×
Ad

ಲಖನೌಗೆ ಸ್ಥಳಾಂತವಾಗಲಿರುವ ವೈಮಾನಿಕ ಪ್ರದರ್ಶನ ?

Update: 2018-08-04 20:47 IST

ಬೆಂಗಳೂರು, ಆ.4: ನಗರದ ಯಲಹಂಕ ವಾಯುನೆಲೆಯಲ್ಲಿ ಮುಂದಿನ ವರ್ಷ ನಡೆಯಲಿರುವ ವೈಮಾನಿಕ ಪ್ರದರ್ಶನವನ್ನು ಲಖನೌಗೆ ಸ್ಥಳಾಂತರವಾಗುವ ಸಂಭವವಿದೆ ಎನ್ನಲಾಗಿದೆ.

ಕಳೆದ 22 ವರ್ಷಗಳಿಂದ ಬೆಂಗಳೂರಿನಲ್ಲಿ ಪ್ರತಿಷ್ಠಿತ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ನಡೆಯುತ್ತಿದೆ. ಆದರೆ, ಇದೀಗ ಕೇಂದ್ರ ಸರಕಾರ ಮತ್ತು ರಕ್ಷಣಾ ಸಚಿವಾಲಯದ ಮೂಲಗಳ ಪ್ರಕಾರ 12ನೇ ಆವೃತ್ತಿಯ ಏರೋ ಇಂಡಿಯಾ ಪ್ರದರ್ಶನವನ್ನು ಬೆಂಗಳೂರಿನ ಬದಲು ಲಖನೌನ ಬಕ್ಷಿ ಕಾ ತಾಲಾಬ್ ಏರ್ ಫೋರ್ಸ್ ಸ್ಟೇಷನ್‌ನಲ್ಲಿ ನಡೆಸಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.

1996 ರಲ್ಲಿ ಏರೋ ಇಂಡಿಯಾ ಪ್ರದರ್ಶನ ಬೆಂಗಳೂರಿನಲ್ಲಿ ಆರಂಭಗೊಂಡು, 22 ವರ್ಷಗಳಲ್ಲಿ 11 ಬಾರಿ ಬೆಂಗಳೂರಿನಲ್ಲಿ ನಡೆದ ಪ್ರತಿಷ್ಠಿತ ವೈಮಾನಿಕ ಪ್ರದರ್ಶನ ವಿಶ್ವ ಮಟ್ಟದಲ್ಲಿ ಗಮನ ಸೆಳೆದಿತ್ತು. ಈ ಹಿಂದೆ ವೈಮಾನಿಕ ಪ್ರದರ್ಶನವನ್ನು ಗೋವಾಗೆ ಸ್ಥಳಾಂತರ ಮಾಡಲಾಗುತ್ತದೆ ಎಂದು ಹೇಳಲಾಗಿತ್ತಾದರೂ, ಗೋವಾ ಬದಲಿಗೆ ಲಖನೌದಲ್ಲಿ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಬಾಹ್ಯಾಕಾಶ ನಿರ್ಬಂಧವು ಏರೋ ಇಂಡಿಯಾವನ್ನು ಬೆಂಗಳೂರಿನಿಂದ ಸ್ಥಳಾಂತರಿಸಲು ಪ್ರಮುಖ ಕಾರಣವೆಂದು ಹೇಳಲಾಗಿದೆ.

ಆದರೆ ಲಖನೌದಲ್ಲಿ ಶೋ ನಡೆಸಲು ನಿಗದಿಪಡಿಸಿರುವ ಪ್ರದೇಶದಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳಿಲ್ಲ ಎನ್ನಲಾಗಿದ್ದು ರಕ್ಷಣಾ ಸಚಿವಾಲಯ ಏರೋ ಇಂಡಿಯಾ ಪ್ರದರ್ಶನ ಎಲ್ಲಿ ನಡೆಯಬೇಕೆನ್ನುವ ಅಂತಿಮ ತೀರ್ಮಾನವನ್ನು ಇನ್ನಷ್ಟೇ ತೆಗೆದುಕೊಳ್ಳಲಿದೆ ಎಂದು ಹೇಳಲಾಗಿದೆ. ಎರಡು ವರ್ಷಗಳಿಗೊಮ್ಮೆ ಆಯೋಜಿಸಲಾಗುವ ಈ ವೈಮಾನಿಕ ಪ್ರದರ್ಶನದಲ್ಲಿ ದೇಶ, ವಿದೇಶಗಳ ವಿಮಾನಗಳು ದೊಡ್ಡ ಸಂಖ್ಯೆಯಲ್ಲಿ ಆಗಮಿಸುತ್ತವೆ. ಐದು ದಿನಗಳ ಕಾಲ ನಡೆಯುವ ಈ ಪ್ರದರ್ಶನದಲ್ಲಿ ವಿಶ್ವದ ನಾನಾ ಭಾಗದ ಲೋಹದ ಹಕ್ಕಿಗಳು ಹಾರಾಟ ನಡೆಸಿ ವೀಕ್ಷಕರನ್ನು ಮೋಡಿ ಮಾಡುತ್ತದೆ.

ಬೆಂಗಳೂರಿನಲ್ಲಿಯೇ ನಡೆಯಲಿದೆ: ಸಿಎಂ ವೈಮಾನಿಕ ಪ್ರದರ್ಶನ ಲಖನೌಗೆ ಸ್ಥಳಾಂತರವಾಗುವ ಸಾಧ್ಯತೆ ಎಂಬ ಮಾಧ್ಯಮ ವರದಿಯನ್ನು ತಿರಸ್ಕರಿಸಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, 2019ರಲ್ಲಿ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ಬೆಂಗಳೂರಿನಲ್ಲೇ ನಡೆಯಲಿದೆ. ವೈಮಾನಿಕ ಪ್ರದರ್ಶನ ಸ್ಥಳಾಂತರ ಮಾಡುವ ಬಗ್ಗೆ ನನಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಈ ಹಿಂದೆಯೂ ಈ ರೀತಿಯ ವರದಿಗಳು ಪ್ರಕಟವಾಗಿದ್ದವು. ಆದರೆ ಈ ಬಾರಿಯೂ ವೈಮಾನಿಕ ಪ್ರದರ್ಶನ ಬೆಂಗಳೂರಿನಲ್ಲೇ ನಡೆಯಲಿದೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News