ಮೂಲಸೌಲಭ್ಯ ಕಲ್ಪಿಸಲು ರಕ್ಷಣಾ ಇಲಾಖೆ ಭೂಮಿ ಹಸ್ತಾಂತರಕ್ಕೆ ಸಮ್ಮತಿ

Update: 2018-08-04 14:34 GMT

ಬೆಂಗಳೂರು, ಆ. 4: ರಸ್ತೆ ನಿರ್ಮಾಣ, ಅಗಲೀಕರಣ ಸೇರಿದಂತೆ ಮೂಲಸೌಲಭ್ಯ ಕಲ್ಪಿಸಲು ಅಗತ್ಯ ಇರುವ ರಕ್ಷಣಾ ಭೂಮಿಯನ್ನು ಕೂಡಲೇ ಬಿಟ್ಟುಕೊಡಬೇಕು ಎಂದು ರಕ್ಷಣಾ ಇಲಾಖೆ ಅಧಿಕಾರಿಗಳಿಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಇಂದಿಲ್ಲಿ ಸೂಚನೆ ನೀಡಿದ್ದಾರೆ.

ಶನಿವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಗರದ ಮೂಲಸೌಕರ್ಯ ಅಭಿವೃದ್ಧಿಗಾಗಿ ರಕ್ಷಣಾ ಇಲಾಖೆಯ ಭೂಮಿಯನ್ನು ಪರಸ್ಪರ ವರ್ಗಾಯಿಸುವ ಸಂಬಂಧ ರಾಜ್ಯ ಸರಕಾರ ಹಾಗೂ ರಕ್ಷಣಾ ಇಲಾಖೆ ಅಧಿಕಾರಿಗಳ ಸಭೆಯ ಬಳಿಕ ಅವರು ಮಾತನಾಡಿದರು.

ಹತ್ತು ಯೋಜನೆಗಳಿಗೆ 488.42 ಕೋಟಿ ರೂ.ಮೊತ್ತದ 10 ಸಾವಿರ ಚದರಡಿ ಭೂಮಿ ನೀಡಲು ರಕ್ಷಣಾ ಇಲಾಖೆ ಸಮ್ಮತಿಸಿದ್ದು, ಅಷ್ಟೇ ಮೌಲ್ಯದ ಭೂಮಿಯನ್ನು ರಾಜ್ಯ ಸರಕಾರ ಬೇರೆ ಕಡೆ ನೀಡಲಿದೆ. ಇದಕ್ಕೆ ರಕ್ಷಣಾ ಇಲಾಖೆ ಸಮ್ಮತಿಸಿದೆ ಎಂದು ಅವರು ತಿಳಿಸಿದರು.

ರಕ್ಷಣಾ ಇಲಾಖೆಯ ಭೂಮಿಯಲ್ಲಿ ತಕ್ಷಣವೇ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಯಾವುದೇ ಅಭ್ಯಂತರ ಇಲ್ಲ ಎಂದ ಅವರು, ಇತ್ತೀಚೆಗೆ ಸಿಎಂ ಕುಮಾರಸ್ವಾಮಿ ದಿಲ್ಲಿಗೆ ಬಂದಿದ್ದ ವೇಳೆ ಈ ವಿಷಯ ಪ್ರಸ್ತಾಪಿಸಿದ್ದರು. ಹೀಗಾಗಿ ಇಂದು ಅವರನ್ನು ಖುದ್ದು ಭೇಟಿ ಮಾಡಿ ಸಮಸ್ಯೆ ಬಗೆಹರಿಸಲಾಗಿದೆ ಎಂದರು.

ಧನ್ಯವಾದಗಳು: 
ಆರಂಭಕ್ಕೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ, ಬೆಂಗಳೂರು ನಗರದ ರಸ್ತೆ, ಮೂಲ ಸೌಕರ್ಯಗಳಿಗಾಗಿ ರಕ್ಷಣಾ ಇಲಾಖೆಯ ಜಮೀನು ಅಗತ್ಯವಿತ್ತು. ನಾಲ್ಕೈದು ವರ್ಷದಿಂದ ರಕ್ಷಣಾ ಇಲಾಖೆಯ ಜಮೀನು ಬಿಟ್ಟುಕೊಡದ ಕಾರಣ 10 ಕಾಮಗಾರಿಗಳು ನೆನೆಗುದಿಗೆ ಬಿದ್ದಿದ್ದವು. ಈ ಸಂಬಂಧ ರಕ್ಷಣಾ ಸಚಿವರ ಗಮನಕ್ಕೆ ತಂದಿದ್ದೆ. ಅವರು ಸಕಾರಾತ್ಮಕವಾಗಿ ಸ್ಪಂದಿಸಿ ಜನಪರವಾದ ತೀರ್ಮಾನ ಕೈಗೊಂಡಿದ್ದಾರೆ. ಅವರಿಗೆ ಸರಕಾರದ ಪರವಾಗಿ ಹಾಗೂ ರಾಜ್ಯದ ಜನರ ಪರವಾಗಿ ರಕ್ಷಣಾ ಸಚಿವರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಕುಮಾರಸ್ವಾಮಿ ಹೇಳಿದರು.

ಹತ್ತು ಕಾಮಗಾರಿ: ಈಜೀಪುರ ಒಳವರ್ತುಲ ರಸ್ತೆಯಿಂದ ಸರ್ಜಾಪುರ ಮುಖ್ಯರಸ್ತೆ ವರೆಗಿನ 25 ಮೀಟರ್ ಉದ್ದದ ರಸ್ತೆ ನಿರ್ಮಾಣಕ್ಕೆ ಭೂಮಿ, ಬ್ಯಾಟರಾಯನಪುರದ ವಾರ್ಡ್-7 ಸಂಜೀವಿನಿನಗರದಿಂದ ರಾಷ್ಟ್ರೀಯ ಹೆದ್ದಾರಿ 7ರ ವರೆಗಿನ ಸಂಪರ್ಕ ರಸ್ತೆ, ಹೆಬ್ಬಾಳದ ಸರೋವರ ಲೇಔಟ್‌ನಿಂದ ಅಮ್ಕೋ ಲೇಔಟ್ ಮೂಲಕ ರಾಷ್ಟ್ರೀಯ ಹೆದ್ದಾರಿ-7ಕ್ಕೆ ಸಂಪರ್ಕ ರಸ್ತೆ ನಿರ್ಮಾಣ. ಹೊಸೂರು ಲಷ್ಕರ್ ರಸ್ತೆಯ ವಿಸ್ತರಣೆ, ಹಾಸ್‌ಮ್ಯಾಟ್ ರಸ್ತೆಯಿಂದ ವಿವೇಕ ನಗರದಲ್ಲಿರುವ ಐಎಸ್‌ಟಿ ಮುಖ್ಯರಸ್ತೆ ವರೆಗಿನ ವಿಸ್ತರಣೆ, ಅಗ್ರಾಮ್ ರಸ್ತೆ ವಿಸ್ತರಣೆ, ಕಾವಲು ಭೈರಸಂದ್ರ ಮುಖ್ಯರಸ್ತೆಯಿಂದ ಮೋದಿ ಗಾರ್ಡನ್ ವರೆಗೆ ಪರ್ಯಾಯ ರಸ್ತೆ ನಿರ್ಮಾಣಕ್ಕೆ ಭೂಮಿ ಹಸ್ತಾಂತರ.

ಈಜೀಪುರ ಮುಖ್ಯರಸ್ತೆಯಲ್ಲಿ ಒಳ ವರ್ತುಲ ರಸ್ತೆ ಜಂಕ್ಷನ್, ಸೋನಿ ವರ್ಲ್ಡ್ ಜಂಕ್ಷನ್ ಮತ್ತು ಕೇಂದ್ರಿಯ ಸದನ ಜಂಕ್ಷನ್ ವರೆಗೆ ಎಲಿವೇಟೆಡ್ ಕಾರಿಡಾರ್ ರಚನೆಗೆ ಅಗತ್ಯವಿರುವ ಭೂಮಿ, ಪರವಾನಿಗೆ ಆಧಾರದಲ್ಲಿ ಬಾಣಸವಾಡಿಯ ರೈಲ್ವೆ ಮೇಲ್ಸೇತುವೆ ಹೆಚ್ಚುವರಿ ಲೂಪ್ ರಸ್ತೆ ನಿರ್ಮಾಣ, ಬೈಯಪ್ಪನಹಳ್ಳಿಯಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಅಗತ್ಯ ಭೂಮಿ ಒದಗಿಸಲು ಸಮ್ಮತಿಸಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಮೇಯರ್ ಸಂಪತ್ ರಾಜ್, ಆಯುಕ್ತ ಮಂಜುನಾಥ್ ಪ್ರಸಾದ್, ಸರಕಾರದ ಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್, ನಗರಾಭಿವೃದ್ಧಿ ಇಲಾಖೆ ಮಹೇಂದ್ರ ಜೈನ್, ರಕ್ಷಣಾ ಇಲಾಖೆ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ಏರ್ ಶೋ ಆಯೋಜನೆಗೆ ಹಲವು ರಾಜ್ಯಗಳಿಂದ ಮನವಿ ಸಲ್ಲಿಸಲಾಗಿದ್ದು, ಈ ಬಗ್ಗೆ ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಏರ್ ಶೋಗೆ ಇನ್ನೂ ಸ್ಥಳ, ದಿನಾಂಕವನ್ನೇ ನಿಗದಿ ಮಾಡಿಲ್ಲ. ಸೂಕ್ತ ಸಮಯದಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು. ಬೆಂಗಳೂರಿನಿಂದ ಉತ್ತರ ಪ್ರದೇಶದ ಲಕ್ನೋಗೆ ಏರ್ ಶೋ ಸ್ಥಳಾಂತರ ಮಾಡಲಾಗಿದೆ ಎಂಬುದರಲ್ಲಿ ಯಾವುದೇ ಹುರುಳಿಲ್ಲ’
-ನಿರ್ಮಲಾ ಸೀತಾರಾಮನ್, ಕೇಂದ್ರ ರಕ್ಷಣಾ ಸಚಿವೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News