ವಕ್ಫ್ ಆಸ್ತಿಗಳ ಸಂರಕ್ಷಣೆ ಹಾಗೂ ಅಭಿವೃದ್ಧಿಗೆ ಆದ್ಯತೆ ನೀಡಲು ಸಚಿವ ಝಮೀರ್‌ ಅಹ್ಮದ್ ಕರೆ

Update: 2018-08-04 14:53 GMT

ಬೆಂಗಳೂರು, ಆ.4: ರಾಜ್ಯಾದ್ಯಂತ ವಕ್ಫ್ ಸಂಸ್ಥೆಗಳ ಅಧೀನದಲ್ಲಿರುವ ಆಸ್ತಿಗಳ ಸಂರಕ್ಷಣೆ ಹಾಗೂ ಅಭಿವೃದ್ಧಿಗೆ ಮುತವಲ್ಲಿಗಳು ಆದ್ಯತೆ ನೀಡಬೇಕು ಎಂದು ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಸಚಿವ ಬಿ.ಝೆಡ್. ಝಮೀರ್‌ ಅಹ್ಮದ್‌ ಖಾನ್ ಕರೆ ನೀಡಿದ್ದಾರೆ.

ಶನಿವಾರ ವಿಕಾಸಸೌಧದ ಸಮ್ಮೇಳನ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವಕ್ಫ್ ಸಂಸ್ಥೆಗಳ ಮುತವಲ್ಲಿಗಳು ಹಾಗೂ ವಕ್ಫ್ ಅಧಿಕಾರಿಗಳ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ವಕ್ಫ್ ಸಂಸ್ಥೆಗಳಿಗೆ ಬರುವ ಆದಾಯದಿಂದ ಸಮುದಾಯದ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ನೆರವು ನೀಡಬೇಕು. ವಕ್ಫ್ ಆಸ್ತಿಗಳನ್ನು ಅಭಿವೃದ್ಧಿಪಡಿಸಿ, ಅವುಗಳನ್ನು ಆದಾಯದ ಮೂಲವನ್ನಾಗಿ ಪರಿವರ್ತಿಸಿದರೆ, ಸರಕಾರದ ಮುಂದೆ ನಾವು ಬೇಡಿಕೆಗಳನ್ನು ಇಡುವ ಅಗತ್ಯವೇ ಇರುವುದಿಲ್ಲ. ಆದರೆ, ದುರಾದೃಷ್ಟವಶಾತ್ ಈ ಬಗ್ಗೆ ನಾವು ಗಂಭೀರವಾಗಿ ಆಲೋಚನೆ ಮಾಡುತ್ತಿಲ್ಲ ಎಂದು ಅವರು ಹೇಳಿದರು.

ಇದಲ್ಲದೆ, ಮುತವಲ್ಲಿಗಳು ವಕ್ಫ್ ಸಂಸ್ಥೆಗಳ ಆದಾಯದಿಂದ ವಕ್ಫ್ ಬೋರ್ಡ್‌ಗೆ ನೀಡಬೇಕಿರುವ ದೇಣಿಗೆಯನ್ನು ಕಾಲಮಿತಿಯೊಳಗೆ ಪಾವತಿಸುವುದನ್ನು ರೂಢಿಸಿಕೊಳ್ಳಬೇಕು. ವಕ್ಫ್ ಆಸ್ತಿಗಳನ್ನು ಯಾರಾದರೂ ಒತ್ತುವರಿ ಮಾಡಿಕೊಂಡಿದ್ದರೆ ಅದನ್ನು ತೆರವುಗೊಳಿಸಲು ವಕ್ಫ್ ಬೋರ್ಡ್‌ನ ನೆರವು ಪಡೆಯಬೇಕು ಎಂದು ಝಮೀರ್‌ಅಹ್ಮದ್ ಸೂಚನೆ ನೀಡಿದರು.

ಆಗಸ್ಟ್ 22ರಂದು ರಾಜ್ಯದ ಎಲ್ಲ ಜಿಲ್ಲೆಗಳು ಹಾಗೂ ತಾಲೂಕುಗಳ ಪ್ರವಾಸ ಕೈಗೊಳ್ಳಲಿದ್ದು, ಈ ಸಂದರ್ಭದಲ್ಲಿ ವಕ್ಫ್ ಸಂಸ್ಥೆಗಳು ಸ್ಥಳೀಯವಾಗಿ ಎದುರಿಸುತ್ತಿರುವ ಸಮಸ್ಯೆಗಳನ್ನು ಅಲ್ಲಿಯೇ ಬಗೆಹರಿಸಲು ಜಿಲ್ಲೆಯ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ಅವರು ಹೇಳಿದರು.

ಪ್ರಮುಖವಾಗಿ ಖಬರಸ್ಥಾನ್ ಹಾಗೂ ಈದ್ಗಾಗಳಿಗೆ ಕಾಂಪೌಂಡ್ ನಿರ್ಮಿಸಿ, ಒತ್ತುವರಿಯಾಗದಂತೆ ತಡೆಯಲು ಕ್ರಮ ಕೈಗೊಳ್ಳುವಂತೆ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು. ಈ ಹಿಂದೆ ನಾನು ಅಲ್ಪ ಅವಧಿಗೆ ಸಚಿವನಾಗಿದ್ದಾಗ ಈ ಕೆಲಸಕ್ಕಾಗಿ ವಕ್ಫ್‌ಬೋರ್ಡ್‌ನಲ್ಲಿ ಇದ್ದ 13.90 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿಸಿದ್ದೆ. ಅಲ್ಲದೆ, ಮುಖ್ಯಮಂತ್ರಿಯಿಂದ ಹೆಚ್ಚುವರಿಯಾಗಿ 9 ಕೋಟಿ ರೂ.ಗಳನ್ನು ಮಂಜೂರು ಮಾಡಿಸಿದ್ದೆ ಎಂದು ಝಮೀರ್‌ ಅಹ್ಮದ್ ಸ್ಮರಿಸಿದರು.

ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಇರುವ ಕಾರ್ಯಕ್ರಮಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ಹಾಗೂ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಅಲ್ಪಸಂಖ್ಯಾತರ ನಿರ್ದೇಶನಾಲಯ ಶ್ರಮಿಸುತ್ತಿರುವುದರ ಕುರಿತು ನಿರ್ದೇಶಕ ಅಕ್ರಮ್ ಪಾಷಾರಿಗೆ ಸಚಿವರು ಇದೇ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಿದರು.

ಅಲ್ಪಸಂಖ್ಯಾತರ ನಿರ್ದೇಶನಾಲಯದ ಕಾರ್ಯಕ್ರಮಗಳ ವಿವರಣೆ ನೀಡಿದ ನಿರ್ದೇಶಕ ಅಕ್ರಮ್ ಪಾಷಾ, ನಮಗೆ ಸರಕಾರವು 2500 ಕೋಟಿ ರೂ.ಗಳ ಬಜೆಟ್ ಒದಗಿಸಿದೆ. ನಿರ್ದೇಶನಾಲಯದ ಅಡಿಯಲ್ಲಿ 30 ಯೋಜನೆಗಳು ಚಾಲ್ತಿಯಲ್ಲಿದ್ದು, ಈ ಪೈಕಿ 22 ಯೋಜನೆಗಳು ಶಿಕ್ಷಣಕ್ಕೆ ಸಂಬಂಧಿಸಿದ್ದಾಗಿದೆ ಎಂದರು.

ಅಲ್ಪಸಂಖ್ಯಾತರ ನಿರ್ದೇಶನಾಲಯವು ಶಿಕ್ಷಣ ಕ್ಷೇತ್ರದಲ್ಲಿ ಮಾಡುತ್ತಿರುವ ಕೆಲಸವು ಇಡೀ ದೇಶದಲ್ಲೆ ಪ್ರಥಮ ಸ್ಥಾನದಲ್ಲಿದೆ. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಸುಮಾರು 14 ಲಕ್ಷ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ ಎಂದು ಅಕ್ರಮ್ ಪಾಷಾ ಹೇಳಿದರು.

ಎಸೆಸೆಲ್ಸಿವರೆಗೆ ಪ್ರೀ ಮೆಟ್ರಿಕ್, ಪಿಯುಸಿ ನಂತರ ಪೋಸ್ಟ್ ಮೆಟ್ರಿಕ್, ವಿದೇಶಗಳಲ್ಲಿ ಉನ್ನತ ಶಿಕ್ಷಣ ಪಡೆಯಲು ವಿದ್ಯಾರ್ಥಿವೇತನ, ಪಿಎಚ್‌ಡಿ, ಎಂ.ಫಿಲ್ ಮಾಡುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಪತ್ರಿಕೋದ್ಯಮದಲ್ಲಿ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳಿಗೆ ತರಬೇತಿಯೊಂದಿಗೆ ವಿದ್ಯಾರ್ಥಿವೇತನ ನೀಡಲಾಗುತ್ತಿದೆ. ಎಲ್ಲ ವಿದ್ಯಾರ್ಥಿಗಳಿಗೆ ಆನ್‌ಲೈನ್ ಮೂಲಕ ಅವರ ಖಾತೆಗಳಿಗೆ ಹಣ ಜಮೆ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.

ಸಭೆಯ ಅಧ್ಯಕ್ಷತೆಯನ್ನು ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ ಕಾರ್ಯದರ್ಶಿ ಮುಹಮ್ಮದ್ ಮೊಹ್ಸಿನ್ ವಹಿಸಿದ್ದರು. ವಕ್ಫ್ ಬೋರ್ಡ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಝುಲ್ಫೀಖಾರ್ ಉಲ್ಲಾ, ಮುಜೀಬುಲ್ಲಾ ಝಫಾರಿ, ನಿವೃತ್ತ ಐಪಿಎಸ್ ಅಧಿಕಾರಿ ಯು.ನಿಸಾರ್‌ ಅಹ್ಮದ್, ಮುಹಮ್ಮದ್ ಉಬೇದುಲ್ಲಾ ಶರೀಫ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News