ಸರಕಾರ ಕನ್ನಡ ಶಾಲೆಗಳನ್ನು ಬಂದ್ ಮಾಡಿದರೆ ಬಿಜೆಪಿ ಹೋರಾಟದ ಹಾದಿ ತುಳಿಯಲಿದೆ: ಎನ್.ರವಿಕುಮಾರ್
ಬೆಂಗಳೂರು, ಆ.7: ಹಾಜರಾತಿ ಸೇರಿದಂತೆ ಇನ್ನಿತರೆ ವಿಷಯಗಳನ್ನಿಟ್ಟುಕೊಂಡು ಕನ್ನಡ ಶಾಲೆ ಬಂದ್ ಮಾಡಲು ರಾಜ್ಯ ಸರಕಾರ ಮುಂದಾದರೆ, ಬಿಜೆಪಿ ಹೋರಾಟದ ಹಾದಿ ತುಳಿಯಲಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ತಿಳಿಸಿದರು.
ಮಂಗಳವಾರ ನಗರದ ಮಲ್ಲೇಶ್ವರಂನ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದ ಮಕ್ಕಳಿಗೆ ಮಾತೃ ಭಾಷೆಯಲ್ಲಿ ಶಿಕ್ಷಣ ಸಿಗಬೇಕು. ಅಲ್ಲದೆ, 28 ಸಾವಿರ ಕನ್ನಡ ಶಾಲೆಗಳನ್ನು ಮುಚ್ಚುವ ಕೆಲಸಕ್ಕೆ ಸರಕಾರ ಕೈಹಾಕಿದೆ. ಇದು ಸರಿಯಲ್ಲ ಎಂದರು.
ಶಾಲೆಗಳ ಮುಚ್ಚುವ ನಿರ್ಧಾರ ಸರಕಾರದ ಸಂಪೂರ್ಣ ವೈಫಲ್ಯವನ್ನು ತೋರಿಸಲಿದೆ. ಸರಕಾರಿ ಶಾಲಾ-ಕಾಲೇಜುಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಬೇಕು. ಆದರೆ, ಸರಕಾರ ಪರೋಕ್ಷವಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸಹಾಯ ಮಾಡುತ್ತಿದೆ. ಪ್ರಾಥಮಿಕ ಪ್ರೌಢ ಶಾಲೆಗಳಲ್ಲಿ 30 ಸಾವಿರ ಶಿಕ್ಷಕ ಹುದ್ದೆ ಖಾಲಿ ಇವೆ. ಶೀಘ್ರವಾಗಿ ಸರಕಾರ ಶಿಕ್ಷಕರ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.
ನಾಳೆ ಪ್ರವಾಸ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಆ.9 ರಿಂದ ಮೂರು ತಂಡಗಳಾಗಿ ಬಿಜೆಪಿ ರಾಜ್ಯ ಪ್ರವಾಸ ಆರಂಭಿಸುತ್ತಿದ್ದೇವೆ. ಕಲಬುರ್ಗಿ, ಬೆಂಗಳೂರು, ಬೆಂಗಳೂರು ನಗರ ಜಿಲ್ಲೆ, ಗದಗ, ಹಾವೇರಿ, ಉತ್ತರ ಕನ್ನಡ, ಧಾರವಾಡ, ಯಾದಗಿರಿ, ರಾಯಚೂರು, ಬಳ್ಳಾರಿ, ಕೊಪ್ಪಳ, ಬೆಳಗಾವಿ, ಚಿಕ್ಕೋಡಿ, ವಿಜಯಪುರ, ಬಾಗಲಕೋಟೆಯಲ್ಲಿ ಪ್ರವಾಸ ನಡೆಸಲಿದೆ ಎಂದರು.
ಶಾಸಕ ಜಗದೀಶ್ ಶೆಟ್ಟರ್ ತಂಡ ಮಧ್ಯ ಕರ್ನಾಟಕ ಭಾಗದಲ್ಲಿ ಪ್ರವಾಸ ನಡೆಸಲಿದ್ದು, ಕೆ.ಎಸ್.ಈಶ್ವರಪ್ಪ ತಂಡ ಮೈಸೂರು, ಮಂಡ್ಯ ಸೇರಿದಂತೆ ಕರಾವಳಿ ಪ್ರದೇಶದಲ್ಲಿ ಪ್ರವಾಸ ಮಾಡಲಿದೆ. ಪ್ರವಾಸದ ಸಂದರ್ಭದಲ್ಲಿ ಜಿಲ್ಲಾ ಕೋರ್ ಕಮಿಟಿ ಸಭೆ ನಡೆಸಲಾಗುತ್ತದೆ. ಸ್ಥಳೀಯ ಸಂಸ್ಥೆ ಚುನಾವಣೆ ಮತ್ತು ಅಭ್ಯರ್ಥಿಗಳ ಬಗ್ಗೆ ಚರ್ಚೆ ನಡೆಸಲಿದ್ದು, ಲೋಕಸಭಾ ಚುನಾವಣೆ ತಯಾರಿ ಬಗ್ಗೆಯೂ ಚರ್ಚೆ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಅಭಿನಂದನೆ: ರಾಜ್ಯಸಭೆಯಲ್ಲಿ 156 ಮತಗಳ ಮೂಲಕ ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗಕ್ಕೆ ಸಾಂವಿಧಾನಿಕ ಸ್ಥಾನ ನೀಡುವ 2017ರ ಮಸೂದೆಯು ಅಂಗೀಕಾರವಾಗಿದೆ ಎಂದು ಸಂಸದರಿಗೆ ರವಿಕುಮಾರ್ ಅಭಿನಂದನೆ ಸಲ್ಲಿಸಿದರು.