ದಲಿತ ಸಮುದಾಯದ ಜಮೀನಿಗೆ ಸೂಕ್ತ ರಕ್ಷಣೆ ನೀಡಿ: ನ್ಯಾ.ಎಚ್.ಎಲ್.ದತ್ತು
ಬೆಂಗಳೂರು, ಜು.2: ರಾಜ್ಯದ ದಲಿತ ಸಮುದಾಯಕ್ಕೆ ಸೇರಿದ ಜಮೀನುಗಳನ್ನು ಪಟ್ಟಭದ್ರರು ಆಕ್ರಮಿಸದಂತೆ ಸೂಕ್ತ ರಕ್ಷಣೆ ನೀಡಬೇಕೆಂದು ಮಾನವ ಹಕ್ಕು ಆಯೋಗದ ಅಧ್ಯಕ್ಷ ನ್ಯಾ.ಎಚ್.ಎಲ್.ದತ್ತು ತಿಳಿಸಿದರು.
ಗುರುವಾರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ವಿಕಾಸಸೌಧದಲ್ಲಿ ಆಯೋಜಿಸಿದ್ದ ಬಹಿರಂಗ ವಿಚಾರಣೆಯ ಅಧಿವೇಶನವನ್ನು ಉದ್ಘಾಟಿಸಿ ಮಾತನಾಡಿದ ಅವರು, ದಲಿತ ಸಮುದಾಯಕ್ಕೆ ಸಣ್ಣ ಪ್ರಮಾಣದ ಜಮೀನು ಇರುತ್ತದೆ. ಅದರಲ್ಲೆ ಬದುಕು ನಡೆಸುತ್ತಿರುತ್ತಾರೆ. ಆದರೆ, ಪಟ್ಟಭದ್ರರು ದಲಿತರ ಜಮೀನುಗಳನ್ನು ಅತಿಕ್ರಮಿಸಲು ನಿರಂತರವಾಗಿ ಪ್ರಯತ್ನಿಸುತ್ತಾರೆ. ಅಂತವರಿಂದ ರಕ್ಷಣೆ ಒದಗಿಸುವುದು ಸಂಬಂಧಿಸಿದ ಅಧಿಕಾರಿಗಳ ಕರ್ತವ್ಯವೆಂದು ತಿಳಿಸಿದರು.
ಇನ್ನು ರಾಜ್ಯ ಎಸ್ಸಿ, ಎಸ್ಟಿ ಸಮುದಾಯದ ಮೇಲೆ ನಡೆಯುವ ದೌರ್ಜನ್ಯವನ್ನು ತಡೆಯುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿರುತ್ತದೆ. ಈ ಸಂಬಂಧ ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಬಳಕೆಯಾಗುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಅವರು ಆಶಿಸಿದರು.
ಗ್ರಾಮೀಣ ಭಾಗದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಅಂಗನವಾಡಿ ಹಾಗೂ ಶಾಲಾ ಕಟ್ಟಡಗಳನ್ನು ಸುವ್ಯವಸ್ಥಿತವಾಗಿ ಇಟ್ಟುಕೊಳ್ಳಬೇಕು. ಉನ್ನತ ವಿದ್ಯಾಭ್ಯಾಸ ಮಾಡುವ ಗ್ರಾಮೀಣ ವಿದ್ಯಾರ್ಥಿಗಳಿಗೆ ಆರ್ಥಿಕ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕು. ಗ್ರಾಮೀಣ ಭಾಗದ ಆರೋಗ್ಯಕ್ಕೆ ಆದ್ಯತೆ ಮೇರೆಗೆ ಒತ್ತು ಕೊಡಬೇಕೆಂದು ಅವರು ಹೇಳಿದರು.
ರಾಜ್ಯದಲ್ಲಿ ಮಕ್ಕಳ ಮತ್ತು ಮಹಿಳೆಯರ ರಕ್ಷಣೆಗೆ ವಿಶೇಷ ಆಸಕ್ತಿ ವಹಿಸಿ ಕಾರ್ಯನಿರ್ವಹಿಸಬೇಕಾಗುತ್ತದೆ. ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳ ತಡೆಗೆ ಪರಿಣಾಮಕಾರಿಯಾದ ಕಾನೂನು ಅನುಷ್ಠಾನ ಹಾಗೂ ಜಾಗೃತಿ ಮೂಡಿಸುವುದು ಅಗತ್ಯ. ಹಾಗೆಯೆ ಮಕ್ಕಳು ಹಾಗೂ ಮಹಿಳೆಯರು ಕಾಣೆಯಾಗುತ್ತಿರುವ ಪ್ರಕರಣವನ್ನು ಸರಕಾರ ಹಾಗೂ ಇಲಾಖಾ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸದಸ್ಯರಾದ ಪಿ.ಸಿ.ಘೋಷ್, ನ್ಯಾ.ಮುರುಗೇಶ್, ರಾಜ್ಯ ಸರಕಾರದ ಮುಖ್ಯಕಾರ್ಯದರ್ಶಿ ವಿಜಯ ಭಾಸ್ಕರ್, ರಾಜ್ಯ ಪೊಲೀಸ್ ನಿರ್ದೇಶಕಿ ನೀಲಮಣಿ ರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಮಾನವ ಹಕ್ಕುಗಳ ಕುರಿತು ಪಠ್ಯಶಿಕ್ಷಣದಲ್ಲಿ ಅಳವಡಿಸುವ ಮೂಲಕ ಶಾಲಾ ಹಂತದಿಂದಲೆ ಜಾಗೃತಿ ಮೂಡಿಸಬೇಕಿದೆ. ಉತ್ತಮ ನಾಗರಿಕ ಸಮಾಜದ ನಿರ್ಮಾಣಕ್ಕೆ ಶಿಕ್ಷಣದಲ್ಲಿ ಮಾನವ ಹಕ್ಕುಗಳ ಕುರಿತು ಮಾಹಿತಿ ನೀಡಬೇಕಿದೆ. ಈ ಬಗ್ಗೆ ರಾಜ್ಯ ಸರಕಾರ ಗಂಭೀರವಾಗಿ ಪರಿಶೀಲನೆ ನಡೆಸಲಿ.
-ನ್ಯಾ.ಎಚ್.ಎಲ್.ದತ್ತು ಅಧ್ಯಕ್ಷ, ರಾಷ್ಟ್ರೀಯ ಮಾನವ ಹಕ್ಕು ಆಯೋಗ