ದೇಶದಲ್ಲಿ ಉದ್ಯೋಗ ಎಲ್ಲಿದೆ?: ಕೇಂದ್ರ ಸಚಿವ ನಿತಿನ್ ಗಡ್ಕರಿ ಪ್ರಶ್ನೆ

Update: 2018-08-05 07:12 GMT

ಔರಂಗಾಬಾದ್, ಆ.5: ದೇಶದಲ್ಲಿ ತೀವ್ರ ನಿರುದ್ಯೋಗ ಸಮಸ್ಯೆಯಿರುವುದನ್ನು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.

ಉದ್ಯೋಗಗಳಲ್ಲಿ ಮರಾಠಿಗರಿಗೆ ಮೀಸಲಾತಿ ನೀಡಬೇಕೆಂಬ ಬೇಡಿಕೆ ತೀವ್ರ ಸ್ವರೂಪ ಪಡೆಯುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಕೇಂದ್ರ ಸಚಿವರು,‘‘ಮರಾಠಿಗರು ಅಥವಾ ಯಾವುದೇ ಸಮುದಾಯಕ್ಕೆ ಮೀಸಲಾತಿ ನೀಡುವುದು ಸಮಸ್ಯೆಗೆ ಪರಿಹಾರವಲ್ಲ. ಉದ್ಯೋಗ ಸೃಷ್ಟಿ ಈ ಕ್ಷಣದ ಅಗತ್ಯವಾಗಿದೆ. ಒಂದು ವೇಳೆ ಮೀಸಲಾತಿ ನೀಡಿದರೆ, ಉದ್ಯೋಗ ಎಲ್ಲಿಂದ ಕೊಡಲು ಸಾಧ್ಯ. ಬ್ಯಾಂಕ್‌ಗಳಲ್ಲಿ ಸರಕಾರ ಉದ್ಯೋಗ ನೇಮಕಾತಿ ಮಾಡುವುದನ್ನು ನಿಲ್ಲಿಸಿದೆ. ಬ್ಯಾಂಕ್‌ಗಳಲ್ಲಿ ಹೆಚ್ಚಿನ ಕೆಲಸಗಳು ಮಾಹಿತಿ ತಂತ್ರಜ್ಞಾನದ ಮೂಲಕ ನಡೆಯುತ್ತಿದೆ'' ಎಂದರು.

ಔರಂಗಾಬಾದ್‌ನಲ್ಲಿ ಯೋಜನೆಗಳ ಪರಾಮರ್ಶೆ ಸಭೆಯಲ್ಲಿ ಭಾಗವಹಿಸಿದ್ದ ಗಡ್ಕರಿ,‘‘ಈಗ ಪ್ರತಿಯೊಬ್ಬರು ತಾನು ಹಿಂದುಳಿದವರು ಎಂದು ಹೇಳತೊಡಗಿದ್ದಾರೆ. ಬಿಹಾರ ಹಾಗೂ ಉತ್ತರಪ್ರದೇಶದಲ್ಲಿ ಬ್ರಾಹ್ಮಣರು ಬಲಿಷ್ಠರಾಗಿದ್ದಾರೆ. ರಾಜಕೀಯದಲ್ಲೂ ಪ್ರಾಬಲ್ಯ ಹೊಂದಿದ್ದಾರೆ. ಆದಾಗ್ಯೂ ಅವರು ನಾವು ಹಿಂದುಳಿದವರು ಎಂದು ಹೇಳುತ್ತಿದ್ದಾರೆ. ಮುಸ್ಲಿಂ, ಹಿಂದೂ ಅಥವಾ ಮರಾಠ(ಜಾತಿ)ಎಲ್ಲ ಸಮುದಾಯಗಳಲ್ಲಿ ಕಡು ಬಡತನದಲ್ಲಿರುವವರು ಇದ್ದಾರೆ. ಪ್ರತಿ ಸಮುದಾಯದ ಬಡವರನ್ನು ನಾವು ಪರಿಗಣಿಸಬೇಕು. ಇದು ಸಾಮಾಜಿಕ-ಆರ್ಥಿಕ ಯೋಚನೆಯಾಗಿದೆ. ಈ ವಿಷಯವನ್ನು ರಾಜಕೀಯಗೊಳಿಸಬಾರದು'' ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News