ಮೈತ್ರಿ ಸರಕಾರದಿಂದ ವರ್ಗಾವಣೆ ದಂಧೆ: ಯಡಿಯೂರಪ್ಪ ಆರೋಪ

Update: 2018-08-04 15:05 GMT

ಬೆಂಗಳೂರು, ಆ. 4: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಭ್ರಷ್ಟಾಚಾರ ಮತ್ತು ವರ್ಗಾವಣೆ ದಂಧೆಯಲ್ಲಿ ತೊಡಗಿದೆ. ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಸಂಪೂರ್ಣ ಸ್ಥಗಿತಗೊಂಡಿವೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಆರೋಪ ಮಾಡಿದ್ದಾರೆ.

ಶನಿವಾರ ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ಏರ್ಪಡಿಸಿದ್ದ ಬೆಂಗಳೂರು ನಗರ ಜಿಲ್ಲಾ ಕಾರ್ಯಕಾರಿಣಿ ಉದ್ಘಾಟಿಸಿ ಅವರು ಮಾತನಾಡಿ,ಎಲ್ಲ ಇಲಾಖೆಗಳಲ್ಲೂ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಹಸ್ತಕ್ಷೇಪ ಮಾಡುತ್ತಿದ್ದು, ಇದರಿಂದ ಮೈತ್ರಿ ಸರಕಾರ ಅಕ್ಷರಶಃ ಗೊಂದಲದ ಗೂಡಾಗಿದೆ ಎಂದು ಲೇವಡಿ ಮಾಡಿದರು.

ನನ್ನ ಪ್ರಶ್ನೆಗಳಿಗೆ ಉತ್ತರಿಸಿಲ್ಲ: ಉತ್ತರ ಕರ್ನಾಟಕ ಅಭಿವೃದ್ಧಿ ಸಂಬಂಧ ನನ್ನ ಮೂರು ಪ್ರಶ್ನೆಗಳಿಗೆ ಕುಮಾರಸ್ವಾಮಿ ಅಥವಾ ದೇವೇಗೌಡ ಉತ್ತರವನ್ನೇ ನೀಡಿಲ್ಲ. ಆದರೆ, ನಾನು ಪ್ರತ್ಯೇಕ ರಾಜ್ಯ ಹೋರಾಟಗಾರರಿಗೆ ಕುಮ್ಮಕ್ಕು ನೀಡುತ್ತಿದ್ದೇನೆಂದು ಅವರು ಟೀಕಿಸಿದ್ದಾರೆ. ಆದರೆ, ಬಿಜೆಪಿ ಎಂದೂ ಅವಕಾಶವಾದಿ ರಾಜಕಾರಣ ಮಾಡಿಲ್ಲ ಎಂದು ತಿರುಗೇಟು ನೀಡಿದರು.

ರಾಜ್ಯದಲ್ಲಿ ಹಿಂದೂಗಳಿಗೆ ಅವಮಾನ ಮಾಡುವ ಘಟನೆಗಳು ನಡೆಯುತ್ತಿವೆ. ಧಾರ್ಮಿಕ ಸಂಸ್ಥೆಗಳ ಶಿಕ್ಷಣ ಸಂಸ್ಥೆಗಳ ಅಧಿಕಾರವನ್ನೂ ಕಿತ್ತುಕೊಳ್ಳಲಾಗಿದೆ. ರಾಜ್ಯದಲ್ಲಿ ನಮ್ಮನ್ನು 135 ಕ್ಷೇತ್ರಗಳಲ್ಲಿ ಜನರು ಗೆಲ್ಲಿಸಲು ಸಿದ್ಧ ಇದ್ದರು. ಬೆಂಗಳೂರಿನಲ್ಲಿ 16ರಿಂದ 18 ಸ್ಥಾನ ಗೆಲ್ಲುವ ಅವಕಾಶವಿತ್ತು. ನಮ್ಮ ತಪ್ಪಿನಿಂದ ಕಡಿಮೆ ಸ್ಥಾನಗಳು ಬಂದವು. ಅಭಿವೃದ್ಧಿ ಅವಕಾಶದಿಂದ ಜನರು ವಂಚಿತರಾದರು ಎಂದರು.

ಮಾಜಿ ಸಚಿವ ಆರ್.ಅಶೋಕ್ ಮಾತನಾಡಿ, ಮೈತ್ರಿ ಸರಕಾರ ಎಷ್ಟು ದಿನ ಇರುತ್ತದೆ ಎಂಬ ಬಗ್ಗೆ ಕುಮಾರಸ್ವಾಮಿಯವರಿಗೆ ಸ್ಪಷ್ಟತೆ ಇಲ್ಲ. ಅವರು ಸಿಎಂ ಆಗಿ 70 ದಿನಗಳು ಕಳೆದವು. ಮಗನ ಸಿನಿಮಾ ಟೀಸರ್ ಬಿಡುಗಡೆಗೆ ರಾಮನಗರಕ್ಕೆ ಹೋಗಿದ್ದರು. ಅವರು ಬೆಂಗಳೂರು ಮತ್ತು ರಾಮನಗರಕ್ಕೆ ಸೀಮಿತ ಎಂದು ಟೀಕಿಸಿದರು.

ಯಾವುದೇ ಪೂರ್ವ ಸಿದ್ಧತೆ ಇಲ್ಲದೆ ಬೆಂಗಳೂರಿನಲ್ಲಿ ಎಲಿವೇಟೆಡ್ ಕಾರಿಡಾರ್ ಯೋಜನೆ ಪ್ರಕಟಿಸಲಾಗಿದೆ. ಇದೀಗ ಸಾರ್ವಜನಿಕರ ವಿರೋಧದಿಂದ ಯೋಜನೆ ಕೈಬಿಡಲು ಮುಂದಾಗಿದ್ದಾರೆ. ಎಲ್ಲ ಯೋಜನೆಗಳ ಸ್ಥಿತಿಯೂ ಇದೇ ರೀತಿ ಆಗಲಿದೆ ಎಂದು ಭವಿಷ್ಯ ನುಡಿದರು.

ಸಭೆಯಲ್ಲಿ ಕೇಂದ್ರ ಸಚಿವ ಸದಾನಂದಗೌಡ, ಸಂಸದ ಪಿ.ಸಿ.ಮೋಹನ್, ಶಾಸಕ ವಿಶ್ವನಾಥ್, ಮಾಜಿ ಶಾಸಕ ಮುನಿರಾಜು, ಮೇಲ್ಮನೆ ಸದಸ್ಯ ರವಿಕುಮಾರ್ ಸೇರಿದಂತೆ ಪಕ್ಷದ ಪದಾಧಿಕಾರಿಗಳು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News