‘ಪಹಣಿ’ ಲೋಪದೋಷ ಸರಿಪಡಿಸಲು ಕಂದಾಯ ಅದಾಲತ್: ಸಚಿವ ದೇಶಪಾಂಡೆ

Update: 2018-08-02 14:36 GMT

ಬೆಂಗಳೂರು, ಆ. 2: ಗಣಕೀಕೃತ ‘ಪಹಣಿ’ಗಳಲ್ಲಿರುವ ಲೋಪದೋಷಗಳನ್ನು ಸರಿಪಡಿಸಲು ಬೆಂಗಳೂರು ನಗರ ಜಿಲ್ಲೆ ಹೊರತುಪಡಿಸಿ ರಾಜ್ಯಾದ್ಯಂತ ಮುಂದಿನ ಆರು ತಿಂಗಳು ಕಂದಾಯ ಅದಾಲತ್ ನಡೆಸಬೇಕು ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಆದೇಶಿಸಿದ್ದಾರೆ.

ರಾಜ್ಯದ ಎಲ್ಲ ತಾಲೂಕುಗಳ ಗ್ರಾಮ ಲೆಕ್ಕಾಧಿಕಾರಿಗಳ ವೃತ್ತ ಮಟ್ಟದಲ್ಲಿ ಪಹಣಿಗಳಲ್ಲಿರುವ ತಪ್ಪುಗಳನ್ನು ತ್ವರಿತಗತಿಯಲ್ಲಿ ಸರಿಪಡಿಸಬೇಕು. ಈ ಉದ್ದೇಶಕ್ಕಾಗಿ ಆ.1ರಿಂದ ಜಾರಿಗೆ ಬರುವಂತೆ ಮುಂದಿನ 6 ತಿಂಗಳ ಕಾಲ, ಅಂದರೆ 2019ರ ಜನವರಿ 31ರ ವರೆಗೆ ಕಂದಾಯ ಅದಾಲತ್ ನಡೆಸಬೇಕೆಂದು ಸೂಚಿಸಿದ್ದಾರೆ.

ಈ ಹಿಂದೆ ನೀಡಿದ್ದ ಪಹಣಿ ತಿದ್ದುಪಡಿ ಅಧಿಕಾರವು ಎರಡು ದಿನಗಳ ಹಿಂದೆ, ಅಂದರೆ ಜುಲೈ 31ಕ್ಕೆ ಕೊನೆಗೊಂಡಿದೆ. ಇಷ್ಟರ ಮಧ್ಯೆ ಹೆಚ್ಚಿನ ಪಹಣಿಗಳಲ್ಲಿ ಕಾಲಂ 3 ಮತ್ತು ಕಾಲಂ 9ಕ್ಕೆ ಸಂಬಂಧಿಸಿದ ನಮೂದುಗಳಲ್ಲಿ ವ್ಯತ್ಯಾಸವಿರುವುದು ಕಂಡುಬಂದಿರುವ ಹಿನ್ನೆಲೆಯಲ್ಲಿ ಕಂದಾಯ ಅದಾಲತನ್ನು ಮತ್ತೆ ವಿಸ್ತರಿಸುವ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News