ಬಡವರಿಗೆ ಸರಕಾರಿ ಭೂಮಿ ಮಂಜೂರಾತಿ ಮಾಡಲು ಆಗ್ರಹ

Update: 2018-08-03 16:50 GMT

ಬೆಂಗಳೂರು, ಆ.3: ರಾಜ್ಯದಲ್ಲಿ ಕಂದಾಯ, ಗೋಮಾಳ ಹಾಗೂ ಇನ್ನಿತರೆ ಭೂಮಿಗಳಲ್ಲಿ ಬಗರ್‌ಹುಕುಂ ಸಾಗುವಳಿ ಮಾಡುತ್ತಿರುವ, ಹಾಗೆಯೇ ಸರಕಾರಿ ಜಾಗಗಳಲ್ಲಿ ಗುಡಿಸಲು, ಮನೆ ಕಟ್ಟಿಕೊಂಡು ವಾಸಿಸುತ್ತಿರುವ ಲಕ್ಷಾಂತರ ಬಡಜನರಿಗೆ ಭೂಮಿ ಮಂಜೂರಾತಿ ಮಾಡುವಂತೆ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಆಗ್ರಹಿಸಿದೆ.

ಶುಕ್ರವಾರ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯನ್ನು ಭೇಟಿ ಮಾಡಿದ ಹಿರಿಯ ಸ್ವಾತಂತ್ರ ಹೋರಾಟಗಾರ ಡಾ.ಎಚ್.ಎಸ್.ದೊರೆಸ್ವಾಮಿ ನೇತೃತ್ವದ ನಿಯೋಗವು ಈ ಸಂಬಂಧ ಮನವಿ ಸಲ್ಲಿಸಿತು.

ಬಡವರು ಭೂಮಿ ಮಂಜೂರಾತಿಗಾಗಿ ನಿಗದಿತ ನಮೂನೆಗಳಲ್ಲಿ ಅರ್ಜಿ ಸಲ್ಲಿಸಿ ಹಲವು ದಶಕಗಳಿಂದ ಸರಕಾರಿ ಕಚೇರಿಗಳಿಗೆ ಅಲೆಯುತ್ತಿದ್ದಾರೆ. ಸರಕಾರಗಳು ಅಕ್ರಮ-ಸಕ್ರಮ ಮಾಡುವುದಾಗಿ ಪದೇ ಪದೇ ಆಶ್ವಾಸನೆ ನೀಡುತ್ತಾ ಬಂದಿದ್ದರೂ ಇನ್ನೂ ಈ ಬಡವರಿಗೆ ಸ್ವಂತ ಮನೆ, ಜಮೀನು ದಕ್ಕಿಲ್ಲ ಎಂದು ನಿಯೋಗವು ಮುಖ್ಯಮಂತ್ರಿಗೆ ಮನವರಿಕೆ ಮಾಡಿಕೊಟ್ಟಿತು.

ಬೇಡಿಕೆಗಳು: ಉನ್ನತಮಟ್ಟದ ಸಮಿತಿಯ ಸಭೆಗಳು ತಪ್ಪದೆ ಕಾಲಕಾಲಕ್ಕೆ ಹಾಗೂ ಪರಿಣಾಮಕಾರಿಯಾಗಿ ನಡೆದು, ರಾಜ್ಯಾದ್ಯಂತ ವ್ಯಾಪಕವಾಗಿರುವ ಬಡವರ ಭೂಮಿ-ವಸತಿ-ನಿವೇಶನಗಳ ಸಮಸ್ಯೆ ಸಮಗ್ರವಾಗಿ ಪರಿಹಾರವಾಗುವಂತೆ ನೋಡಿಕೊಳ್ಳಬೇಕು. ಪ್ರತಿ ಜಿಲ್ಲೆಯಲ್ಲೂ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಹಾಯಕ ಆಯುಕ್ತರು, ತಹಶೀಲ್ದಾರ್‌ಗಳು ಮತ್ತು ಹೋರಾಟ ಸಮಿತಿಯ ಪ್ರತಿನಿಧಿಗಳನ್ನೊಂಡ ಇಂತಹ ಸಮಿತಿಗಳನ್ನು ರಚಿಸಬೇಕು.

ಫಾರಂ 50-53ರ ಅರ್ಜಿ ಸಲ್ಲಿಸಲು ಜನರಿಗೆ ಭೂಮಿಯ ಪಟ್ಟಾ, 94ಸಿ/94ಸಿಸಿ ಅರ್ಜಿದಾರರಿಗೆ ಹಕ್ಕುಪತ್ರಗಳನ್ನು ಕಾಲಮಿತಿಯೊಳಗೆ ನೀಡುವಂತೆ ಆದೇಶಗಳನ್ನು ಜಾರಿಗೊಳಿಸಬೇಕು. ಭೂ ಕಂದಾಯ ಕಾಯ್ದೆಗೆ ಕಳೆದ ಅಧಿವೇಶನದಲ್ಲಿ ತಿದ್ದುಪಡಿ ತಂದಿರುವ ಪ್ರಕಾರ ಬಗರ್‌ಹುಕುಂ ಸಾಗುವಳಿದಾರರಿಂದ ಹೊಸ ಅರ್ಜಿಗಳನ್ನು ಕೂಡಲೆ ಕರೆಯಲು ಕ್ರಮ ಕೈಗೊಳ್ಳಬೇಕು.

ಬೇಸಾಯ ಮಾಡಬಯಸುವ ಬಡವರಿಗೆ ಲಭ್ಯತೆಯನ್ನಾಧರಿಸಿ ತಲಾ ಎರಡು ಎಕರೆ ಭೂಮಿಯನ್ನು ಹಂತಹಂತವಾಗಿ ಹಂಚುವುದು, ಸರಕಾರಿ ಕಂದಾಯ ಭೂಮಿ, ಗೋಮಾಳ ಮತ್ತಿತರ ಭೂಮಿಗಳಲ್ಲಿ ಬದುಕಿಗಾಗಿ ಬಗರ್‌ಹುಕುಂ ಸಾಗುವಳಿ ಮಾಡುತ್ತಿರುವ ಬಡ ರೈತರ ಮೇಲೆ ಭೂ ಕಬಳಿಕೆ ವಿಶೇಷ ನ್ಯಾಯಾಲಯದಲ್ಲಿ ಕೇಸು ದಾಖಲಿಸುವುದನ್ನು ನಿಲ್ಲಿಸಿ ಆ ಭೂಮಿಗಳಿಗೆ ಪಟ್ಟಾ ನೀಡುವುದು. ಅರಣ್ಯ ಹಕ್ಕು ಕಾಯ್ದೆಯ ಅನ್ವಯ ಆದಿವಾಸಿಗಳಿಗೆ ಮತ್ತು ಇತರ ಪಾರಂಪರಿಕ ಅರಣ್ಯವಾಸಿಗಳಿಗೆ ಕಾಲಮಿತಿಯಲ್ಲಿ ಭೂಮಿ ಹಂಚುವುದು, ಹಲವಾರು ಜಿಲ್ಲೆಗಳಲ್ಲಿ ಬೀಳು ಬಿದ್ದಿದ್ದ ಅಮೃತಮಹಲ್ ಕಾವಲ್ ಭೂಮಿಗಳನ್ನು ಹತ್ತಾರು ವರ್ಷಗಳಿಂದ ಬಡವರು ಸಾಗುವಳಿ ಮಾಡುತ್ತಿದ್ದು, ಆ ಪೈಕಿ ಕೆಲವು ಸಾವಿರ ಎಕರೆಯನ್ನು ಈ ಹಿಂದೆಯೇ ಕಂದಾಯ ಇಲಾಖೆಗೆ ಹಸ್ತಾಂತರಿಸಲಾಗಿದ್ದರೂ ಅಧಿಕಾರಿಗಳು ಆ ರೈತರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿದ್ದಾರೆ. ಈ ಸಮಸ್ಯೆಯನ್ನು ರೈತರಿಗೆ ಅನುಕೂಲವಾಗುವಂತೆ ಬಗೆಹರಿಸಬೇಕು.

ಅರಣ್ಯ ಇಲಾಖೆಯ ವಶದಲ್ಲಿರುವ ಭೂಮಿಯೂ ಸೇರಿದಂತೆ ಸರಕಾರಿ ಜಾಗಗಳಲ್ಲಿ ಸಾಗುವಳಿ ಮಾಡುತ್ತಿರುವ, ಮನೆ ಕಟ್ಟಿಕೊಂಡು ವಾಸ ಮಾಡುತ್ತಿರುವ ಯಾವ ಬಡವರನ್ನೂ ಪರ್ಯಾಯ ವ್ಯವಸ್ಥೆ ಮಾಡದೆ ಒಕ್ಕಲೇಳಿಸದಂತೆ ಕ್ರಮ ಕೈಗೊಳ್ಳಬೇಕು. ಬಡವರಿಗೆ ಸೇರಬೇಕಾದ ಭೂಮಿಯನ್ನು ಕಾನೂನುಬಾಹಿರವಾಗಿ ಉಳ್ಳವರಿಗೆ ಪರಭಾರೆ ಮಾಡುವ, ಬಡವರಿಗೆ ಮನೆ-ಭೂಮಿ ದೊರಕಿಸಿಕೊಡುವಲ್ಲಿ ವಿಫಲವಾಗುವ ಅಧಿಕಾರಿ, ನೌಕರರ ವರ್ಗಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು.

ನಿಯೋಗದಲ್ಲಿ ದಲಿತ ಸಂಘಟನೆಯ ಮುಖಂಡರಾದ ಎನ್.ವೆಂಕಟೇಶ್, ವಿ.ನಾಗರಾಜ್, ಮರಿಯಪ್ಪ ಮತ್ತು ಉನ್ನತ ಸಮಿತಿಯ ಸದಸ್ಯರಾದ ಕುಮಾರ್ ಸಮತಳ, ಅಭಯ್, ಮಡಿಕೇರಿ ಜಿಲ್ಲಾ ಸಮಿತಿಯ ಅಮೀನ್ ಮೊಹ್ಸಿನ್ ತೆರಳಿದ್ದರು.

ಬೆಂಗಳೂರಿನ ಕೆರೆಗಳನ್ನು ರಕ್ಷಿಸಲು ರಾಜ್ಯ ಸರಕಾರ ಬದ್ಧವಾಗಿದೆ. ಹಾಗೂ ಅವುಗಳ ರಕ್ಷಣೆಗೆ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ. ಈಗಾಗಲೆ ಬಿಬಿಎಂಪಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಹಲವು ಸುತ್ತಿನ ಸಭೆಗಳನ್ನು ನಡೆಸಲಾಗಿದೆ. ಕೆರೆಗಳು ನಮ್ಮ ಜೀವನಾಡಿ, ಅವುಗಳನ್ನು ರಕ್ಷಿಸುವುದು ನಮ್ಮ ಆದ್ಯ ಕರ್ತವ್ಯ.
-ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News