ಸುಮತೀಂದ್ರ ನಾಡಿಗ್ ನಿಧನಕ್ಕೆ ಸಚಿವರ ಸಂತಾಪ
Update: 2018-08-07 20:17 IST
ಬೆಂಗಳೂರು, ಆ.7: ಕನ್ನಡ ಸಾಹಿತ್ಯ ಕ್ಷೇತ್ರದ ಹಿರಿಯ ಕವಿ, ವಿಮರ್ಶಕ ಹಾಗೂ ನ್ಯಾಷನಲ್ ಬುಕ್ ಟ್ರಸ್ಟ್‌ನ ಮಾಜಿ ಅಧ್ಯಕ್ಷ ಡಾ ಸುಮತೀಂದ್ರ ನಾಡಿಗ್ ನಿಧನಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಡಾ ಜಯಮಾಲ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣಭೈರೇಗೌಡ ಸಂತಾಪ ವ್ಯಕ್ತಪಡಿಸಿದ್ದಾರೆ.
ಆಂಗ್ಲ ಭಾಷೆಯಲ್ಲಿ ಎರಡು ಸ್ನಾತಕ ಪದವಿ ಪಡೆದಿದ್ದರೂ ಕನ್ನಡ ಭಾಷೆಯಲ್ಲಿಯೇ ಸಾಹಿತ್ಯ ಕೃಷಿ ಮಾಡಿದ ಡಾ.ಸುಮತೀಂದ್ರ ನಾಡಿಗ್, ಕನ್ನಡ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದರು. ನವ್ಯ ಸಾಹಿತ್ಯದ ಪ್ರವರ್ತಕರಲ್ಲಿ ಒಬ್ಬರಾಗಿ ಕನ್ನಡ ಸಾಹಿತ್ಯಕ್ಕೆ ಆಧುನಿಕತೆಯ ಸ್ಪರ್ಶ ನೀಡಿದವರು. ಕೇವಲ ಕಾವ್ಯ ಲೋಕದಲ್ಲಿ ಮಾತ್ರವಲ್ಲದೆ ಸಣ್ಣ ಕತೆಗಳ ಕ್ಷೇತ್ರದಲ್ಲಿ ದೊಡ್ಡ ಸಾಧನೆಯನ್ನು ಮಾಡಿದ್ದಾರೆ. ಅವರ ನಿಧನ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಆತ್ಮಕ್ಕೆ ಚಿರಶಾಂತಿ ಲಭಿಸಲಿ ಎಂದು ಪ್ರಕಟನೆಯಲ್ಲಿ ತಿಳಿಸಿದರು.