ಕೆನೆ ಪದರ, ವರ್ಣವ್ಯವಸ್ಥೆ, ಅಸ್ಪಶ್ಯತೆ ಇತ್ಯಾದಿ

Update: 2018-08-01 18:31 GMT

‘ಕ್ರೀಮೀ ಲೇಯರ್’ ಅಥವಾ ‘ಕೆನೆ ಪದರ’ ಮೀಸಲಾತಿ ನೀತಿ ಹಿನ್ನೆಲೆಯಲ್ಲಿ ಬಳಸುವ ಈ ಪದದ ಅರ್ಥ ‘‘ತಲೆಮಾರು ಅಥವಾ ಎರಡು ತಲೆಮಾರು ಮೀಸಲಾತಿ ಪಡೆದವರು, ಪಡೆದು ಆರ್ಥಿಕವಾಗಿ ಶ್ರೀಮಂತರಾದವರು, ಅಂತಹವರು ಮೀಸಲಾತಿ ಬಿಟ್ಟು ಕೊಡಬೇಕು’’ ಎಂಬುದಾಗಿದೆ. ಒಟ್ಟಾರೆ ಆರ್ಥಿಕವಾಗಿ ಒಮ್ಮೆ ಸದೃಢರಾದವರು ಮೀಸಲಾತಿ ಮತ್ತೆ ಪಡೆಯಬಾರದು, ಅಂತಹವರು ಮೀಸಲಾತಿ ಇತರರಿಗೆ ಬಿಟ್ಟು ಕೊಡಬೇಕು. ಇದು ಕೆನೆ ಪದರ ಎಂಬ ಈ ಲಾಜಿಕ್‌ನ ಅರ್ಥ. ನಿಜ, ನೋಡೋಕೆ ಕೇಳೋಕೆ ಈ ಲಾಜಿಕ್ ತುಂಬಾ ಚೆನ್ನಾಗಿ ಕಾಣಿಸುತ್ತದೆ.

ದಲಿತ ಮತ್ತು ಹಿಂದುಳಿದವರನ್ನು ಕೂಡ ‘‘ಅವರವರೇ ಯಾಕೆ ಮೀಸಲಾತಿ ತಕೋ ಬೇಕು? ನಮಗೂ ಕೂಡ ಬಿಟ್ಟು ಕೊಟ್ಟರೆ ಆಗಲ್ವ?’’ ಎಂದು ಕೇಳುವಂತೆ ಮಾಡುತ್ತದೆ. ಅಂದಹಾಗೆ ಇಂತಹ ಚಿಂತನೆ ಮೊಳಕೆಯೊಡೆಯುವುದು ಆರೆಸ್ಸೆಸ್ ಶಾಖೆಗಳಲ್ಲಿ. ಆರೆಸ್ಸೆಸ್ ಸಭೆಗಳಲ್ಲಿ ಇಂತಹ ಚರ್ಚೆಗಳನ್ನು ಏರ್ಪಡಿಸಿ ಅಭಿಪ್ರಾಯ ರೂಪಿಸುವ ಚಟುವಟಿಕೆಗಳನ್ನು ನಡೆಸಲಾಗುತ್ತದೆ ಮತ್ತು ಇಂತಹ ಕ್ರಿಯೆಗಳಲ್ಲಿ ಕೆಲವು ದಲಿತ ಸಮುದಾಯಕ್ಕೆ ಸೇರಿದ ವ್ಯಕ್ತಿಗಳನ್ನು ಸೇರಿಸಿಕೊಂಡು ಅವರ ಮೂಲಕವೇ ಇದನ್ನು ಹೇಳಿಸಲಾಗುತ್ತದೆ, ಪುಸ್ತಕಗಳನ್ನು ಬರೆಸಲಾಗುತ್ತದೆ, ಬಿಡುಗಡೆ ಮಾಡಿ ಚರ್ಚೆಗೆ ಬಿಡಲಾಗುತ್ತದೆ! ಇರಲಿ, ಇವರ ಮಾತನ್ನು ಒಪ್ಪೋಣ. ಎಸ್ಸಿ/ಎಸ್ಟಿ ಮತ್ತು ಅವರಿಗಿಂತ ಜಾಸ್ತಿ ಮೀಸಲಾತಿ ಪಡೆವ ಒಬಿಸಿಗಳು ಮೀಸಲಾತಿ ಬಿಟ್ಟು ಕೊಡೋಣ. ಆದರೆ ಪ್ರಶ್ನೆ ಎಂದರೆ ಈ ಕೆನೆ ಪದರ ಲಾಜಿಕ್ ಕೇವಲ ಮೀಸಲಾತಿಗೆ ಮಾತ್ರ ಯಾಕೆ ಅಂತ? ವರ್ಣ ವ್ಯವಸ್ಥೆ ಪ್ರಕಾರವೇ ಬರುವುದಾದರೆ ದೇವಾಲಯಗಳಲ್ಲಿ ಪೂಜೆ ಮಾಡುವುದು. ಪೂಜೆಯ ಈ ಮೀಸಲಾತಿಯಿಂದ ನಿರ್ದಿಷ್ಟ ಸಮುದಾಯಗಳು ಆರ್ಥಿಕವಾಗಿ ಬಹಳ ಶ್ರೀಮಂತರಾಗಿದ್ದಾರೆ.

ಈಗಲೂ ಅವರ ತಿಜೋರಿ ತುಂಬುತ್ತಲೇ ಇದೆ. ಮೀಸಲಾತಿಯ ಕೆನೆಗಿಂತ ದೇಗುಲ ಪೂಜೆಯ ಈ ಕೆನೆ ಬಹಳ ದಪ್ಪಇದೆ! ಹಾಗೆಯೇ ವ್ಯಾಪಾರ-ವ್ಯವಹಾರ, ಬಿಸಿನೆಸ್ ಕ್ಷೇತ್ರ. ನಿರ್ದಿಷ್ಟ ಸಮುದಾಯಗಳು ವ್ಯಾಪಾರ ವ್ಯವಹಾರದ ಈ ಕ್ಷೇತ್ರದಲ್ಲಿ ಸಹಸ್ರಾರು ವರ್ಷಗಳಿಂದ ಏಕಸ್ವಾಮ್ಯ ಹೊಂದಿ ಕೆನೆ ಪದರ ದೇಗುಲ ಪೂಜೆಗಿಂತಲೂ ಜಾಸ್ತಿ ಮಾಡಿಕೊಂಡಿದ್ದಾರೆ.ಮುಂದುವರಿದು ಹೇಳುವುದಾದರೆ ಭೂಮಿ. ಎಷ್ಟು ಜನರಿಗೆ ಈ ದೇಶದಲ್ಲಿ ಭೂಮಿ ಸಿಕ್ಕಿದೆ? ಈ ನಿಟ್ಟಿನಲ್ಲಿ ಹೇಳುವುದಾದರೆ ಭೂಮಿ ಅಥವಾ ಭೂ ಒಡೆತನದ ಈ ಕ್ಷೇತ್ರದಲ್ಲಿ ಒಂದಷ್ಟು ಸಮುದಾಯಗಳು ಏಕಸ್ವಾಮ್ಯ ಸಾಧಿಸಿವೆ.ಶತ ಶತಮಾನಗಳಿಂದಲೂ ಪಿತ್ರಾರ್ಜಿತ ಆಸ್ತಿ ಪದ್ಧತಿ ಇರುವ ಭಾರತದಲ್ಲಿ ಅಂತಹ ಸಮುದಾಯಗಳು ಜಮೀನಿನ ಮೇಲಿನ ತಮ್ಮ ಏಕಸ್ವಾಮ್ಯವನ್ನು ಬಿಟ್ಟು ಕೊಟ್ಟಿಲ್ಲ. ಶತಶತಮಾನಗಳಿಂದ ಆ ಜಮೀನಿನಲ್ಲಿ ಬರುವ ಆದಾಯಗಳಿಂದ ಅವರೂ ಕೂಡ ಆರ್ಥಿಕವಾಗಿ ಸಾಕಷ್ಟು ಬಲಾಢ್ಯರಾಗಿ ತಮ್ಮ ಕೆನೆಪದರ ಹೆಚ್ಚಿಸಿಕೊಂಡಿದ್ದಾರೆ. ಪ್ರಶ್ನೆ ಏನೆಂದರೆ ಈ ‘ಕೆನೆ ಪದರ’ದ ಬಗ್ಗೆ ಯಾರೂ ಯಾಕೆ ಪ್ರಶ್ನಿಸುವುದಿಲ್ಲ ಅಥವಾ ಅವರಿಗೂ ಕೆನೆ ಪದರ ನೀತಿ ಅನ್ವಯಿಸಿ ಇತರರಿಗೂ ಪೂಜೆ ಮಾಡುವುದ ಬಿಟ್ಟು ಕೊಡಿ, ಇತರರಿಗೂ ವ್ಯಾಪಾರ ಬಿಟ್ಟು ಕೊಡಿ, ಇತರರಿಗೂ ಭೂಮಿ ಬಿಟ್ಟು ಕೊಡಿ, ಒಂದೇ ತಲೆಮಾರಿಗೆ ಇವೆಲ್ಲ ಸಾಕು ಅಂತ ಯಾಕೆ ಹೇಳಿಲ್ಲ? ಒಟ್ಟಾರೆ ಹೇಳುವುದಾದರೆ ಮನುಸ್ಮತಿ ಜಾರಿ ಗೊಳಿಸಿದ ಮೀಸಲಾತಿಯಲ್ಲಿ ಯಾಕೆ ಕೆನೆಪದರ ಜಾರಿಯಾಗಲಿಲ್ಲ ಎಂಬುದು.

ಈ ಕ್ಷೇತ್ರಗಳಲ್ಲೂ ಅಲ್ಲಲ್ಲಿ ಅಲ್ಪ ಸ್ವಲ್ಪಬದಲಾವಣೆ ಅದೂ ಸ್ವಾತಂತ್ರ್ಯ ಬಂದ ಮೇಲೆ ಸ್ವಲ್ಪಏರುಪೇರಾಗಿರಬಹುದು. ಆದರೆ ಮನುಸ್ಮತಿಯ ಆ ಸಂವಿಧಾನ ಸಂಬಂಧಿಸಿದ ಆ ಸಮುದಾಯಗಳಿಗೆ ಅಂದರೆ ಬ್ರಾಹ್ಮಣ, ವೈಶ್ಯ ಮತ್ತು ಭೂಮಾಲಕ ಶೂದ್ರ ಸಮುದಾಯಗಳಿಗೆ ನೀಡಿದಷ್ಟು ವ್ಯಾಪಕ ಅವಕಾಶವನ್ನು ಆಧುನಿಕ ಅಂಬೇಡ್ಕರ್ ರಚಿತ ಸಂವಿಧಾನ ಖಂಡಿತ ನೀಡಿಲ್ಲ! ಹಾಗೆಯೇ ಮನುಸ್ಮತಿಯ ಕಾನೂನುಗಳನ್ನು ಅಂಬೇಡ್ಕರ್ ವಿರಚಿತ ಸಂವಿಧಾನಕ್ಕೆ ಸಂಪೂರ್ಣ ಬದಲಾವಣೆ ಮಾಡಲು ಆಗಿಲ್ಲ! ಏಕೆಂದರೆ ಮನುಸ್ಮತಿ ಜಾರಿಯಾದದ್ದು ಕ್ರಿ.ಶ.185 ಆದರೆ ಅಂಬೇಡ್ಕರ್ ವಿರಚಿತ ಸಂವಿಧಾನ ಜಾರಿಯಾದದ್ದು ಕ್ರಿ.1950ರಲ್ಲಿ. ಅಂದರೆ ಸುಮಾರು 2035 ವರ್ಷಗಳಿಂದ ಮನುಸ್ಮತಿ ಜಾರಿಯಲ್ಲಿದೆ. ಅದರ ಮೂಲಕ ಪಡೆದ ಅಘೋಷಿತ ಮೀಸಲಾತಿಯನ್ನು ಸಂಬಂಧಿಸಿದ ಆ ಸಮುದಾಯಗಳು ಹತ್ತಾರು ತಲೆಮಾರು ಅನುಭವಿಸಿವೆ. ಕೆನೆ ಪದರ ಜಾರಿ ಮಾಡಬೇಕು ಎಂಬ ಸಣ್ಣ ಚಿಂತನೆ ಸಹ ಮಾಡಿಲ್ಲ.ಆದರೆ ಅಂಬೇಡ್ಕರ್ ಜಾರಿ ಮಾಡಿದ ಮೀಸಲಾತಿಗೆ ಇನ್ನೂ ಸಾವಿರ ಎರಡು ಸಾವಿರ ವರ್ಷವಿರಲಿ ನೂರು ವರ್ಷವೇ ತುಂಬಿಲ್ಲ! ಆದರೆ ಇಲ್ಲಿ ಕೆನೆ ಪದರ ಜಾರಿಯಾಗಬೇಕಂತೆ!

ಮತ್ತೂ ವಾಸ್ತವವೆಂದರೆ ಕೆನೆ ಪದರ ಜಾರಿಯಾಗಲಿ.ಆದರೆ ಹಾಗೆ ಮೀಸಲಾತಿ ಕಳೆದುಕೊಳ್ಳುವ ಪರಿಶಿಷ್ಟಜಾತಿಯ ಎರಡನೇ ತಲೆಮಾರು ಬದುಕಿಗಾಗಿ ಮಾಡುವುದಾದರೂ ಏನನ್ನು ಎಂಬುದು? ಉದಾಹರಣೆಗೆ ನನಗೆ ತಿಳಿರುವ ಪರಿಶಿಷ್ಟ ಜಾತಿಯ ವ್ಯಕ್ತಿಯೊಬ್ಬರು ನಿವೃತ್ತರಾಗಿದ್ದಾರೆ. ನಿವೃತ್ತಿಯಿಂದ ಬಂದ ಆ ಹಣದಲ್ಲಿ ಅವರು ಒಂದು ಅಂಗಡಿ ತೆರೆದರು. ಆದರೆ ದುರಂತ ಎಂದರೆ ವ್ಯಾಪಾರವೇ ನಡೆಯಲಿಲ್ಲ. ದಲಿತ ಎಂಬ ಕಾರಣಕ್ಕೆ ಯಾರೂ ಅವರ ಅಂಗಡಿಗೆ ಬರಲೇ ಇಲ್ಲ! ಅಂಗಡಿ ತೆಗೆದ ಒಂದೇ ವರ್ಷಕ್ಕೆ ಅವರು ಅದನ್ನು ಮಾರಿ ನಷ್ಟ ಅನುಭವಿಸಿ ನಗರ ಬಿಟ್ಟು ಹಳ್ಳಿ ಸೇರಿಸಿಕೊಂಡರು. ನಿವೃತ್ತಿ ನಂತರ ಬಂದ ಅಷ್ಟೂ ಹಣವನ್ನು ಅವರು ಅಸ್ಪಶ್ಯತೆ ಕಾರಣಕ್ಕೆ ಕಳೆದುಕೊಂಡರು.

ಇದು ಒಂದು ಸಣ್ಣ ಉದಾಹರಣೆ ಅಷ್ಟೇ. ಹೇಳುತ್ತಾ ಹೋದರೆ... ಯಾಕೆಂದರೆ ವೈಯಕ್ತಿಕವಾಗಿ ನಮ್ಮ ಮನೆಯ ಸುತ್ತಮುತ್ತಲೇ ಹಾಗೆ ನಿವೃತ್ತರಾಗಿ ತಮ್ಮ ಮಕ್ಕಳಿಗೆ ಮೀಸಲಾತಿಯ ಯಾವ ಫಲಾನುಭವವೂ ಸಿಗದೆ ಅತ್ತ ಬದುಕನ್ನೂ ಕಟ್ಟಿಕೊಳ್ಳಲಾಗದೆ ನರಕ ಅನುಭವಿಸುತ್ತಿರುವ ಅನೇಕ ಕುಟುಂಬಗಳಿವೆ. ಈ ನಿಟ್ಟಿನಲ್ಲಿ ಕೆನೆ ಪದರ ನೀತಿ ಜಾರಿಯಾಗದಿದ್ದರೂ ಇವರೆಲ್ಲ ಒಂದೇ ತಲೆಮಾರು ಮೀಸಲಾತಿ ಅನುಭವಿಸಿ ಶ್ರೀಮಂತರಾದರೂ ಕೂಡ ತಮ್ಮ ಮಕ್ಕಳಿಗೆ ಮುಂದಿನ ಬದುಕು ಕಟ್ಟಿಕೊಡುವಲ್ಲಿ ವಿಫಲರಾಗುತ್ತಿದ್ದಾರೆ.ಮತ್ತೆ ಹೇಳುವುದಾದರೆ ಬಂಡವಾಳ ಇದ್ದರೂ ಆ ಬಂಡವಾಳದಿಂದ ವ್ಯವಹಾರ ಮಾಡುವ ಹಾಗಿಲ್ಲ. ಆದರೆ ಸವರ್ಣೀಯರಿಗೆ ಹಾಗಲ್ಲ. ನಿವೃತ್ತಿ ಒಂದೇ ತಲೆಮಾರಿಗೆ ಆದರೂ ಅವರು ಹೊಟೇಲ್, ವ್ಯಾಪಾರ-ವ್ಯವಹಾರ ಅಂತ ಮೊದಲಿಗಿಂತಲೂ ಹೆಚ್ಚು ಚಟುವಟಿಕೆಯಲ್ಲಿರುತ್ತಾರೆ.

ಹಾಗಿದ್ದರೆ ಇದಕ್ಕೆ ಕಾರಣ? ಜಾತಿ. ಜಾತಿವ್ಯವಸ್ಥೆ ಮತ್ತು ಅಸ್ಪಶ್ಯತಾಚರಣೆ ಇರುವುದರಿಂದ ಮೀಸಲಾತಿ ಜಾರಿಯಾಯಿತು. ಸತ್ಯವೇನೆಂದರೆ ಮೀಸಲಾತಿ ಹುಟ್ಟಿಕೊಂಡಿದ್ದು ಈ ದೇಶದಲ್ಲಿ ಅಸ್ತಿತ್ವದಲ್ಲಿರುವ ಅಸ್ಪಶ್ಯತೆ ಕಾರಣಕ್ಕೆ ಹೊರತು ಬಡವ ಶ್ರೀಮಂತ ಎಂಬ ಕಾರಣಕ್ಕೆ ಅಲ್ಲ! ಹಾಗೆಯೇ ಆ ಜಾತಿವ್ಯವಸ್ಥೆ, ಅಸ್ಪಶ್ಯತಾಚರಣೆ ಇನ್ನೂ ಇರುವುದರಿಂದ, ಹೆಚ್ಚುತ್ತಿರುವುದರಿಂದ ಮೀಸಲಾತಿ ಇರಲೇಬೇಕು ಮತ್ತು ಆ ಜಾತಿ ವ್ಯವಸ್ಥೆ ಮುಂದುವರಿಯುತ್ತಿರುವ ಕಾರಣಕ್ಕೆ ಮೀಸಲಾತಿ ತಲೆ ತಲೆಮಾರು ಮುಂದುವರಿಯಲೇಬೇಕು.

Writer - ರಘೋತ್ತಮ ಹೊ. ಬ.

contributor

Editor - ರಘೋತ್ತಮ ಹೊ. ಬ.

contributor

Similar News