಂದ ಚೀನಾದ ರಕ್ಷಣಾ ಸಚಿವರು ಭಾರತಕ್ಕೆ ಆಗಮಿಸಲಿದ್ದಾರೆ. ಅಲ್ಲದೆ ಈ ವರ್ಷಾಂತ್ಯ ಚೀನಾದ ವಿದೇಶ ಸಚಿವರು ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದವರು ತಿಳಿಸಿದರು. ಚೀನಾ- ಭೂತಾನ್ ನಡುವಿನ ಗಡಿ ವಿವಾದ ಮುಂದುವರಿದಿದ್ದು ಇದು ಅವೆರಡು ದೇಶಗಳಿಗೆ ಸಂಬಂಧಿಸಿದ ವಿಷಯವಾಗಿದೆ. ತ್ರಿವಳಿ ರಾಷ್ಟ್ರಗಳ(ಭಾರತ, ಚೀನಾ, ಭೂತಾನ್) ಗಡಿಪ್ರದೇಶದ ಸಂಗಮ ಸ್ಥಳವಾಗಿರುವ ಡೋಕಾ ಲಾದ ಕುರಿತ ವಿಷಯ ಮಾತ್ರ ನಮಗೆ ಸಂಬಂಧಿಸಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರವಾಗಿ ತಿಳಿಸಿದರು.

ವುಹಾನ್ ಶೃಂಗ ಸಭೆಯಲ್ಲಿ ಸಚಿವೆ ಸುಷ್ಮಾ ಉಪಸ್ಥಿತರಿರಲಿಲ್ಲ. ಈಗ ಸದನದಲ್ಲಿ ಪ್ರಧಾನಿ ಉಪಸ್ಥಿತರಿದ್ದು ಅಂದಿನ ಸಭೆಯಲ್ಲಿ ಯಾವ ವಿಷಯದ ಬಗ್ಗೆ ಚರ್ಚಿಸಲಾಗಿದೆ ಎಂಬ ಮಾಹಿತಿಯನ್ನು ಅವರು ನೀಡಲಿ ಎಂದು ಟಿಎಂಸಿ ಮುಖಂಡ ಸುಗತ ಬೋಸ್ ಹೇಳಿದರು. ಈ ಸಲಹೆಯನ್ನು ತಿರಸ್ಕರಿಸಿದ ಸ್ವರಾಜ್, ವುಹಾನ್ ಶೃಂಗಸಭೆಯಲ್ಲಿ ಹಾಜರಿರದಿದ್ದರೂ ಸಭೆಯ ಬಗ್ಗೆ ನನಗೆ ಸಂಪೂರ್ಣ ತಿಳಿದಿದೆ. ಸಭೆಯ ಚರ್ಚೆಯ ಬಗ್ಗೆ ನನಗೆ ಮಾಹಿತಿ ಇದೆ ಎಂದು ತಿಳಿಸಿದರು. ದಕ್ಷಿಣ ಚೀನಾ ಸಮುದ್ರದ ವಿವಾದದ ಬಗ್ಗೆ ಪ್ರಸ್ತಾವಿಸಿದ ಅವರು, ಅಂತರಾಷ್ಟ್ರೀಯ ಸಮುದ್ರ ಮಾರ್ಗಗಳು ಹಡಗುಗಳ ಸಂಚಾರಕ್ಕೆ ಮುಕ್ತವಾಗಿರಬೇಕು ಎಂಬುದು ಭಾರತದ ನಿಲುವಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News