ಉ.ಕರ್ನಾಟಕ ಅಭಿವೃದ್ಧಿಗೆ ಒತ್ತಾಯಿಸಿ ವಿಧಾನಸೌಧಕ್ಕೆ ಮುತ್ತಿಗೆ: ಬಂಧನ

Update: 2018-08-02 15:21 GMT

ಬೆಂಗಳೂರು, ಆ.2: ಉತ್ತರ ಕರ್ನಾಟಕ ಅಭಿವೃದ್ಧಿಗೆ ಒತ್ತಾಯಿಸಿ ಕನ್ನಡ ಪರ ಸಂಘಟನೆಗಳು ವಿಧಾನಸೌಧ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದಾಗ, ಪೊಲೀಸರು ಹೋರಾಟಗಾರರನ್ನು ಬಂಧಿಸಿದ ಘಟನೆ ನಡೆದಿದೆ.

ಗುರುವಾರ ನಗರದ ಬಸವೇಶ್ವರ ವೃತ್ತದಿಂದ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ವಿವಿಧ ಸಂಘಟನೆಯ ಮುಖಂಡರು, ಉತ್ತರ ಕರ್ನಾಟಕ ಅಭಿವೃದ್ಧಿಗೆ ಸಮ್ಮಿಶ್ರ ಸರಕಾರ ಆದ್ಯತೆ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ವಿಧಾನಸೌಧ ಮುತ್ತಿಗೆ ಹಾಕಿ ಚಳುವಳಿ ನಡೆಸಿದರು.

ಉತ್ತರ ಕರ್ನಾಟಕಕ್ಕೆ ಪ್ರತ್ಯೇಕ ಮುಖ್ಯಮಂತ್ರಿ ನೇಮಕ ಹಾಗೂ ಈ ಭಾಗದ ಜನಪ್ರತಿನಿಧಿಗಳಿಗೆ ಉನ್ನತ ಸಚಿವ ಸ್ಥಾನ ನೀಡಬೇಕು ಸೇರಿದಂತೆ ವಿವಿಧ ಘೋಷಣೆಗಳನ್ನು ಕೂಗಿ ವಿಧಾನಸೌಧ ಮುತ್ತಿಗೆಗೆ ಯತ್ನಿಸಿದರು. ಈ ವೇಳೆ ಪೊಲೀಸರು, ಹೋರಾಟಗಾರರನ್ನು ವಶಕ್ಕೆ ಪಡೆದರು. ನಂತರ ವಾಟಾಳ್ ನಾಗರಾಜ್, ಸಾ.ರಾ. ಗೋವಿಂದ್, ಕುಮಾರ್‌ಗೌಡ ಸೇರಿ ಮತ್ತಿತರರನ್ನು ಪೊಲೀಸ್ ವಾಹನದಲ್ಲಿ ಕರೆದೊಯ್ದು ಬಳಿಕ ಬಿಡುಗಡೆ ಮಾಡಿದರು.

ಇದಕ್ಕೂ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ವಾಟಾಳ್ ನಾಗರಾಜ್, ಉತ್ತರ ಕರ್ನಾಟಕ ಅಭಿವೃದ್ಧಿ, ಅಲ್ಲಿನ ಸಮಸ್ಯೆಗಳನ್ನು ಚರ್ಚಿಸಲು ತುರ್ತು ವಿಧಾನಸಭಾ ಅಧಿವೇಶನ ಕರೆಯಬೇಕು. ಉ.ಕ ಅಭಿವೃದ್ಧಿಗೆ ಶಾಸನ ಸಭೆಯಲ್ಲಿ ನಿರ್ಣಯ ಆಗಬೇಕು ಎಂಬ ಉದ್ದೇಶಗಳನ್ನು ಈಡೇರಿಸಬೇಕೆಂದು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News