ಆಂಡ್ರಾಯ್ಡ್ ಗೆ ನಂಬರ್ ಸೇರಿಸಿದ್ದನ್ನು ಒಪ್ಪಿಕೊಂಡ ಗೂಗಲ್

Update: 2018-08-04 08:41 GMT

ಹೊಸದಿಲ್ಲಿ, ಆ.4: ಸ್ಮಾರ್ಟ್ ಫೋನ್  ಬಳಕೆದಾರರ ಕಾಂಟಾಕ್ಟ್ ಲಿಸ್ಟ್ ನಲ್ಲಿ  ಭಾರತದ ವಿಶಿಷ್ಟ ಗುರುತು ಪ್ರಾಧಿಕಾರದ ಹೆಲ್ಪ್ ಲೈನ್ ಸಂಖ್ಯೆ ಎರಡು ದಿನಗಳ ಹಿಂದೆ ಡಿಫಾಲ್ಟ್ ಆಗಿ ಸೇರಿಸಲ್ಪಟ್ಟ ವಿಚಾರ ಭಾರೀ ವಿವಾದ ಸೃಷ್ಟಿಸಿತ್ತು. ಈ ಕುರಿತಂತೆ ಪ್ರಾಧಿಕಾರ ತಾನು ಯಾವುದೇ ಸ್ಮಾರ್ಟ್ ಫೋನ್ ತಯಾರಕರ ಅಥವಾ ಟೆಲಿಕಾಂ ಸೇವಾ ಪೂರೈಕೆದಾರರಿಗೆ ಈ ಬಗ್ಗೆ ಸೂಚನೆ ನೀಡಿಲ್ಲ ಎಂದು ಸ್ಪಷ್ಟೀಕರಣ ನೀಡಿತ್ತು. ಆದರೆ ಇದರ ಬೆನ್ನಿಗೇ ಪ್ರತಿಕ್ರಿಯೆ ನೀಡಿರುವ ಗೂಗಲ್ ತಾನು 2014ರಲ್ಲಿ ಭಾರತೀಯ ತಯಾರಕರಿಗೆ ನೀಡಿದ್ದ ತನ್ನ ಆಂಡ್ರಾಯ್ಡ್ ಸೆಟ್ ಅಪ್ ವಿಝಾರ್ಡ್ ಗೆ 112 ಎಮರ್ಜೆನ್ಸಿ ಸಂಖ್ಯೆ ಹಾಗೂ ವಿಶಿಷ್ಟ ಗುರುತು ಪ್ರಾಧಿಕಾರದ ಸಂಖ್ಯೆಯನ್ನು ಪ್ರಮಾದವಶಾತ್  ಸೇರಿಸಿದ್ದಾಗಿ ಒಪ್ಪಿಕೊಂಡಿದೆ.

“ಆಂಡ್ರಾಯ್ಡ್ ಸಾಧನಗಳೊಳಗೆ ಅಕ್ರಮವಾಗಿ ಪ್ರವೇಶಗೈದ ಪರಿಸ್ಥಿತಿ ಇದಲ್ಲ ಎಂದು ನಾವು ಎಲ್ಲರಿಗೂ  ಭರವಸೆ ನೀಡಲು ಬಯಸುತ್ತೇವೆ” ಎಂದು ಹೇಳಿರುವ ಗೂಗಲ್,  ಈ ಸಂಖ್ಯೆಗಳು ಕಾಣಿಸಿಕೊಂಡಿದ್ದರಿಂದ ಎದ್ದಿರುವ ಆತಂಕಕ್ಕೆ ಕ್ಷಮೆಯನ್ನೂ ಕೋರಿದೆ.

ಮುಂದೆ ಬಿಡುಗಡೆಗೊಳ್ಳಲಿರುವ ಸೆಟ್-ಅಪ್ ವಿಝಾರ್ಡ್ ನಲ್ಲಿ ಈ ಸಮಸ್ಯೆ ಪರಿಹಾರಕ್ಕೆ ಯತ್ನಿಸುವುದಾಗಿಯೂ ಇದು ಮುಂದಿನ ಕೆಲ ವಾರಗಳಲ್ಲಿ ಲಭ್ಯವಾಗಲಿದೆ ಎಂದು ಗೂಗಲ್ ಹೇಳಿದೆಯಲ್ಲದೆ ಬಳಕೆದಾರರು ತಾವಾಗಿಯೇ ತಮ್ಮ ಮೊಬೈಲ್ ಫೋನುಗಳಲ್ಲಿ ಕಂಡು ಬಂದಿರುವ ವಿಶಿಷ್ಟ ಗುರುತು ಪ್ರಾಧಿಕಾರದ ಹೆಲ್ಪ್ ಲೈನ್ ಸಂಖ್ಯೆಯನ್ನು ಡಿಲೀಟ್ ಮಾಡಬಹುದು ಎಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News