ಸ್ವಾರ್ಥಕ್ಕಾಗಿ ರಾಜಕಾರಣಿಗಳಿಂದ ಪ್ರತ್ಯೇಕತೆ ಕೂಗು: ಪ್ರೊ.ಚಂಪಾ

Update: 2018-08-02 14:04 GMT

ಬೆಂಗಳೂರು, ಆ.2: ಪ್ರತ್ಯೇಕ ರಾಜ್ಯಕ್ಕೆ ಸಂಬಂಧಿಸಿದಂತೆ ಸಾಹಿತಿಗಳು, ಚಿಂತಕರು ಮಾತನಾಡುತ್ತಿಲ್ಲ. ರಾಜಕಾರಣಿಗಳು ತಮ್ಮ ಸ್ವಾರ್ಥಕ್ಕಾಗಿ ಪ್ರತ್ಯೇಕ ರಾಜ್ಯಕ್ಕಾಗಿ ದ್ವನಿ ಎತ್ತಿದ್ದಾರೆ ಎಂದು ಹಿರಿಯ ಸಾಹಿತಿ ಪ್ರೊ.ಚಂದ್ರಶೇಖರ್ ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟ ಆಯೋಜಿಸಿದ್ದ ‘ಉತ್ತರ ಕರ್ನಾಟಕ; ಸಮಸ್ಯೆಗಳು ಮತ್ತು ಪರಿಹಾರ’ ಕುರಿತ ಚಿಂತನಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಒಡೆಯೋಕೆ ನಿಂತಿರುವವರಿಗೆ ರಾಜ್ಯ ಕಟ್ಟಿದವರ ನೋವು, ಸಂಕಟ ಗೊತ್ತಿಲ್ಲ. ಒಗ್ಗಟ್ಟಿನ ಬಗ್ಗೆ ಅರಿವಿಲ್ಲ. ಶ್ರೀರಾಮುಲು, ಉಮೇಶ್ ಕತ್ತಿ ಸಿಎಂ ಆಗುವ ಕನಸಿನಿಂದ ರಾಜ್ಯ ಒಡೆಯೋ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಹೇಳಿದರು.

ಕನಸು ಕಾಣೋದು ತಪ್ಪಲ್ಲ. ಅಖಂಡ ಕರ್ನಾಟಕ ಸಿಎಂ ಆಗುವ ಕನಸು ಕಾಣಲಿ. ರಾಜ್ಯ ಒಡೆಯೋ ಮಾತನಾಡುವವರು ಜನರ ಭಾವನೆಗಳ ಜತೆ ಚೆಲ್ಲಾಟ ಆಡಬಾರದು. ನಾಡಿನ ಬಲ ಹೆಚ್ಚಿಸಬೇಕೇ ಹೊರತು ಕುಗ್ಗಿಸಬಾರದು. ರಾಜಕಾರಣಿಗಳು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ನುಡಿದರು.

ಎಲ್ಲರೂ ಒಂದಾಗಿದ್ದಾಗ ಮಾತ್ರ ಕನ್ನಡನಾಡು ಬಲಿಷ್ಠವಾಗಿರುತ್ತದೆ. ಕರ್ನಾಟಕ ಎಂದರೆ ಅಖಂಡ ಕರ್ನಾಟಕವೇ ಹೊರತು ವಿಭಿನ್ನ ಕರ್ನಾಟಕವಲ್ಲ. ಯಾರದ್ದೋ ಆಶೀರ್ವಾದ, ಮಂತ್ರವಾದಿಯ ಬೂದಿಯಿಂದ ಕರ್ನಾಟಕ ಹುಟ್ಟಿದ್ದಲ್ಲ. ನಾಡಿನ ಏಕೀಕರಣಕ್ಕೆ ಹಲವು ಹೋರಾಟಗಾರರ ತ್ಯಾಗ, ರಕ್ತ, ಬಲಿದಾನದ ಐತಿಹಾಸಿಕ ಚರಿತ್ರೆಯಿದೆ. ಇದೀಗ 62 ವರ್ಷದ ಬಳಿಕ ನಾಡಿನ ಏಕತೆಗೆ ಆತಂಕ ಬಂದಿದೆ. ಜನಪ್ರತಿನಿಧಿಗಳು ತಮ್ಮ ಪ್ರಾಥಮಿಕ ಕರ್ತವ್ಯ, ಜವಾಬ್ದಾರಿ ನಿರ್ವಹಿಸದ ಪರಿಣಾಮ ನಾಡಿಗೆ ಈ ಸ್ಥಿತಿ ಬಂದಿದೆ ಎಂದರು.

ಉತ್ತರ ಕರ್ನಾಟಕದ ಸಮಸ್ಯೆಗಳ ಪರಿಹಾರಕ್ಕೆ ರಾಜ್ಯ ಒಡೆಯವುದೇ ಪರಿಹಾರ ಎನ್ನಲಾಗುತ್ತಿದೆ. ಕನ್ನಡ ನಾಡಿಗೆ ಅಸ್ಮಿತೆ, ಸ್ವಂತಿಕೆ, ಬಲ ಬರಬೇಕಾದರೆ ನಾವು ಒಂದಾಗಿರಬೇಕು. ಬಲ ಇದ್ದವರು ಮಾತ್ರ ಒಕ್ಕೂಟ ವ್ಯವಸ್ಥೆಯಲ್ಲಿ ಗುದ್ದಾಡಬಹುದು. ಆಂಧ್ರಪ್ರದೇಶ ಪ್ರತ್ಯೇಕ ರಾಜ್ಯವಾದ್ದರಿಂದ ತನ್ನ ಬಲ ಕಳೆದುಕೊಂಡಿತು. ಇಂದು ನಾಡಿಗೆ ಎದುರಾಗಿರುವ ಬಿಕ್ಕಟ್ಟು ಪರಿಹಾರಕ್ಕೆ ಜನಪ್ರತಿನಿಧಿಗಳು ಮುತ್ಸದ್ದಿತನ ಪ್ರದರ್ಶಿಸಬೇಕು. ಉತ್ತರ ಕರ್ನಾಟಕದ ಸಮಸ್ಯೆಗಳನ್ನು ಆಲಿಸಿ ಪರಿಹರಿಸಬೇಕು ಎಂದು ಆಗ್ರಹಿಸಿದರು.

ಕಾರ್ಯಕ್ರಮದಲ್ಲಿ ಸಾಹಿತಿ ಗೊ.ರು.ಚನ್ನಬಸಪ್ಪ, ಲೇಖಕ ವಸಂತ ಶೆಟ್ಟಿ, ಉತ್ತರ ಕರ್ನಾಟಕ ನಾಗರಿಕ ಸಂಘದ ಮಾಜಿ ಅಧ್ಯಕ್ಷ ಬಸವರಾಜ ದಂಡೂರ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News