ದೊಡ್ಡ ಸುಸ್ತೀದಾರರ ವಿರುದ್ಧ ಕಠಿಣ ಕ್ರಮ: ಪಿಯೂಷ್ ಗೋಯಲ್

Update: 2018-08-03 14:38 GMT

ಹೊಸದಿಲ್ಲಿ, ಆ.3: ಬ್ಯಾಂಕ್‌ಗಳಿಂದ ಪಡೆದಿರುವ ಸಾಲವನ್ನು ಮರುಪಾವತಿಸದ ದೊಡ್ಡ ಸುಸ್ತೀದಾರರ ವಿರುದ್ಧ ಸರಕಾರ ಅತ್ಯಂತ ಕಠಿಣ ಕ್ರಮ ಕೈಗೊಂಡಿದೆ ಎಂದು ಕಾರ್ಪೊರೇಟ್ ವ್ಯವಹಾರಗಳ ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರೆ. ಲೋಕಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಡಿಯ ಭ್ರಾತೃಹರಿ ಮಹ್ತಾಬ್ ಅವರು ಎತ್ತಿದ ಪೂರಕ ಪ್ರಶ್ನೆಗೆ ಉತ್ತರಿಸಿದ ಸಚಿವ ಗೋಯಲ್, ಕಳೆದ ನಾಲ್ಕು ವರ್ಷಗಳಲ್ಲಿ ಕಾರ್ಪೊರೇಟ್ ಹಾಗೂ ಬ್ಯಾಂಕಿಂಗ್ ಆಡಳಿತದಲ್ಲಿ ಅಪಾರ ಸುಧಾರಣೆಯಾಗಿದೆ. ಇನ್ನುಮುಂದೆ ಬ್ಯಾಂಕ್‌ಗಳಿಂದ ಪಡೆಯುವ ಸಾಲವನ್ನು ಕಡ್ಡಾಯವಾಗಿ ಮರುಪಾವತಿಸಬೇಕು ಎಂಬುದನ್ನು ಬೃಹತ್ ಉದ್ಯಮ ಸಂಸ್ಥೆಗಳು ಅರಿತುಕೊಂಡಿವೆ ಎಂದರು.

ನರೇಂದ್ರ ಮೋದಿ ನೇತೃತ್ವದ ವ್ಯವಸ್ಥೆಯು ನಕಲಿ ಸಂಸ್ಥೆಗಳು ಹಾಗೂ ಬ್ಯಾಂಕ್ ಸಾಲ ಮರುಪಾವತಿಸದವರ ವಿರುದ್ಧ ಕ್ರಮ ಕೈಗೊಳ್ಳಲು ಬದ್ಧವಾಗಿದೆ . ಈ ಹಿಂದೆ ಬೃಹತ್ ಸಂಸ್ಥೆಗಳು ಸಾಲ ಮರುಪಾವತಿಯ ಜವಾಬ್ದಾರಿಯನ್ನು ಬ್ಯಾಂಕ್‌ಗಳು ಮಾತ್ರ ಹೊರಬೇಕು ಎಂದುಕೊಂಡಿದ್ದವು. ಆದರೆ ಈಗ ಇಂತಹ ಮನೋಭಾವ ಬದಲಾಗಿದೆ ಎಂದವರು ಹೇಳಿದರು. ಸುಮಾರು 2.97 ಲಕ್ಷ ನಕಲಿ(ನಿಷ್ಕ್ರಿಯ) ಸಂಸ್ಥೆಗಳನ್ನು ಮುಚ್ಚಲಾಗಿದೆ ಹಾಗೂ 2 ಲಕ್ಷಕ್ಕೂ ಹೆಚ್ಚಿನ ನಿಷ್ಕ್ರಿಯ ಸಂಸ್ಥೆಗಳ ಮೇಲೆ ನಿಗಾ ಇರಿಸಲಾಗಿದೆ . ಈ ಸಂಸ್ಥೆಗಳು ಕಾಗದದ ಮೇಲೆ ಮಾತ್ರ ಅಸ್ತಿತ್ವದಲ್ಲಿದ್ದು ಇವನ್ನು ಹವಾಲಾದಂತಹ ಚಟುವಟಿಕೆಗಳಿಗೆ ಬಳಸಲಾಗುತ್ತಿದೆ ಎಂದರು. ಗಂಭೀರ ಪ್ರಮಾಣದ ಕಾರ್ಪೊರೇಟ್ ವಂಚನೆ ಪ್ರಕರಣಗಳನ್ನು ನಿರ್ವಹಿಸಲು ‘ಗಂಭೀರ ವಂಚನೆ ತನಿಖಾ ಕಚೇರಿ’ಯನ್ನು ಆರಂಭಿಸಲಾಗಿದೆ. ಸಾಲ ಮರುಪಾವತಿಸದ ಸಂಸ್ಥೆಗಳ ನಿರ್ದೇಶಕರ ವಿರುದ್ಧವೂ ಸರಕಾರ ಕ್ರಮಗಳನ್ನು ಕೈಗೊಂಡಿದೆ. ಕಾರ್ಪೊರೇಟ್ ಆಡಳಿತವನ್ನು ಸುಧಾರಣೆಗೊಳಿಸಲು ಸರಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ ಎಂದು ವಿತ್ತ ಇಲಾಖೆಯನ್ನೂ ನಿರ್ವಹಿಸುತ್ತಿರುವ ಸಚಿವ ಗೋಯಲ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News