ಮೌಲ್ಯಾಧಾರಿತ ಶಿಕ್ಷಣದ ಗುಣಮಟ್ಟ ಉತ್ತಮಪಡಿಸಲು ಕ್ರಮ: ಸಚಿವ ಜಿ.ಟಿ.ದೇವೇಗೌಡ
ಬೆಂಗಳೂರು, ಆ.2: ಉನ್ನತ ಶಿಕ್ಷಣದಲ್ಲಿ ಮೌಲ್ಯಾಧಾರಿತ ಶಿಕ್ಷಣದ ಗುಣಮಟ್ಟ ಉತ್ತಮಪಡಿಸಲು ಅಗತ್ಯವಿರುವ ಕಾರ್ಯಕ್ರಮಗಳನ್ನು ರೂಪಿಸುವ ಸಂಬಂಧ ಪ್ರತಿಯೊಬ್ಬರ ಅಭಿಪ್ರಾಯ, ಸಲಹೆಗಳನ್ನು ಸ್ವೀಕರಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ತಿಳಿಸಿದರು.
ಗುರುವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳ ಕುಲಪತಿಗಳು, ರಿಜಿಸ್ಟ್ರಾರ್‌ಗಳು ಹಾಗೂ ಆರ್ಥಿಕ ಇಲಾಖೆಯ ಅಧಿಕಾರಿಗಳೊಂದಿಗೆ ನಡೆಸಿದ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಅವರು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ಕುಲಪತಿಯಿಂದ ಉಪನ್ಯಾಸಕರವರೆಗೆ, ಬೋಧನೆ, ಸಂಶೋಧನೆ, ತರಬೇತಿಯನ್ನು ಯಾವ ರೀತಿ ಉತ್ತಮಪಡಿಸಬೇಕು. ಅದೇರೀತಿ ಉನ್ನತ ಶಿಕ್ಷಣದಲ್ಲಿ ಕೌಶಲ್ಯಾಧಾರಿತ ಶಿಕ್ಷಣವನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ನಾವು ಯಾವ ರೀತಿಯ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂಬುದರ ಕುರಿತು ಇಂದಿನ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಅವರು ಹೇಳಿದರು. ಸಮಾಜದ ಕಟ್ಟಕಡೆಯ ವ್ಯಕ್ತಿಯ ಮಕ್ಕಳಿಗೂ ಉನ್ನತ ಶಿಕ್ಷಣ ಸಿಗುವಂತಾಗಬೇಕು. ವಿದ್ಯಾರ್ಥಿಗಳು ಯಂತ್ರಗಳಂತೆ ಪದವಿಗಳನ್ನು ಪಡೆಯುತ್ತಿದ್ದಾರೆ. ಆದರೆ, ಉದ್ಯೋಗ ಸಿಗದೆ ಹೈರಾಣಾಗಿದ್ದಾರೆ. ಇವತ್ತು ವೈದ್ಯಕೀಯ, ಇಂಜಿನಿಯರಿಂಗ್, ಬಿಸಿಎ, ಎಂಬಿಎ ಪದವಿಗಳನ್ನು ಪಡೆಯುತ್ತಿದ್ದಾರೆ. ಆದರೆ, ಎಷ್ಟು ಜನರಿಗೆ ಉದ್ಯೋಗ ಅವಕಾಶಗಳು ಸಿಕ್ಕಿವೆ ಎಂಬುದರ ಕುರಿತು ನಾವು ಆಲೋಚಿಸಬೇಕಿದೆ ಎಂದು ದೇವೇಗೌಡ ತಿಳಿಸಿದರು.
ಎಷ್ಟು ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸಿಕೊಡುವ ವಿಭಾಗಗಳನ್ನು ತೆರೆಯಲಾಗಿದೆ, ಬಯೋವೆುಟ್ರಿಕ್ ವ್ಯವಸ್ಥೆ, ಶೌಚಾಲಯ, ಕುಡಿಯುವ ನೀರು, ಪ್ರಯೋಗಾಲಯ, ಕಟ್ಟಡಗಳು ಸೇರಿದಂತೆ ಅಗತ್ಯವಿರುವ ಮೂಲಭೂತ ಸೌಕರ್ಯಗಳ ಕುರಿತು ಆ.15ರೊಳಗೆ ಪ್ರತ್ಯೇಕವಾಗಿ ವರದಿಗಳನ್ನು ಒದಗಿಸುವಂತೆ ಕುಲಪತಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಅವರು ಹೇಳಿದರು.
ಮುಖ್ಯಮಂತ್ರಿ ನಮ್ಮ ಇಲಾಖೆಗೆ ಈ ವರ್ಷ 250 ಕೋಟಿ ರೂ.ಒದಗಿಸಿದ್ದಾರೆ. ನಬಾರ್ಡ್‌ನಿಂದ 4 ಸಾವಿರ ಕೋಟಿ ರೂ.ಗಳನ್ನು ಪಡೆಯಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಕನಿಷ್ಠ 800 ಕೋಟಿ ರೂ.ಸಿಗುವ ನಿರೀಕ್ಷೆಯಿದೆ. ವಿಶ್ವ ಬ್ಯಾಂಕ್‌ನಿಂದಲೂ ಹೆಚ್ಚಿನ ಅನುದಾನ ಪಡೆಯಲು ಪ್ರಯತ್ನ ನಡೆಯುತ್ತಿದೆ ಎಂದು ದೇವೇಗೌಡ ತಿಳಿಸಿದರು.
ಐದು ಸಾವಿರ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಮುಖ್ಯಮಂತ್ರಿ ಹಾಗೂ ಹಣಕಾಸು ಇಲಾಖೆಯ ಪ್ರಧಾನ ಕಾರ್ಯದರ್ಶಿ ಒಪ್ಪಿಗೆ ನೀಡಿದ್ದಾರೆ. ಅತಿ ಶೀಘ್ರವಾಗಿ ಶಿಕ್ಷಕರ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡುವುದಲ್ಲದೆ, ಅವರಿಗೆ ಅಗತ್ಯ ತರಬೇತಿಯನ್ನು ನೀಡಲಾಗುವುದು ಎಂದು ಅವರು ಹೇಳಿದರು.
ಯೋಗಾ ತರಬೇತಿ: ವಿದ್ಯಾರ್ಥಿಗಳಿಗೆ ಯೋಗಾ ತರಬೇತಿ ನೀಡುವುದನ್ನು ಎಲ್ಲ ಕಾಲೇಜುಗಳು, ವಿಶ್ವವಿದ್ಯಾಲಯಗಳಲ್ಲಿ ಕಡ್ಡಾಯಗೊಳಿಸಲು ಉದ್ದೇಶಿಸಲಾಗಿದೆ. ಈಗಾಗಲೆ ಕೆಲವು ಕಾಲೇಜುಗಳಲ್ಲಿ ಯೋಗಾ ಡಿಪ್ಲೋಮಾ ಕೋರ್ಸುಗಳು ನಡೆಯುತ್ತಿವೆ. ಯೋಗಾವನ್ನು ಯಾವ ರೀತಿಯಲ್ಲಿ ಕಲಿಸಬೇಕು ಎಂಬುದರ ಕುರಿತು ವರದಿ ನೀಡಲು ಸಮಿತಿಯನ್ನು ರಚಿಸಲಾಗಿದೆ ಎಂದು ದೇವೇಗೌಡ ತಿಳಿಸಿದರು.
ಈ ವರ್ಷ ಪ್ರತಿಯೊಂದು ವಿಶ್ವವಿದ್ಯಾಲಯವು ಕನಿಷ್ಠ ಐದು ಹಳ್ಳಿಗಳನ್ನು ದತ್ತು ತೆಗೆದುಕೊಂಡು ಪರಿಸರ, ಸ್ವಚ್ಛತೆ, ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸಬೇಕು. ಒಬ್ಬ ಪದವಿ ವಿದ್ಯಾರ್ಥಿಯ ಐದು ವರ್ಷಗಳ ಶಿಕ್ಷಣಕ್ಕಾಗಿ ಸರಕಾರವು 15 ಲಕ್ಷ ರೂ., ಪ್ರಾಧ್ಯಾಪಕರಿಗೆ 60 ಸಾವಿರ ರೂ.ಗಳಿಂದ 2 ಲಕ್ಷ ರೂ.ವರೆಗೆ ವೇತನ ನೀಡುತ್ತಿದೆ ಎಂದು ಅವರು ಹೇಳಿದರು.
ಕೌಶಲ್ಯಾಭರಿತ ಶಿಕ್ಷಣಕ್ಕೆ ಒತ್ತು ನೀಡುವ ಹಿನ್ನೆಲೆಯಲ್ಲಿ ಕೈಗಾರಿಕೋದ್ಯಮಿಗಳನ್ನು ಒಟ್ಟುಗೂಡಿಸಿ, ಅವರಿಗೆ ಯಾವ ರೀತಿಯ ತರಬೇತಿ, ಶಿಕ್ಷಣ ಪಡೆದ ಮಾನವ ಸಂಪನ್ಮೂಲದ ಅಗತ್ಯವಿದೆ ಎಂಬುದರ ಕುರಿತು ಚರ್ಚೆ ಮಾಡಿ, ವಿಶ್ವವಿದ್ಯಾಲಯಗಳಲ್ಲಿ ಅದಕ್ಕೆ ಪೂರಕವಾದ ಕೋರ್ಸುಗಳನ್ನು ಆರಂಭಿಸಲು ಉದ್ದೇಶಿಸಲಾಗಿದೆ ಎಂದು ಅವರು ಹೇಳಿದರು.
ಬೆಂಗಳೂರು ವಿಶ್ವವಿದ್ಯಾಲಯವನ್ನು ಮೂರು ವಿಭಾಗಗಳನ್ನಾಗಿ ವಿಭಜಿಸಲಾಗಿದೆ. ಆದರೆ, ಈ ವಿವಿಗಳಿಗೆ ಅಗತ್ಯವಿರುವ ಸಿಬ್ಬಂದಿಗಳು ಹಾಗೂ ಆಸ್ತಿಗಳ ಹಂಚಿಕೆಯಾಗದೆ ಇರುವುದರಿಂದ ವಿದ್ಯಾರ್ಥಿಗಳು ಹಾಗೂ ಬೋಧಕ ವರ್ಗದವರಿಗೆ ಸಾಕಷ್ಟು ತೊಂದರೆಗಳು ಎದುರಾಗುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಇನ್ನು ಮೂರು ದಿನಗಳಲ್ಲಿ ಸಭೆ ಮಾಡಿ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದು ದೇವೇಗೌಡ ಭರವಸೆ ನೀಡಿದರು.