ಟ್ವೆಂಟಿ-20: ಹಸನ್ ಆಲ್‌ರೌಂಡ್ ಆಟ; ಬಾಂಗ್ಲಾಕ್ಕೆ ರೋಚಕ ಜಯ

Update: 2018-08-05 12:38 GMT

ಲೌಡೆರ್‌ಹಿಲ್, ಆ.5: ಶಾಕಿಬ್ ಅಲ್-ಹಸನ್ ಆಲ್‌ರೌಂಡ್ ಆಟದ(60 ರನ್, 19ಕ್ಕೆ2) ನೆರವಿನಿಂದ ಬಾಂಗ್ಲಾದೇಶ ತಂಡ ವೆಸ್ಟ್‌ಇಂಡೀಸ್ ವಿರುದ್ಧದ ಎರಡನೇ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಕ್ರಿಕೆಟ್ ಪಂದ್ಯವನ್ನು 12 ರನ್‌ಗಳಿಂದ ಗೆದ್ದುಕೊಂಡಿದೆ. ಈ ಮೂಲಕ 3 ಪಂದ್ಯಗಳ ಸರಣಿಯಲ್ಲಿ 1-1 ರಿಂದ ಸಮಬಲ ಸಾಧಿಸಿದೆ.

 ಇಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಜಯಿಸಿದ ಬಾಂಗ್ಲಾದೇಶ ಮೊದಲು ಬ್ಯಾಟಿಂಗ್ ಆಯ್ದುಕೊಂಡು ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 171 ರನ್ ಗಳಿಸಿದೆ. ಗೆಲ್ಲಲು ಕಠಿಣ ಸವಾಲು ಪಡೆದಿದ್ದ ಆತಿಥೇಯ ವೆಸ್ಟ್‌ಇಂಡೀಸ್ ತಂಡವನ್ನು 9 ವಿಕೆಟ್‌ಗೆ 159 ರನ್‌ಗೆ ನಿಯಂತ್ರಿಸಿದ ಬಾಂಗ್ಲಾ ಬೌಲರ್‌ಗಳು ತಂಡಕ್ಕೆ ರೋಚಕ ಗೆಲುವು ತಂದರು.

ಬಾಂಗ್ಲಾ ಆರಂಭಿಕ ವಿಕೆಟ್‌ಗಳನ್ನು ಬೇಗನೆ ಕಳೆದುಕೊಂಡಿತು. 8ನೇ ಓವರ್‌ಗೆ ಬಾಂಗ್ಲಾ 48 ರನ್‌ಗೆ 3 ವಿಕೆಟ್ ಕಳೆದುಕೊಂಡಿತ್ತು. ಆಗ 4ನೇ ವಿಕೆಟ್‌ಗೆ 90 ರನ್ ಜೊತೆಯಾಟ ನಡೆಸಿದ ತಮೀಮ್ ಇಕ್ಬಾಲ್(74, 44 ಎಸೆತ,6 ಬೌಂಡರಿ,4 ಸಿಕ್ಸರ್) ಹಾಗೂ ನಾಯಕ ಶಾಕಿಬ್ ಅಲ್ ಹಸನ್( 60, 38 ಎಸೆತ, 9 ಬೌಂಡರಿ, 1 ಸಿಕ್ಸರ್)ತಂಡವನ್ನು ಆಧರಿಸಿದರು. ವಿಂಡೀಸ್‌ನ ಬ್ಯಾಟಿಂಗ್ ಆರಂಭ ಕೂಡ ಕಳಪೆಯಾಗಿತ್ತು. ಇನಿಂಗ್ಸ್‌ನ 2ನೇ ಓವರ್‌ನಲ್ಲಿ ಎವಿನ್ ಲೂಯಿಸ್ ವಿಕೆಟ್ ಪತನಗೊಂಡಿತು. ಮುಸ್ತಫಿಝುರ್ರಹ್ಮಾನ್(3-50)4ನೇ ಓವರ್‌ನಲ್ಲಿ ಆ್ಯಂಡ್ರೆ ರಸ್ಸಲ್(17) ವಿಕೆಟ್ ಪಡೆದರು. ಮರ್ಲಾನ್ ಸ್ಯಾಮುಯೆಲ್ಸ್ ಹಾಗೂ ದಿನೇಶ್ ರಾಮ್ ದಿನ್ ಅಲ್ಪ ಮೊತ್ತಕ್ಕೆ ಔಟಾದಾಗ ವಿಂಡೀಸ್ ಸ್ಕೋರ್ 54ಕ್ಕೆ 4.

ಆ್ಯಂಡ್ರೆ ಫ್ಲಚರ್(43,38 ಎಸೆತ) ಹಾಗೂ ರೊವ್‌ಮನ್ ಪೊವೆಲ್(43,34 ಎಸೆತ) 48 ರನ್ ಜೊತೆಯಾಟ ನಡೆಸಿದರು. ನಝ್ಮುಲ್(3-28)ಕೊನೆಯ ಓವರ್‌ನಲ್ಲಿ ನರ್ಸ್ ಹಾಗೂ ಪಾಲ್ ವಿಕೆಟ್ ಪಡೆದು ಬಾಂಗ್ಲಾದೇಶ ಸರಣಿ ಸಮಬಲಗೊಳಿಸಲು ನೆರವಾದರು. ನಾಯಕ ಹಸನ್ 19 ರನ್ 2 ವಿಕೆಟ್ ಪಡೆದರು. ಇಕ್ಬಾಲ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

ಬಾಂಗ್ಲಾ ಮೊದಲ ಪಂದ್ಯವನ್ನು 7 ವಿಕೆಟ್‌ಗಳಿಂದ ಸೋತಿತ್ತು. ಸರಣಿಯ ಕೊನೆಯ ಪಂದ್ಯ ಇದೇ ಮೈದಾನದಲ್ಲಿ ರವಿವಾರ ನಡೆಯುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News