ಅನ್ನಭಾಗ್ಯದ ಏಳು ಕೆಜಿ ಅಕ್ಕಿ ವಿತರಣೆ ಮುಂದುವರಿಕೆ: ಸಚಿವ ಝಮೀರ್‌ ಅಹ್ಮದ್‌ ಸ್ಪಷ್ಟನೆ

Update: 2018-08-07 14:05 GMT

ಬೆಂಗಳೂರು, ಆ.7: ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್ ಪಡಿತರ ಚೀಟಿ ಹೊಂದಿರುವವರಿಗೆ ಈ ಹಿಂದಿನಂತೆಯೇ ತಲಾ ಏಳು ಕೆಜಿ ಅಕ್ಕಿಯನ್ನು ನೀಡಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಬಿ.ಝೆಡ್. ಝಮೀರ್‌ ಅಹ್ಮದ್‌ ಖಾನ್ ಸ್ಪಷ್ಟನೆ ನೀಡಿದ್ದಾರೆ.

ಮಂಗಳವಾರ ಮುಖ್ಯಮಂತ್ರಿಯ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಹೇಳಿದಂತೆ ಏಳು ಕೆಜಿ ಅಕ್ಕಿಯನ್ನು ಕೊಡುತ್ತೇವೆ. ಆದರೆ, ಮಾಧ್ಯಮಗಳಲ್ಲಿ ಮುಖ್ಯಮಂತ್ರಿ ಐದು ಕೆಜಿ ನೀಡುವುದಾಗಿ ಹೇಳಿದ್ದರೂ ಝಮೀರ್ ಏಳು ಕೆಜಿ ಕೊಡುವ ಮೂಲಕ ಸೂಪರ್ ಸಿಎಂ ರೀತಿ ವರ್ತಿಸುತ್ತಿದ್ದಾರೆ ಎಂದು ಬಿಂಬಿಸಲಾಗುತ್ತಿದೆ ಎಂದರು.

ಮುಖ್ಯಮಂತ್ರಿಯ ಆದೇಶವನ್ನು ನಾವು ಹಿಂದಕ್ಕೆ ಹಾಕಲು ಸಾಧ್ಯವೇ? ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡುವಾಗ ಕುಮಾರಸ್ವಾಮಿ, ಏಳು ಕೆಜಿ ಅಕ್ಕಿ ನೀಡುವ ಬಗ್ಗೆ ಪರಿಗಣಿಸುತ್ತೇನೆ, ಸಿದ್ದರಾಮಯ್ಯ ಸರಕಾರದ ಎಲ್ಲ ಯೋಜನೆಗಳನ್ನು ಮುಂದುವರೆಸುವುದಾಗಿ ಹೇಳಿದ್ದರು. ಅದರಂತೆ, ನಾವು ಏಳು ಕೆಜಿ ಅಕ್ಕಿಯನ್ನು ಕೊಡುತ್ತೇವೆ ಎಂದು ಅವರು ಹೇಳಿದರು. ಒಂದು ವೇಳೆ ಮುಖ್ಯಮಂತ್ರಿ ಏಳು ಕೆಜಿ ಬದಲು, ಐದು ಕೆಜಿ ಅಕ್ಕಿ ನೀಡುವಂತೆ ಆದೇಶ ನೀಡಿದರೆ, ನಾವು ಅದರಂತೆ ನಡೆದುಕೊಳ್ಳುತ್ತೇವೆ. ಪಾಮೋಲಿನ್ ಎಣ್ಣೆ, ಆಯೋಡಿನ್ ಉಪ್ಪು ಸದ್ಯಕ್ಕೆ ನೀಡುವುದಿಲ್ಲ ಎಂದು ಝಮೀರ್‌ ಅಹ್ಮದ್‌ ಖಾನ್ ತಿಳಿಸಿದರು. 

ಮುಖ್ಯಮಂತ್ರಿಯ ಅನಿಲ ಭಾಗ್ಯ ಯೋಜನೆಯಡಿ ಸ್ಟೌವ್‌ಗಳ ಖರೀದಿಯಲ್ಲಿ ಅವ್ಯವಹಾರವಾಗಿದೆ ಎಂಬ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು, ಚುನಾವಣೆಗೆ ಮುಂಚಿತವಾಗಿಯೇ ಸ್ಟೌವ್‌ಗಳನ್ನು ಖರೀದಿಸಲಾಗಿತ್ತು. ನೀತಿ ಸಂಹಿತೆ ಜಾರಿಯಲ್ಲಿ ಇದ್ದ ಕಾರಣ ಅವುಗಳನ್ನು ವಿತರಣೆ ಮಾಡಿರಲಿಲ್ಲ ಎಂದು ಹೇಳಿದರು. ನಮ್ಮ ಸರಕಾರದ ಅವಧಿಯಲ್ಲಿ ಯಾವುದೇ ಸ್ಟೌವ್‌ಗಳನ್ನು ಖರೀದಿ ಮಾಡಿಲ್ಲ, ಹಿಂದಿನ ಸರಕಾರದ ಅವಧಿಯಲ್ಲಿ ಖರೀದಿಸಿದ್ದ ಸ್ಟೌವ್‌ಗಳನ್ನು ನಾವು ಈಗ ವಿತರಣೆ ಮಾಡುತ್ತಿದ್ದೇವೆ ಎಂದು ಝಮೀರ್‌ ಅಹ್ಮದ್‌ ಖಾನ್ ತಿಳಿಸಿದರು.

ಈಗಾಗಲೇ 10 ಲಕ್ಷ ಸ್ಟೌವ್ ಖರೀದಿ ಮಾಡಿದ್ದು, 20 ಲಕ್ಷ ಸ್ಟೌವ್ ಖರೀದಿಸಬೇಕಾಗಿದೆ. ಈ ಸಂಬಂಧ ಸರಕಾರಿ ಆದೇಶ ಹೊರಡಿಸಿದ ಬಳಿಕವೇ ಟೆಂಡರ್ ಕರೆದು ಸ್ಟೌವ್ ಖರೀದಿ ಮಾಡಲಾಗುವುದು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News