ಭಾರತ ಕ್ಲೀನ್‌ಚಿಟ್ ಕೊಟ್ಟ ಬಳಿಕವೇ ಚೋಕ್ಸಿಗೆ ಪೌರತ್ವ ನೀಡಲಾಗಿದೆ: ಆ್ಯಂಟಿಗುವಾ ಸ್ಪಷ್ಟನೆ

Update: 2018-08-03 11:39 GMT

ಹೊಸದಿಲ್ಲಿ, ಆ.3: ಪಿಎನ್‌ಬಿ ಬ್ಯಾಂಕ್ ಹಗರಣದ ಆರೋಪಿ ಮೆಹುಲ್ ಚೋಕ್ಸಿಗೆ ಭಾರತ ಸರಕಾರ ಕಳೆದ ವರ್ಷವೇ ಕ್ಲೀನ್‌ಚಿಟ್ ನೀಡಿದ್ದ ಹಿನ್ನೆಲೆಯಲ್ಲಿ ನಾವು ಅವರಿಗೆ ನಮ್ಮ ದೇಶದ ಪೌರತ್ವ ನೀಡಿದ್ದೇವೆ ಎಂದು ಆ್ಯಂಟಿಗುವಾ ಸರಕಾರ ಸ್ಪಷ್ಟನೆ ನೀಡಿದೆ.

 ಮುಂಬೈನ ಸ್ಥಳೀಯ ಪಾಸ್‌ಪೋರ್ಟ್ ಕಚೇರಿಯಿಂದ ಪೊಲೀಸರು ನೀಡಿರುವ ನಿರಾಕ್ಷೇಪಣಾ ಪತ್ರವನ್ನು ನಮಗೆ ಸಲ್ಲಿಸಲಾಗಿದ್ದು, ಅದರಲ್ಲಿ ಮೆಹುಲ್ ಚಿನುಭಾಯಿ ಚೋಕ್ಸಿ ವಿರುದ್ಧ ಯಾವುದೇ ಪ್ರತಿಕೂಲ ಮಾಹಿತಿಯಿಲ್ಲ ಎಂದು ಪ್ರಮಾಣೀಕರಿಸಲಾಗಿದೆ. ಬಂಡವಾಳ ಮಾರುಕಟ್ಟೆ ನಿಯಂತ್ರಕ ಸೆಬಿ ಕೂಡ ಚೋಕ್ಸಿಗೆ ಕ್ಲೀನ್‌ಚಿಟ್ ನೀಡಿದೆ ಎಂದು ಆ್ಯಂಟಿಗುವಾ ಸರಕಾರ ತಿಳಿಸಿದೆ.

 ಜ್ಯುವೆಲ್ಲರಿ ಉದ್ಯಮಿಗಳಾಗಿರುವ ಮೆಹುಲ್ ಚೋಕ್ಸಿ ಹಾಗೂ ಆತನ ಅಳಿಯ ನೀರವ್ ಮೋದಿ ನಕಲಿ ಗ್ಯಾರಂಟಿ ದಾಖಲೆಗಳನ್ನು ನೀಡಿ ಭಾರತದ ಎರಡನೇ ಅತಿದೊಡ್ಡ ಸಾರ್ವಜನಿಕ ಬ್ಯಾಂಕ್ ಪಂಜಾಬ್ ನ್ಯಾಶನಲ್ ಬ್ಯಾಂಕ್‌ಗೆ 13,500 ಕೋ.ರೂ. ವಂಚನೆ ಮಾಡಿ ವಿದೇಶಕ್ಕೆ ಪರಾರಿಯಾಗಿದ್ದಾರೆ.

ಚೋಕ್ಸಿಗೆ ಕಳೆದ ವರ್ಷದ ನವೆಂಬರ್‌ನಲ್ಲಿ ಆ್ಯಂಟಿಗುವಾದ ಪೌರತ್ವ ನೀಡಲಾಗಿದೆ. ಅವರು ಜನವರಿ ಮೊದಲ ವಾರದಲ್ಲಿ ಭಾರತ ಬಿಟ್ಟು ಪರಾರಿಯಾಗಿದ್ದು ಜ.15 ರಂದು ಆ್ಯಂಟಿಗುವಾದ ಪೌರತ್ವವನ್ನು ಪಡೆದಿದ್ದರು. ಜ.29 ರಂದು ಸಿಬಿಐ ಚೋಕ್ಸಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿತ್ತು. ಪಿಎನ್‌ಬಿ ಹಗರಣಕ್ಕೆ ಸಂಬಂಧಿಸಿ ಚೋಕ್ಸಿ ಹಾಗೂ ನೀರವ್ ಮೋದಿ ವಿರುದ್ಧ ತನಿಖೆ ಆರಂಭಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News