ದಾಳಿಂಬೆ ಬೆಳೆಗಾರರ ಸಾಲ ಮನ್ನಾಕ್ಕೆ ಒತ್ತಾಯಿಸಿ ಧರಣಿ
ಬೆಂಗಳೂರು, ಆ.7: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ದಾಳಿಂಬೆ ಬೆಳೆಗಾರರ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿ ರೈತರು ಪ್ರತಿಭಟನೆ ನಡಸಿದರು.
ಮಂಗಳವಾರ ನಗರದ ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಎದುರು ಅಖಿಲ ಕರ್ನಾಟಕ ದಾಳಿಂಬೆ ಬೆಳೆಗಾರರ ಹೋರಾಟ ಸಮಿತಿ(ಕುಷ್ಟಗಿ) ನೇತೃತ್ವದಲ್ಲಿ ಜಮಾಯಿಸಿದ ರೈತರು, 13 ಜಿಲ್ಲೆಗಳ ದಾಳಿಂಬೆ ಬೆಳೆಗಾರರ ಸಾಲ ಮನ್ನಾ ಮಾಡಲು ಸರಕಾರ ಮುಂದಾಗಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಸಮಿತಿ ರಾಜ್ಯಾಧ್ಯಕ್ಷ ಅಬ್ದುಲ್ ನಯೀಂ, 2003-07ರಿಂದ ದಾಳಿಂಬೆ ಬೆಳೆಗಾರರು ವಿವಿಧ ಬ್ಯಾಂಕುಗಳಲ್ಲಿ ಸಾಲ ಮಾಡಿದ್ದು, 2009ರ ಹೊತ್ತಿಗೆ ನಿಯಂತ್ರಣ ಮಾಡಲು ಆಗದ ದುಂಡಾಣು ಅಂಗಮಾರಿ ರೋಗ ತಗುಲಿ ಬೆಳೆ ಸಂಪೂರ್ಣ ನಾಶವಾಯಿತು. ಆ ದಿನದಿಂದ ಇಲ್ಲಿಯವರೆಗೆ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ವಿವಿಧ ರೀತಿಯ ಹೋರಾಟ ಮಾಡಲಾಗುತ್ತಿದೆ. ಅಲ್ಲದೆ, 2008ರಲ್ಲಿ ಪ್ರಧಾನ ಮಂತ್ರಿಗಳಾದ ಮನಮೋಹನಸಿಂಗ್ ಅವರು ಸುಮಾರು 73 ಸಾವಿರ ಕೋಟಿ ಸಾಲ ಮನ್ನಾ ಮಾಡಿದಾಗ ದಾಳಿಂಬೆ ಬೆಳೆಗಾರರ ಸಾಲ ಮರುಪಾವತಿ ಪ್ರಾರಂಭ ಆಗಿರಲಿಲ್ಲ ಎಂದರು.
2005ನೆ ಸಾಲಿನಲ್ಲಿ ತೋಟಗಾರಿಕಾ ಇಲಾಖೆ ನಿರ್ದೇಶಕ ವರದಿಯೊಂದು ತಯಾರಿಸಿ ದಾಳಿಂಬೆ ಬೆಳೆಯ ಕ್ರೈಸಿಸ್ ಪಿರಿಡ್‌ಅನ್ನು ಏಪ್ರಿಲ್ 2004ರಿಂದ 2009ರವರೆಗೆ ನಿಗದಿಪಡಿಸಿ ರಾಜ್ಯದ 13 ಜಿಲ್ಲೆಗಳ ದಾಳಿಂಬೆ ಬೆಳೆಗಾರರ ಸಂಪೂರ್ಣ ಸಾಲ ಮನ್ನಾ ಮಾಡುವಂತೆ ಸಲಹೆ ನೀಡಿ ಕೇಂದ್ರಕ್ಕೆ ಕಳುಹಿಸಲಾಗಿತ್ತು. ಆದರೆ, ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.