ಸರಗಳ್ಳತನ ಪ್ರಕರಣ: ಮೂರೂವರೆ ಕೆ.ಜಿ ಚಿನ್ನ ಜಪ್ತಿ

Update: 2018-08-07 14:51 GMT

ಬೆಂಗಳೂರು, ಆ.7: ಸರಗಳ್ಳತನ ಪ್ರಕರಣ ಸಂಬಂಧ ಪೊಲೀಸರ ಗುಂಡೇಟು ತಿಂದು ಆರೋಪಿ ಅಚ್ಯುತ್ ಕುಮಾರ್(31) ಸಿಕ್ಕಿಬಿದ್ದಿದ್ದು, ಈತನ ವಶದಲ್ಲಿದ್ದ ಬರೋಬ್ಬರಿ 3.5 ಕೆಜಿ ಚಿನ್ನಾಭರಣ ವಶಕ್ಕೆ ಪಡೆಯುವಲ್ಲಿ ಪಶ್ಚಿಮ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದಾರೆ.

ಪ್ರಕರಣ ಕುರಿತು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್, ಕಳವು ಪ್ರಕರಣ ಸಂಬಂಧ ಜೂ.17ರಂದು ರಾತ್ರಿ ಸಮಯದಲ್ಲಿ ಜ್ಞಾನಭಾರತಿ ಠಾಣಾ ಪೊಲೀಸರು ಆರೋಪಿ ಅಚ್ಯುತ್ ಕುಮಾರ್‌ನನ್ನು ಬಂಧಿಸಿ, ಮಹಜರು ಮಾಡಲು ಕರೆದೊಯ್ಯುತ್ತಿದ್ದರು. ಈ ವೇಳೆ ಪೊಲೀಸರಿಂದ ತಪ್ಪಿಸಿಕೊಂಡಿದ್ದ ಎಂದರು.

ಆಗ ಪೊಲೀಸರು ಅಚ್ಚುತ್ ಕುಮಾರ್ ಬಲ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದರು. ನಂತರ ಅಚ್ಯುತ್‌ಗೆ ಚಿಕಿತ್ಸೆ ನೀಡಲಾಗಿತ್ತು. ಸದ್ಯ ಆರೋಪಿ ಚೇತರಿಸಕೊಂಡಿದ್ದಾನೆ. ಇನ್ನು ಈತ ಕಳವು ಮಾಡುತ್ತಿದ್ದ ಚಿನ್ನಾಭರಣಗಳನ್ನು 20 ದಿನಗಳಿಗೊಮ್ಮೆ ಸ್ನೇಹಿತ ಕೊಪ್ಪಳ ಮೂಲದ ಗವಿಸಿದ್ದೇಶ್‌ಗೆ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದ ಎನ್ನುವ ಮಾಹಿತಿ ಬೆಳಕಿಗೆ ಬಂದಿದೆ ಎಂದು ವಿವರಿಸಿದರು.

ಆರೋಪಿಗೆ ಕಳ್ಳತನ ಮಾಡಲು ಗದಗ ಮೂಲದ ಶಿವಕುಮಾರ್ ಎಂಬಾತ ಸಹಕರಿಸುತ್ತಿದ್ದ. ಗವಿಸಿದ್ದೇಶ್‌ನನ್ನು ಬಂಧಿಸಿ 1.6 ಕೋಟಿ ರೂ. ಬೆಲೆ ಬಾಳುವ 3.543 ಕೆ.ಜಿ ಚಿನ್ನಾಭರಣಗಳನ್ನು ಕೊಪ್ಪಳದ ಕೆಲ ಜುವೆಲ್ಲರಿಗಳಿಗೆ ತೆರಳಿ ಜಪ್ತಿ ಮಾಡಲಾಗಿದೆ. ಅಷ್ಟೇ ಅಲ್ಲದೆ, ಇವರ ಬಂಧನದಿಂದ ಬೆಂಗಳೂರಿನ ವಿವಿಧ ಪೊಲೀಸ್ ಠಾಣೆಗಳಲ್ಲಿ 77 ಸರಗಳ್ಳತನ ಪ್ರಕರಣ, ಬಳ್ಳಾರಿ 10, ತುಮಕೂರಿನ 5, ಬೆಂಗಳೂರು ಗ್ರಾಮಾಂತರ 4, ಹಾಸನ 3, ರಾಮನಗರ 2, ಧಾರವಾಡ 2, ದಾವಣಗೆರೆ 1, ರಾಮನಗರ ಪೊಲೀಸ್ ಠಾಣೆಯಲ್ಲಿ 2 ಸೇರಿ ಒಟ್ಟು 105 ಪ್ರಕರಣ ಬೆಳಕಿಗೆ ಬಂದಿದೆ ಎಂದು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News