ರೊಹಿಂಗ್ಯಾರೊಂದಿಗೆ ಒಗ್ಗಟ್ಟು ಪ್ರದರ್ಶಿಸಿ : ಏಶಿಯ-ಪೆಸಿಫಿಕ್ ಮುಖಂಡರಿಗೆ ವಿಶ್ವಸಂಸ್ಥೆ ಸಮಿತಿ ಕರೆ

Update: 2018-08-08 17:46 GMT

ಬಾಲಿ(ಇಂಡೋನೇಶ್ಯ), ಆ.8: ತಾರತಮ್ಯದ ಧೋರಣೆ ಮತ್ತು ಹಿಂಸಾಚಾರದಿಂದ ನಲುಗಿ ಮ್ಯಾನ್ಮಾರ್‌ನ ರಖೈನ್ ರಾಜ್ಯದಿಂದ ಪಲಾಯನ ಮಾಡಿರುವ ಸುಮಾರು 90,000 ರೊಹಿಂಗ್ಯಾ ನಿರಾಶ್ರಿತರೊಂದಿಗೆ ಒಗ್ಗಟ್ಟು ಪ್ರದರ್ಶಿಸುವಂತೆ ಏಶಿಯಾ-ಪೆಸಿಫಿಕ್ ವಲಯದ ಸರಕಾರಿ ಪ್ರತಿನಿಧಿಗಳು ಹಾಗೂ ಉದ್ಯಮ ಮುಖ್ಯಸ್ಥರಿಗೆ ವಿಶ್ವಸಂಸ್ಥೆಯ ನಿರಾಶ್ರಿತರ ಸಮಿತಿ ಕರೆ ನೀಡಿದೆ.

2017ರ ಆಗಸ್ಟ್‌ನಿಂದ ಮ್ಯಾನ್ಮಾರ್‌ನಲ್ಲಿ ಪ್ರಮುಖವಾಗಿ ಮುಸ್ಲಿಂ ಅಲ್ಪಸಂಖ್ಯಾತರಾಗಿರುವ ರೊಹಿಂಗ್ಯಗಳ ವಿರುದ್ಧ ವ್ಯವಸ್ಥಿತ ಮತ್ತು ವ್ಯಾಪಕ ಹಿಂಸಾಚಾರ ನಡೆಯುತ್ತಿದ್ದು ಇದರಿಂದ ಸಾವಿರಾರು ಮಂದಿ ತಮ್ಮ ಮನೆಗಳನ್ನು ತೊರೆದು ನೆರೆಯ ಬಾಂಗ್ಲಾದೇಶಕ್ಕೆ ಪಲಾಯನ ಮಾಡಿದ್ದಾರೆ. ಈ ನಿರಾಶ್ರಿತರ ಸಮಸ್ಯೆಗೆ ಪರಿಹಾರೋಪಾಯ ರೂಪಿಸಲು ಬಾಂಗ್ಲಾದೇಶದ ಜೊತೆ ಏಕತೆ ಪ್ರದರ್ಶಿಸಬೇಕಿದೆ. ಈ ನಿಟ್ಟಿನಲ್ಲಿ ಸದಸ್ಯ ದೇಶದ ಸರಕಾರಗಳು ಯಾವ ರೀತಿಯ ಸಹಕಾರ ನೀಡಬಹುದು ಎಂಬುದನ್ನು ಪರಿಗಣಿಸುವಂತೆ ವಿಶ್ವಸಂಸ್ಥೆ ನಿರಾಶ್ರಿತರ ಸಮಿತಿ(ಯುಎನ್‌ಎಚ್‌ಸಿಆರ್)ಯ ಅಧ್ಯಕ್ಷ ಫಿಲಿಪ್ಪೊ ಗ್ರಾಂಡಿ ಹೇಳಿದರು. ಇಂಡೊನೇಶ್ಯದ ಬಾಲಿಯಲ್ಲಿ ನಡೆದ ‘ಬಾಲಿ ಕಾರ್ಯವಿಧಿ’ಯ 7ನೇ ಸಚಿವಮಟ್ಟದ ಸಮಾವೇಶದಲ್ಲಿ 26 ದೇಶಗಳ ಸಚಿವರನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು. ರಖೈನ್ ರಾಜ್ಯದ ಜನರ ಸಮಸ್ಯೆಗೆ ವಿಸ್ತೃತ ಪರಿಹಾರ ಹುಡುಕಬೇಕಿದ್ದು, ಇವರು ತಮ್ಮ ದೇಶ ತೊರೆದು ನಿರಾಶ್ರಿತರಾಗುವಂತಹ ಪರಿಸ್ಥಿತಿಯನ್ನು ನಿವಾರಿಸಬೇಕಿದೆ ಎಂದು ಗ್ರಾಂಡಿ ಹೇಳಿದರು. ತಮ್ಮ ಬದ್ಧತೆಯ ಕುರಿತ ಸಮಾಲೋಚನೆಯನ್ನು ಕಾರ್ಯರೂಪದಲ್ಲಿ ತೋರಿಸುವಂತೆ ಸದಸ್ಯ ರಾಷ್ಟ್ರಗಳನ್ನು ಒತ್ತಾಯಿಸಿದ ಅವರು, ಬಾಂಗ್ಲಾದೇಶದ ಮೇಲಿನ ನಿರಾಶ್ರಿತರ ಹೊರೆಯನ್ನು ಹೇಗೆ ಹಂಚಿಕೊಳ್ಳುವುದು ಎಂಬುದರ ಬಗ್ಗೆ ಯೋಚಿಸುವಂತೆ ತಿಳಿಸಿದರು. ರಖೈನ್ ನಲ್ಲಿ ನಡೆದ ಸ್ಥಳಾಂತರ ಕ್ರಿಯೆಗೆ ಮೂಲಕಾರಣ ಏನೆಂಬುದನ್ನು ಮೊದಲು ತಿಳಿದುಕೊಳ್ಳಬೇಕಿದೆ. ಈ ಸಮಸ್ಯೆಗೆ ವಾಸ್ತವ ಪರಿಹಾರ ಮ್ಯಾನ್ಮಾರ್‌ನಲ್ಲೇ ಅಡಗಿದೆ ಎಂದ ಅವರು, ಸಮಸ್ಯೆಯ ಪರಿಹಾರಕ್ಕೆ ಪ್ರಾದೇಶಿಕ ಮಟ್ಟದಲ್ಲಿ ಸಹಕಾರ ಬೇಕಿದೆ ಎಂದು ಒತ್ತಿ ಹೇಳಿದರು. ಇದೇ ಸಂದರ್ಭ ಅವರು ವಿಶ್ವದ ಪ್ರಮುಖ ಸಂಸ್ಥೆಗಳ ಮುಖ್ಯಸ್ಥರನ್ನುದ್ದೇಶಿಸಿ ಮಾತನಾಡಿ, ಕಾನೂನುಬದ್ಧವಾಗಿ ನಡೆಯುವ ಕಾರ್ಮಿಕರ ವಲಸೆಯನ್ನು ಹೆಚ್ಚಿಸುವಂತೆ ಹಾಗೂ ಮಾನವ ಕಳ್ಳಸಾಗಣೆಯನ್ನು ತಡೆಯುವಂತೆ ಕರೆ ನೀಡಿದರು. ನಿರಾಶ್ರಿತರನ್ನು ಗುಲಾಮಗಿರಿಗೆ ತಳ್ಳುವ ಅಪಾಯವಿದೆ ಎಂದವರು ತಿಳಿಸಿದರು.

‘ಬಾಲಿ ಕಾರ್ಯವಿಧಿ’ಯಲ್ಲಿ 48 ದೇಶಗಳ ಸರಕಾರಗಳು ಹಾಗೂ ಯುಎನ್‌ಎಚ್‌ಸಿಆರ್ ಸೇರಿದಂತೆ 4 ಅಂತರಾಷ್ಟ್ರೀಯ ಸಂಘಟನೆಗಳು ಸದಸ್ಯರಾಗಿವೆ. ಇಂಟರ್‌ನ್ಯಾಷನಲ್ ಆರ್ಗನೈಸೇಷನ್ ಫಾರ್ ಮೈಗ್ರೇಷನ್(ಐಒಎಂ), ಯುನೈಟೆಡ್ ನೇಷನ್ಸ್ ಆಫೀಸ್ ಆನ್ ಡ್ರಗ್ಸ್ ಆ್ಯಂಡ್ ಕ್ರೈಮ್ಸ್(ಯುಎನ್‌ಒಡಿಸಿ) ಇತರ ಮೂರು ಸಂಘಟನೆಗಳು. ಕಳ್ಳಸಾಗಣೆ, ಮಾನವ ಕಳ್ಳಸಾಗಣೆ, ಗಡಿಭಾಗದಲ್ಲಿ ನಡೆಯುತ್ತಿರುವ ಅಪರಾಧ ಕೃತ್ಯ ಇತ್ಯಾದಿ ಸಮಸ್ಯೆಗಳ ಬಗ್ಗೆ ಮಾತುಕತೆ ಹಾಗೂ ಚರ್ಚೆ ನಡೆಸುವ ಉದ್ದೇಶದಿಂದ ‘ಬಾಲಿ ಕಾರ್ಯವಿಧಿ’ ಆರಂಭಿಸಲಾಗಿದೆ. 2016ರ ಮಾರ್ಚ್‌ನಲ್ಲಿ ಅಂಗೀಕರಿಸಲಾದ ಬಾಲಿ ಘೋಷಣೆಯಲ್ಲಿ ನಿರಾಶ್ರಿತರಿಗೆ ಶಾಶ್ವತವಾಗಿ ನೆಲೆ ಇಲ್ಲದಿರುವ ಸಮಸ್ಯೆಯ ಬಗ್ಗೆ ಬೆಳಕು ಚೆಲ್ಲಲಾಗಿದೆ ಮತ್ತು ಒಂದೆಡೆಯಿಂದ ಇನ್ನೊಂದೆಡೆ ಸಂಚರಿಸಲು ಸುರಕ್ಷಿತ ದಾರಿಯನ್ನು ವಿಸ್ತರಿಸಲು ಹಾಗೂ ಇವರ ಜೀವಕ್ಕೆ ಎದುರಾಗಿರುವ ಅಪಾಯದ ಭೀತಿಯನ್ನು ನಿವಾರಿಸುವ ಅಗತ್ಯದ ಬಗ್ಗೆ ಒತ್ತಿ ಹೇಳಲಾಗಿದೆ. 

ಪೂರಕ ಕ್ರಮಗಳು

  ಬಾಂಗ್ಲಾದೇಶದಲ್ಲಿ ನಿರಾಶ್ರಿತರಿಗಾಗಿ ಆಸ್ಪತ್ರೆಗಳನ್ನು ಆರಂಭಿಸಲು ನೆರವಾದರೆ ಇದರಿಂದ ಸ್ಥಳೀಯರಿಗೂ ಸಹಾಯವಾಗುತ್ತದೆ. ಬಾಂಗ್ಲಾದೇಶದಿಂದ ರಫ್ತಾಗುವ ಉಡುಪುಗಳ ಮೇಲಿನ ರಫ್ತುಸುಂಕವನ್ನು ಕಡಿಮೆಗೊಳಿಸಬಹುದು. ಅಥವಾ ಬಾಂಗ್ಲಾದೇಶದ ಜನತೆಗೆ ನೀಡುತ್ತಿರುವ ‘ಅತಿಥಿ ಕಾರ್ಮಿಕರ ಪ್ರಮಾಣವನ್ನು ವಿಸ್ತರಿಸಬಹುದು. ಇಂತಹ ಪೂರಕ ಕ್ರಮಗಳ ಮೂಲಕ ಬಾಂಗ್ಲಾದೇಶದ ಮೇಲಿರುವ ಸುಮಾರು 90,000 ನಿರಾಶ್ರಿತರ ಹೊರೆಯನ್ನು ಸ್ವಲ್ಪಮಟ್ಟಿಗೆ ತಗ್ಗಿಸಬಹುದಾಗಿದೆ ಎಂದು ಫಿಲಿಪ್ಪೊ ಗ್ರಾಂಡಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News