ಮಕ್ಕಾ: ಹಜ್ ನಿರ್ವಹಣಾ ಯೋಜನೆಗೆ ಚಾಲನೆ

Update: 2018-08-03 14:55 GMT

ಜಿದ್ದಾ, ಆ. 3: 2018ರ ಹಜ್‌ಗಾಗಿ ಮಕ್ಕಾ ವಲಯ ಅಭಿವೃದ್ಧಿ ಪ್ರಾಧಿಕಾರ ರೂಪಿಸಿರುವ ನಿರ್ವಹಣಾ ಯೋಜನೆಯನ್ನು ಸೌದಿ ಅರೇಬಿಯದ ದೊರೆ ಸಲ್ಮಾನ್‌ರ ಸಲಹಾಕಾರ, ಮಕ್ಕಾ ಗವರ್ನರ್ ಹಾಗೂ ಪ್ರಾಧಿಕಾರದ ಅಧ್ಯಕ್ಷ ರಾಜಕುಮಾರ ಖಾಲಿದ್ ಅಲ್-ಫೈಸಲ್ ಅಂಗೀಕರಿಸಿದ್ದಾರೆ.

ಪ್ರಾಧಿಕಾರದ ಉಸ್ತುವಾರಿ ವ್ಯಾಪ್ತಿಗೆ ಬರುವ ಪವಿತ್ರ ನಗರಗಳ ರೈಲ್ವೆ, ಜಮಾರತ್ ಸೌಕರ್ಯಗಳು, ಪವಿತ್ರ ನಗರಗಳ ಶೌಚಾಲಯಗಳ ನಿರ್ವಹಣೆ, ಹಜ್ ಸೇವೆಗಳ ಮೇಲೆ ನಿಗಾ ಹಾಗೂ ಹಜ್ ಸೇವೆಗಳಿಗಾಗಿ ಮಾಹಿತಿಕೋಶ (ಡಾಟಾಬೇಸ್)ವೊಂದರ ಸ್ಥಾಪನೆ ಮುಂತಾದ ಕಾರ್ಯಗಳ ದಕ್ಷತೆಯನ್ನು ಹೆಚ್ಚಿಸುವ ಉದ್ದೇಶವನ್ನು ಈ ಯೋಜನೆ ಹೊಂದಿದೆ.

ನಿರ್ವಹಣಾ ಯೋಜನೆಯನ್ನು ಜಾರಿಗೊಳಿಸಲು ಪ್ರಾಧಿಕಾರವು ತನ್ನೆಲ್ಲ ಆಡಳಿತಾತ್ಮಕ ಮತ್ತು ತಾಂತ್ರಿಕ ಉದ್ಯೋಗಿಗಳು ಸೇರಿ 14,000ಕ್ಕೂ ಅಧಿಕ ಸಿಬ್ಬಂದಿಯನ್ನು ನಿಯೋಜಿಸಿದೆ.

ತಶ್ರೀಕ್ ದಿನಗಳಲ್ಲಿ ಪವಿತ್ರ ನಗರದ ರೈಲುಗಳು 20 ಲಕ್ಷಕ್ಕೂ ಅಧಿಕ ಯಾತ್ರಿಕರನ್ನು ಸಾಗಿಸುತ್ತದೆ.

ಸ್ಕೌಟ್ ಕ್ಯಾಂಪ್‌ಗೆ ಚಾಲನೆ

 ಈ ವರ್ಷದ ಹಜ್ ಋತುವಿನಲ್ಲಿ ಮದೀನಾದಲ್ಲಿ ಯಾತ್ರಿಕರಿಗೆ ಸೇವೆ ಸಲ್ಲಿಸಲು ಸ್ಕೌಟ್ ಕ್ಯಾಂಪ್ ತನ್ನ ಚಟುವಟಿಕೆಗಳನ್ನು ಆರಂಭಿಸಿದೆ.

500 ಮುಖ್ಯ ಸ್ಕೌಟ್‌ಗಳು ಮತ್ತು ಸ್ಕೌಟ್ ಸದಸ್ಯರು ಪಾಲ್ಗೊಳ್ಳಲಿದ್ದು, ಇದರ ಉಸ್ತುವಾರಿಯನ್ನು ಸೌದಿ ಸ್ಕೌಟ್ಸ್ ಅಸೋಸಿಯೇಶನ್ ವಹಿಸಿದೆ.

ಸ್ಕೌಟ್ ಕ್ಯಾಂಪ್‌ನಲ್ಲಿ ಭಾಗವಹಿಸುವ ಎಲ್ಲ ಸದಸ್ಯರು ಅತ್ಯುತ್ತಮ ರೀತಿಯಲ್ಲಿ ಯಾತ್ರಿಕರಿಗೆ ಸೇವೆ ಸಲ್ಲಿಸುತ್ತಾರೆ ಎಂದು ಮದೀನಾದ ಶಿಕ್ಷಣ ನಿರ್ದೇಶಕ ನಾಸಿರ್ ಬಿನ್ ಅಬ್ದುಲ್ಲಾ ಅಲ್-ಅಬ್ದುಲ್‌ಕರೀಮ್ ಹೇಳಿದರು.

ಇರಾನ್ ಯಾತ್ರಿಕರಿಂದ ಪ್ರಶಂಸೆ

ಹಜ್ ಯಾತ್ರಿಕರ ಸೇವೆಗಾಗಿ ಸೌದಿ ಅರೇಬಿಯ ಮಾಡುತ್ತಿರುವ ಪ್ರಯತ್ನಗಳನ್ನು ಮದೀನಾಕ್ಕೆ ಆಗಮಿಸಿರುವ ಇರಾನ್ ಯಾತ್ರಿಕರು ಶ್ಲಾಘಿಸಿದ್ದಾರೆ.

ಸೇವೆಗಳು ಮತ್ತು ಸೌಲಭ್ಯಗಳನ್ನು ತಾರತಮ್ಯವಿಲ್ಲದೆ ನೀಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಸೌದಿ ಪ್ರವೇಶಿಸಿದ ಕೂಡಲೇ ತನಗೆ ನೀಡಲಾದ ಆತ್ಮೀಯ ಸ್ವಾಗತಕ್ಕಾಗಿ ಇರಾನ್‌ನ ಯಾತ್ರಿಕರೊಬ್ಬರು ಸೌದಿ ಅರೇಬಿಯಕ್ಕೆ ಕೃತಜ್ಞತೆ ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News