ಫ್ಲೆಕ್ಸ್ ತೆರವು ನಿರಂತರವಾಗಲಿ

Update: 2018-08-06 18:31 GMT

ಮಾನ್ಯರೇ,

ಇತ್ತೀಚೆಗೆ ಬೆಂಗಳೂರು ಮಹಾನಗರದಲ್ಲಿ ಒಂದೇ ದಿನ ಸುಮಾರು 20 ಸಾವಿರದಷ್ಟು ಜಾಹೀರಾತು ಫ್ಲೆಕ್ಸ್‌ಗಳನ್ನು ಬಿಬಿಎಂಪಿ ಸಿಬ್ಬಂದಿ ತೆರವುಗೊಳಿಸಿರುವುದು ಶ್ಲಾಘನೀಯ. ಈ ಫ್ಲೆಕ್ಸ್ ಹಾವಳಿ ಬೆಂಗಳೂರಿನಲ್ಲಿ ಹೆಚ್ಚಾಗಿರುವುದಾದರೂ ಇದು ಸಾರ್ವತ್ರಿಕ ಪಿಡುಗು. ರಾಜ್ಯದ ಎಲ್ಲಾ ನಗರ, ಪಟ್ಟಣಗಳಲ್ಲೂ ಈ ಸಮಸ್ಯೆ ಕಂಡು ಬರುತ್ತಿದೆ.
ಇನ್ನಾದರೂ ಈ ಸಮಸ್ಯೆಯನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕು. ಫ್ಲೆಕ್ಸ್ ಗಳನ್ನು ನಿಷೇಧಿಸುವುದು ಎಲ್ಲ ದೃಷ್ಟಿಯಿಂದಲೂ ಉತ್ತಮವಾದ ಕ್ರಮ. ಒಂದೊಮ್ಮೆ ಇದು ಅಸಾಧ್ಯ ಎಂದಾದರೆ ಇದಕ್ಕೊಂದು ನಿರ್ದಿಷ್ಟ ನೀತಿ ನಿಯಮಗಳನ್ನು ರೂಪಿಸಬೇಕು. ಅವುಗಳಿಗಾಗಿ ನಿರ್ದಿಷ್ಟ ಜಾಗವನ್ನು ಗುರುತಿಸಬೇಕು. ಅವುಗಳ ಸಂಖ್ಯೆಯ ಮೇಲೆ ಮಿತಿ ಹೇರಬೇಕು. ಶುಲ್ಕವನ್ನು, ಅವಧಿಯನ್ನು ನಿಗದಿಪಡಿಸಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಈ ನೀತಿ ನಿಯಮಗಳನ್ನು ಉಲ್ಲಂಘಿಸುವವರ ಮೇಲೆ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಬೇಕು. ಬೆಂಗಳೂರು ಫ್ಲೆಕ್ಸ್ ಸಿಟಿ ಎಂಬ ಕುಖ್ಯಾತಿ ಪಡೆಯುವ ಮೊದಲು ಕೋರ್ಟ್ ಆದೇಶದ ನೆಪದಲ್ಲಾದರೂ ಈ ದಿಸೆಯಲ್ಲಿ ತುರ್ತು ಕ್ರಮಗಳನ್ನು ಕೈಗೊಳ್ಳಬೇಕು.

Similar News