ಆಸ್ತಿ ಮಾಲಕತ್ವದ ಹಕ್ಕು ದಾಖಲೆಗಳ ಯೋಜನೆ ಶೀಘ್ರ ಜಾರಿ: ಸಚಿವ ದೇಶಪಾಂಡೆ

Update: 2018-08-04 15:07 GMT

ಬೆಂಗಳೂರು, ಆ.4: ನಗರ ಪ್ರದೇಶಗಳಲ್ಲಿರುವ ಆಸ್ತಿಗಳ ಮಾಲಕತ್ವದ ಹಕ್ಕು ದಾಖಲೆಗಳನ್ನು ಸಿದ್ಧಪಡಿಸುವಂತಹ ಮಹತ್ವದ ಯೋಜನೆ(ಯುಪಿಓಆರ್)ಯನ್ನು ರಾಜ್ಯದೆಲ್ಲೆಡೆ ಕ್ಷಿಪ್ರ ಗತಿಯಲ್ಲಿ ಜಾರಿಗೆ ತರಲಾಗುವುದು ಎಂದು ಕಂದಾಯ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ.

ಕಂದಾಯ ಇಲಾಖೆಯ ವ್ಯಾಪ್ತಿಯಲ್ಲಿರುವ ಭೂಮಾಪನ ಮತ್ತು ಭೂದಾಖಲೆಗಳ ಇಲಾಖೆಯು ಅನುಷ್ಠಾನಗೊಳಿಸುತ್ತಿರುವ ಈ ಯೋಜನೆಗೆ ಮೊದಲ ಸುತ್ತಿನಲ್ಲಿ ಮೈಸೂರು, ಶಿವಮೊಗ್ಗ ಮತ್ತು ಮಂಗಳೂರು ನಗರಗಳಲ್ಲಿ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.

1964ರ ಕರ್ನಾಟಕ ಭೂಕಂದಾಯ ಅಧಿನಿಯಮ ಮತ್ತು ನಿಯಮಾವಳಿ 1966ರ ಅನ್ವಯ ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ಈ ಯೋಜನೆಯಡಿ, ನಗರ ಪ್ರದೇಶಗಳ ವ್ಯಾಪ್ತಿಯಲ್ಲಿರುವ ಪ್ರತಿಯೊಂದು ಆಸ್ತಿಯನ್ನೂ ಅಳತೆ ಮಾಡಿ, ಅವುಗಳ ನಕ್ಷೆಯನ್ನು ತಯಾರಿಸಲಾಗುತ್ತದೆ. ಈಗಾಗಲೇ ಮೈಸೂರು, ಶಿವಮೊಗ್ಗ ಮತ್ತು ಮಂಗಳೂರಿನಲ್ಲಿ ಆಸ್ತಿ ಅಳತೆ ಕಾರ್ಯ ಮುಗಿದಿದೆ ಎಂದು ಅವರು ಹೇಳಿದರು.

ಇದರ ಪ್ರಕಾರ ಆಸ್ತಿಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರು ಮತ್ತು ನಾನಾ ಇಲಾಖೆಗಳಿಂದ ದಾಖಲೆಗಳನ್ನು ಸಂಗ್ರಹಿಸಿ, ನಂತರ ಅವುಗಳನ್ನು ಪರಿಶೀಲಿಸಲಾಗುವುದು. ಬಳಿಕ ಹಕ್ಕು ವಿಚಾರಣಾ ಪ್ರಕ್ರಿಯೆಯನ್ನು ಆರಂಭಿಸಿ, ಪಿಆರ್ ಕಾರ್ಡುಗಳನ್ನು (ಪ್ರಾಪರ್ಟಿ ರೆಕಾರ್ಡ್ ಕಾರ್ಡ್) ಸಿದ್ಧಪಡಿಸಿ, ಆಸ್ತಿಗಳ ಮಾಲಕರಿಗೆ ಅವುಗಳನ್ನು ವಿತರಿಸಲಾಗುವುದು. ನಗರ ಪ್ರದೇಶಗಳಲ್ಲಿ ಆಸ್ತಿ ನೋಂದಣಿ ಪ್ರಕ್ರಿಯೆಗೆ ಈ ಪಿಆರ್ ಕಾರ್ಡ್ ಕಡ್ಡಾಯವಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.

ಈಗಾಗಲೇ ಶಿವಮೊಗ್ಗದಲ್ಲಿ ಪಿಆರ್ ಕಾರ್ಡುಗಳನ್ನು ವಿತರಿಸಲಾಗಿದೆ. ಈಗ ಮಂಗಳೂರು ನಗರ ವ್ಯಾಪ್ತಿಯಲ್ಲೂ ಇದನ್ನು ಕಡ್ಡಾಯ ಮಾಡಿ ಆದೇಶ ಹೊರಡಿಸಲಾಗಿದೆ. ಕೆಲವೇ ದಿನಗಳಲ್ಲಿ ಮೈಸೂರು ನಗರದಲ್ಲಿಯೂ ಆಸ್ತಿ ನೋಂದಣಿಗೆ ಕ್ರಮ ಕೈಗೊಳ್ಳಲಾಗುತ್ತದೆ. ಕ್ಷಿಪ್ರ ಗತಿಯಲ್ಲಿ ರಾಜ್ಯದ ಎಲ್ಲ ನಗರಗಳಲ್ಲೂ ಯುಪಿಓಆರ್ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು ಎಂದು ಅವರು ಹೇಳಿದರು. ಪಿಆರ್ ಕಾರ್ಡುಗಳನ್ನು ಕರ್ನಾಟಕ ಭೂ ಕಂದಾಯ ನಿಯಮಾವಳಿ-1966ರ ಫಾರಂ-13ರ ಪ್ರಕಾರ ಮಾಲಕತ್ವದ ದಾಖಲೆಗಳೆಂದು ಪರಿಗಣಿಸಲಾಗುವುದು. ಹೀಗಾಗಿ, ನಗರ ಪ್ರದೇಶಗಳಲ್ಲಿ ಆಸ್ತಿ ಹೊಂದಿರುವವರಿಗೆ ಇದು ಅತ್ಯವಶ್ಯಕ ದಾಖಲೆಯಾಗಲಿದೆ ಎಂದು ಅವರು ತಿಳಿಸಿದರು.

ಯೋಜನೆಯ ಅನುಕೂಲಗಳು: ಯುಪಿಓಆರ್ ಯೋಜನೆಯಿಂದ ಮುಖ್ಯವಾಗಿ ಸರಕಾರಿ ಆಸ್ತಿಗಳನ್ನು ಗುರುತಿಸಿ, ಸಂರಕ್ಷಿಸಲು ಅನುಕೂಲವಾಗುವುದು. ಜತೆಗೆ, ಮಹಾನಗರ ಪಾಲಿಕೆಗಳು ಮತ್ತು ನಗರಪಾಲಿಕೆಗಳಿಗೆ ತೆರಿಗೆ ಸಂಗ್ರಹಣೆಯ ದೃಷ್ಟಿಯಿಂದ ಆಸ್ತಿಪಾಸ್ತಿಗಳ ನಿಖರ ಮಾಹಿತಿ ದೊರೆಯಲಿದೆ ಎಂದು ಕಂದಾಯ ಸಚಿವರು ವಿವರಿಸಿದರು.

ನಗರ ಪ್ರದೇಶಗಳಲ್ಲಿರುವ ಆಸ್ತಿಪಾಸ್ತಿಗಳ ಸ್ವರೂಪ, ಅವುಗಳು ಭೌಗೋಳಿಕವಾಗಿ ಎಲ್ಲಿವೆ ಮತ್ತು ಪ್ರತಿಯೊಂದೂ ಆಸ್ತಿಯ ನಿಖರವಾದ ವಿಸ್ತೀರ್ಣ ಎಷ್ಟು ಎನ್ನುವುದು ತಿಳಿಯುತ್ತದೆ. ಜತೆಗೆ ಆಸ್ತಿಪಾಸ್ತಿಗಳಿಗೆ ಸಂಬಂಧಿಸಿದ ಅನಗತ್ಯ ವ್ಯಾಜ್ಯಗಳು ಇಳಿಮುಖಗೊಳ್ಳುತ್ತವೆ ಎಂದು ಸಚಿವ ದೇಶಪಾಂಡೆ ಹೇಳಿದರು.ಯುಪಿಓಆರ್ ಯೋಜನೆಯನ್ನು ಬೆಂಗಳೂರು ನಗರದ 198 ವಾರ್ಡುಗಳ ಪೈಕಿ ಆಯ್ದ 50 ವಾರ್ಡುಗಳಲ್ಲಿ ಜಾರಿಗೊಳಿಸಲು ಸರಕಾರ ಈಗಾಗಲೇ ಅನುಮೋದನೆ ನೀಡಿದೆ. ಇದರ ಅಂಗವಾಗಿ ಮೊದಲಿಗೆ ನಗರದ ಯಾವುದಾದರೂ ಒಂದು ವಾರ್ಡಿನಲ್ಲಿ ಈ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಲಾಗುವುದು ಎಂದು ಸಚಿವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News