ಹಿಂಬಾಗಿಲ ಮೂಲಕ ಅಧಿಕಾರ ಹಿಡಿಯುವ ಅಗತ್ಯವಿಲ್ಲ: ಕೆ.ಎಸ್.ಈಶ್ವರಪ್ಪ

Update: 2018-08-07 13:15 GMT

ಬೆಂಗಳೂರು, ಆ.7: ಹಿಂಬಾಗಿಲ ಮೂಲಕ ಅಧಿಕಾರಿ ಹಿಡಿಯುವ ಅಗತ್ಯ ನಮ್ಮ ಪಕ್ಷಕ್ಕಿಲ್ಲ. ವಿರೋಧ ಪಕ್ಷದಲ್ಲಿ ನಾವು ಸಂತೋಷವಾಗಿದ್ದೇವೆ. ಈ ಸರಕಾರ ಬಹಳ ದಿನ ಇರುವುದಿಲ್ಲ ಎಂಬುದು ಆಡಳಿತ ನಡೆಸುತ್ತಿರುವವರಿಗೆ ಗೊತ್ತಿದೆ ಎಂದು ಬಿಜೆಪಿ ಶಾಸಕ ಕೆ.ಎಸ್.ಈಶ್ವರಪ್ಪ ಹೇಳಿದರು.

ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾನಾಗಿಯೆ ಈ ಸರಕಾರ ಬೀಳುತ್ತೆ. ಆನಂತರ ನಮ್ಮ ಸರಕಾರ ಅಧಿಕಾರಕ್ಕೆ ಬರುತ್ತದೆ. ಆದುದರಿಂದ, ಹಿಂಬಾಗಿಲ ಮೂಲಕ ಅಧಿಕಾರಿ ಹಿಡಿಯಬೇಕಾದ ಅಗತ್ಯ ನಮಗಿಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ತಿರುಗೇಟು ನೀಡಿದರು.

ನಾವು ಪೂರ್ಣ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದು ಕಾಂಗ್ರೆಸ್ ನಾಯಕರು ಬೊಗಳೆ ಬಿಡುತ್ತಿದ್ದರು. ಸಮಾಜವನ್ನು ತುಂಡು ಮಾಡುವ ಪ್ರಯತ್ನ ನಡೆಸಿದರು, ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕ, ಲಿಂಗಾಯತ-ವೀರಶೈವ ಪ್ರತ್ಯೇಕತೆ, ಹಿಂದೂ ವಿರೋಧಿ ಚಟುವಟಿಕೆಗಳನ್ನು ಮಾಡಿದ ಪರಿಣಾಮ 120 ಸ್ಥಾನಗಳಿಂದ 78ಕ್ಕೆ ಕಾಂಗ್ರೆಸ್‌ನವರು ಇಳಿದರು ಎಂದು ಅವರು ಟೀಕಿಸಿದರು. ಇದೀಗ ನಾಚಿಕೆ ಇಲ್ಲದೆ ಜೆಡಿಎಸ್ ಜೊತೆ ಕೈ ಸೇರಿ ಹಿಂಬಾಗಿಲ ಮೂಲಕ ಅಧಿಕಾರ ಹಿಡಿದಿದ್ದಾರೆ. ನಮ್ಮ ಬಗ್ಗೆ ಮಾತನಾಡುವ ಯಾವ ನೈತಿಕತೆ ಅವರಿಗಿದೆ ಎಂದು ಈಶ್ವರಪ್ಪ ಹೇಳಿದರು.

ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹೊಸದಿಲ್ಲಿಗೆ ತೆರಳಿರುವ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಈಶ್ವರಪ್ಪ, ಪಕ್ಷದ ಸಂಘಟನೆ, ಲೋಕಸಭಾ ಚುನಾವಣೆಗೆ ಕೈಗೊಳ್ಳಬೇಕಿರುವ ಸಿದ್ಧತೆಗಳ ಕುರಿತು ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡಿ ಚರ್ಚಿಸಲು ಹೋಗಿದ್ದಾರೆ. ನಾನು, ಸಿ.ಟಿ.ರವಿ ಹಾಗೂ ಲಕ್ಷ್ಮಣ ಸವದಿ ನೇತೃತ್ವದ ತಂಡವು ಆ.9 ರಿಂದ 12ರವರೆಗೆ ಮಂಡ್ಯ, ಚಾಮರಾಜನಗರ, ಮೈಸೂರು, ಹಾಸನ, ಕೊಡಗು, ದಕ್ಷಿಣ ಕನ್ನಡ, ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಲಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News