ಯಾವುದೇ ಕ್ಷಣದಲ್ಲಿ ಬಿಎಸ್‌ವೈ ಮತ್ತೆ ಸಿಎಂ ಆಗಬಹುದು: ಕೇಂದ್ರ ಸಚಿವ ಸದಾನಂದಗೌಡ

Update: 2018-08-04 15:05 GMT

ಬೆಂಗಳೂರು, ಆ. 4: ರಾಜಕಾರಣ ಎಂದೂ ನಿಂತ ನೀರಲ್ಲ. ಯಾವುದೇ ಕ್ಷಣದಲ್ಲಿ ರಾಜ್ಯದಲ್ಲಿನ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಬೀಳಬಹುದು. ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿ ಆಗಬಹುದು ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹೇಳಿದ್ದಾರೆ.

ಶನಿವಾರ ಪಕ್ಷದ ಕಚೇರಿಯಲ್ಲಿ ಏರ್ಪಡಿಸಿದ್ದ ನಗರ ಜಿಲ್ಲಾ ಕಾರ್ಯಕಾರಿಣಿ ಉದ್ಘಾಟಿಸಿ ಮಾತನಾಡಿದ ಅವರು, ಉತ್ತಮ ಮಳೆಯಾಗಿ ಜಲಾಶಯಗಳು ಭರ್ತಿಯಾದಾಗ ಕ್ರಸ್ಟ್ ಗೇಟ್ ತೆರೆದು ನೀರು ಹೊರ ಬಿಡುವಂತೆ ಯಾವುದೇ ಕ್ಷಣದಲ್ಲಿ ಸರಕಾರ ಬಿದ್ದರೂ ಅಚ್ಚರಿ ಇಲ್ಲ ಎಂದರು.

ನಗರಸಭೆ, ಪುರಸಭೆ ಸೇರಿದಂತೆ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಶೇ.70ರಷ್ಟು ಸ್ಥಾನಗಳನ್ನು ಗಳಿಸುವ ವಿಶ್ವಾಸವಿದೆ. ಈ ಚುನಾವಣೆಯಲ್ಲಿ ಜನತೆ ಜೆಡಿಎಸ್-ಕಾಂಗ್ರೆಸ್‌ಗೆ ಪಾಠ ಕಲಿಸಲಿದ್ದಾರೆಂದ ಅವರು, ಮಾಧ್ಯಮಗಳ ಸುದ್ದಿಗಳಿಗೆ ಕಿವಿಗೊಡಬೇಡಿ. ಅವರು ಸುದ್ದಿಗಳಿಗೆ ಮಸಾಲೆ ಬೆರೆಸುತ್ತಾರೆ. ಆದರೆ, ನಮ್ಮ ಕಾರ್ಯಕರ್ತರೇ ನಮಗೆ ಮಾಧ್ಯಮಗಳು. ಹೀಗಾಗಿ ಅವರ ಮೇಲೆ ನಂಬಿಕೆ ಇಡಿ ಎಂದರು.

ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರ ಹಾಗೂ ಹಗರಣಗಳು ಮೈತ್ರಿ ಸರಕಾರದಲ್ಲಿ ಮುಂದುವರೆದಿದೆ. ಮೊದಲು ಅವರೊಬ್ಬರೆ ಲೂಟಿ ಮಾಡುತ್ತಿದ್ದರು. ಇದೀಗ ಅವರಿಬ್ಬರೂ ಸೇರಿ ಲೂಟಿಗೆ ಮುಂದಾಗಿದ್ದಾರೆ. ಇವರು ಭ್ರಷ್ಟರ ಕ್ಯಾಪ್ಟನ್‌ಗಳು ಎಂದು ಲೇವಡಿ ಮಾಡಿದರು.

ನೆರೆಯ ದೇಶಗಳಿಂದ ಬರುವ ವಲಸಿಗರನ್ನು ಇರಿಸಿಕೊಳ್ಳಬಾರದೆಂಬ ಆದೇಶ ಸುಪ್ರೀಂ ಕೋರ್ಟ್ ನೀಡಿದೆ. ಬೆಂಗಳೂರಿನಲ್ಲೂ ಸುಮಾರು 1.5ಲಕ್ಷದಷ್ಟು ಅಕ್ರಮ ಬಾಂಗ್ಲಾ ವಲಸಿಗರಿದ್ದಾರೆ. ಚಿಕ್ಕಮಗಳೂರಿನ ಕಾಫಿ ತೋಟಗಳಲ್ಲೂ ಮೂರ್ನಾಲ್ಕು ಲಕ್ಷ ಮಂದಿ ಅಕ್ರಮ ವಲಸಿಗರು ನೆಲೆಸಿದ್ದಾರೆಂಬ ಮಾಹಿತಿ ಇದೆ. ಯಾವುದೇ ಕಾರಣಕ್ಕೂ ದೇಶದ್ರೋಹಿಗಳನ್ನು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News