ಪ್ರಥಮ ಟೆಸ್ಟ್: ಭಾರತದ ಗೆಲುವಿಗೆ 194 ರನ್ ಗುರಿ

Update: 2018-08-03 14:58 GMT

ಎಜ್‌ಬಾಸ್ಟನ್, ಆ.4: ಪ್ರವಾಸಿ ಭಾರತ ತಂಡ ಇಂಗ್ಲೆಂಡ್ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯದ ಗೆಲುವಿಗೆ 194 ರನ್ ಗುರಿ ಪಡೆದಿದೆ.

ಮೂರನೇ ದಿನವಾದ ಶುಕ್ರವಾರ 1 ವಿಕೆಟ್ ನಷ್ಟಕ್ಕೆ 9 ರನ್‌ನಿಂದ ಎರಡನೇ ಇನಿಂಗ್ಸ್ ಮುಂದುವರಿಸಿದ ಆತಿಥೇಯ ಇಂಗ್ಲೆಂಡ್ ತಂಡ ಇಶಾಂತ್ ಶರ್ಮ ನೇತೃತ್ವದ ಬೌಲಿಂಗ್ ದಾಳಿಗೆ ತತ್ತರಿಸಿ 53 ಓವರ್‌ಗಳಲ್ಲಿ 180 ರನ್‌ಗೆ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿತು.

ಇಶಾಂತ್ ಶರ್ಮ(5-51) ,ಆಫ್-ಸ್ಪಿನ್ನರ್ ಅಶ್ವಿನ್(3-59)ಹಾಗೂ ಉಮೇಶ್ ಯಾದವ್(2-20) ದಾಳಿಗೆ ನಲುಗಿದ ಇಂಗ್ಲೆಂಡ್ ಒಂದು ಹಂತದಲ್ಲಿ 87 ರನ್‌ಗೆ 7 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು.

ಆಗ ತಂಡಕ್ಕೆ ಆಸರೆಯಾದ ಆಲ್‌ರೌಂಡರ್ ಸ್ಯಾಮ್ ಕರನ್(63 ರನ್,65 ಎಸೆತ, 9 ಬೌಂಡರಿ, 2 ಸಿಕ್ಸರ್) ಆದಿಲ್ ರಶೀದ್(16)ರೊಂದಿಗೆ 8ನೇ ವಿಕೆಟ್‌ಗೆ 48 ಹಾಗೂ ಸ್ಟುವರ್ಟ್ ಬ್ರಾಡ್(11) ಅವರೊಂದಿಗೆ 9ನೇ ವಿಕೆಟ್‌ಗೆ 41 ರನ್ ಜೊತೆಯಾಟದಲ್ಲಿ ಪಾಲ್ಗೊಂಡು ತಂಡದ ಮೊತ್ತವನ್ನು 180ಕ್ಕೆ ತಲುಪಿಸಿದರು.

ಅಲಿಸ್ಟರ್ ಕುಕ್ ಅವರು ಅಶ್ವಿನ್‌ಗೆ ಕ್ಲೀನ್‌ಬೌಲ್ಡಾಗುವ ಮೂಲಕ ಶೂನ್ಯಕ್ಕೆ ಔಟಾದರು. ಇನ್ನೋರ್ವ ಆರಂಭಿಕ ಜೆನ್ನಿಂಗ್ಸ್ 8 ರನ್ ಗಳಿಸಿ ಅಶ್ವಿನ್‌ಗೆ ವಿಕೆಟ್ ಒಪ್ಪಿಸಿದರು. ನಾಯಕ ಜೋ ರೂಟ್ 35 ಎಸೆತಗಳಲ್ಲಿ 14 ರನ್ ಗಳಿಸಿ ಅಶ್ವಿನ್‌ಗೆ ಮೂರನೇ ಬಲಿಯಾದರು.

ಡೇವಿಡ್ ಮಲಾನ್(20), ಬೈರ್‌ಸ್ಟೋವ್(28) ಹಾಗೂ ಬೆನ್ ಸ್ಟೋಕ್ಸ್‌ಗೆ(6)ರನ್ನು ಭೋಜನ ವಿರಾಮಕ್ಕೆ ಮೊದಲೇ ಪೆವಿಲಿಯನ್ ಹಾದಿ ತೋರಿಸಿದ್ದ ಇಶಾಂತ್ ಶರ್ಮ ಆ ಬಳಿಕ ಬಟ್ಲರ್(1) ಹಾಗೂ ಬ್ರಾಡ್ ವಿಕೆಟ್ ಉರುಳಿಸಿ ಐದು ಗೊಂಚಲು ಪಡೆದರು. ಉಮೇಶ್ ಯಾದವ್ ಅವರು ಕರನ್ ಹಾಗೂ ರಶೀದ್ ವಿಕೆಟ್ ಕಬಳಿಸಿದರು.

 ಇಂಗ್ಲೆಂಡ್ ಮೊದಲ ಇನಿಂಗ್ಸ್‌ನಲ್ಲಿ 287 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಭಾರತ ಮೊದಲ ಇನಿಂಗ್ಸ್‌ನಲ್ಲಿ 274 ರನ್ ಗಳಿಸಿತ್ತು. ಇಂಗ್ಲೆಂಡ್‌ಗೆ ಕೇವಲ 13 ರನ್ ಮುನ್ನಡೆ ಬಿಟ್ಟುಕೊಟ್ಟಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News