×
Ad

ಮಾನವೀಯ ನೆಲೆಗಟ್ಟಿನಲ್ಲಿ ಕವಿತೆ ರೂಪ ತಾಳಲಿ: ಮೂಡ್ನಾಕೂಡು ಚಿನ್ನಸ್ವಾಮಿ

Update: 2018-08-07 20:15 IST

ಬೆಂಗಳೂರು, ಆ.7: ಮಾನವೀಯತೆಯ ನೆಲೆಗಟ್ಟಿನಲ್ಲಿ ರೂಪಗೊಂಡ ಕವಿತೆ ಎಲ್ಲರ ಹೃದಯಗಳಿಗೂ ಪ್ರವೇಶಿಸಬಲ್ಲದು. ಅಂತಹ ಕವಿತೆಗಳನ್ನು ಯುವ ಜನತೆ ಕೇಳಬೇಕು, ಓದಬೇಕು ಹಾಗೂ ಬರೆಯಬೇಕೆಂದು ಹಿರಿಯ ಕವಿ ಮೂಡ್ನಾಕೂಡು ಚಿನ್ನಸ್ವಾಮಿ ತಿಳಿಸಿದರು.

ಮಂಗಳವಾರ ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ಸೇಂಟ್‌ಮೀರಾಸ್ ಪದವಿ ಪೂದವಿ ಪೂರ್ವ ಕಾಲೇಜಿನಲ್ಲಿ ಜಾಣ ಜಾಣೆಯರ ಬಳಗ ಆಯೋಜಿಸಿದ್ದ ಸಾಹಿತಿಗಳಿಂದ ಸಾಹಿತ್ಯ ರಚನೆ ಕುರಿತಂತೆ ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಇವತ್ತಿನ ದಿನಗಳಲ್ಲಿ ಮಾನವೀಯತೆ ಕಣ್ಮರೆಯಾಗುತ್ತಿವೆ. ಪ್ರತಿಯೊಂದನ್ನು ಸ್ವಾರ್ಥ ಹಾಗೂ ವ್ಯವಹಾರವಾಗಿ ನೋಡುವುದು ಸಾಮಾನ್ಯವಾಗಿದೆ. ಇಂತಹ ಸಂದರ್ಭದಲ್ಲಿ ಕವಿತೆಗಳ ಪಾತ್ರ ಮಹತ್ವದಾಗಿದ್ದು, ಮುಖ್ಯವಾಗಿ ಯುವ ಜನತೆ ಕವಿತೆಯತ್ತ ಮುಖಮಾಡಬೇಕು ಎಂದು ಅವರು ಆಶಿಸಿದರು.

ನಮ್ಮ ಅನುಭವಗಳನ್ನೆ ಬರವಣಿಗೆಯಲ್ಲಿ ದಾಖಲಿಸಬೇಕು. ಹೀಗೆ ಬರೆಯುತ್ತಲೆ ಸಾಹಿತ್ಯಕ್ಕೆ ಪ್ರವೇಶಿಸಬೇಕೆ ವಿನಃ ಯಾವುದೆ ಸಿದ್ಧ ಸೂತ್ರಗಳಿಲ್ಲ. ವಿದ್ಯಾರ್ಥಿಗಳು ಗಂಭೀರವಾಗಿ ಓದಬೇಕು. ಹಾಗೂ ಅದರ ಕುರಿತು ಚರ್ಚಿಸಬೇಕು. ಓದುವುದು, ಬರೆಯುವುದನ್ನು ಹವ್ಯಾಸವಾಗಿ ರೂಢಿಸಿಕೊಳ್ಳಬೇಕೆಂದು ಅವರು ಆಶಿಸಿದರು.

ಯುವ ಸಬಲಿಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಶಶಿಕಲಾ ಮಾತನಾಡಿ, ಕ್ರೀಡಾ ಇಲಾಖೆ ವತಿಯಿಂದ ಯುವಜನತೆಗೆ ಹಲವು ಸೌಲಭ್ಯಗಳಿವೆ. ಆದರೆ, ಈ ಕುರಿತು ಜಾಗೃತಿ ಮೂಡಿಸಿದರು, ಯಾರೂ ಸದುಪಯೋಗ ಪಡಿಸಿಕೊಳ್ಳುತ್ತಿಲ್ಲವೆಂದು ವಿಷಾದಿಸಿದರು.

ಕ್ರೀಡಾ ಇಲಾಖೆಯಲ್ಲಿ ಯುವ ಸ್ಪಂದನ ಕಾರ್ಯಕ್ರಮವು ಜನಪ್ರಿಯ ಯೋಜನೆಯಾಗಿದ್ದು, ಪ್ರತಿವರ್ಷ 50ಲಕ್ಷ ರೂ. ಖರ್ಚು ಮಾಡುತ್ತಿದೆ. ಈ ಯೋಜನೆಯ ಸದುಪಯೋಗವನ್ನು ಗ್ರಾಮೀಣ, ಬಡ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು. ಯುವ ಜನತೆಗೆ ಏನೇ ಸಮಸ್ಯೆಗಳಿದ್ದರೂ ಇಲಾಖೆಗೆ ಬಂದು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರೆ, ಸಹಾಯ ಮಾಡಲಾಗುವುದು ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಸೇಂಟ್ ಮೀರಾಸ್ ಕಾಲೇಜಿನ ಪ್ರಾಂಶುಪಾಲ ಇರ್ಫಾನ್ ಖಾನ್, ಜಾಣ ಜಾಣೆಯರ ಬಳಗದ ಸಂಚಾಲಕ ಸಯ್ಯದ್ ಯೇಜಸ್ ಪಾಷಾ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News