ಅಕ್ರಮ ಹಣ ವಹಿವಾಟು: ಮಲೇಶ್ಯಾ ಮಾಜಿ ಪ್ರಧಾನಿಯ ವಿರುದ್ಧ ಮೂರು ಪ್ರಕರಣ ದಾಖಲು

Update: 2018-08-08 16:54 GMT

ಕೌಲಾಲಂಪುರ, ಆ.8: ಅಧಿಕಾರ ದುರುಪಯೋಗ ಮಾಡಿಕೊಂಡಿರುವ ಆರೋಪ ಎದುರಿಸುತ್ತಿರುವ ಮಲೇಶ್ಯದ ಮಾಜಿ ಪ್ರಧಾನಿ ನಜೀಬ್ ರಝಾಕ್ ವಿರುದ್ಧ ಅಕ್ರಮ ಹಣ ವಹಿವಾಟಿನ ಕುರಿತ ಮೂರು ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಸರಕಾರದ ಖಜಾನೆಯಿಂದ ನಾಪತ್ತೆಯಾಗಿರುವ ಸುಮಾರು 10 ಮಿಲಿಯನ್ ಡಾಲರ್ ಹಣವು ನಜೀಬ್ ಅವರ ಖಾಸಗಿ ಬ್ಯಾಂಕ್ ಖಾತೆಗೆ ಜಮೆಯಾಗಿರುವ ಪ್ರಕರಣ ಇದಾಗಿದೆ ಎಂದು ಕೆಳನ್ಯಾಯಾಲಯದಲ್ಲಿ ಓದಿ ಹೇಳಲಾಗಿದೆ. ಈ ಪ್ರಕರಣವನ್ನು ನ್ಯಾಯಾಧೀಶರು ಹೈಕೋರ್ಟ್‌ಗೆ ವರ್ಗಾಯಿಸಿದ್ದಾರೆ. ಅಕ್ರಮ ಹಣ ವಹಿವಾಟಿನ ಪ್ರಕರಣ ಸಾಬೀತಾದರೆ 15 ವರ್ಷಗಳ ಜೈಲುಶಿಕ್ಷೆಯ ಜೊತೆಗೆ ಅಕ್ರಮ ಹಣ ವರ್ಗಾವಣೆಯ ಮೊತ್ತದ ಐದುಪಟ್ಟು ದಂಡ ಅಥವಾ 5 ಮಿಲಿಯನ್ ರಿಂಗ್ಗಿಟ್(ಮಲೇಶ್ಯದ ಕರೆನ್ಸಿ)- ಇದರಲ್ಲಿ ಯಾವುದು ಅಧಿಕವೋ ಅದನ್ನು ವಿಧಿಸಲಾಗುತ್ತದೆ.

ಅಧಿಕಾರ ದುರುಪಯೋಗ ಮತ್ತು ವಿಶ್ವಾಸದ್ರೋಹ ಎಸಗಿದ ಕ್ರಿಮಿನಲ್ ಪ್ರಕರಣದಡಿ ಕಳೆದ ತಿಂಗಳು ನಜೀಬ್‌ರನ್ನು ಬಂಧಿಸಲಾಗಿತ್ತು. ತಾನು ನಿರ್ದೋಷಿ ಎಂದು ತಿಳಿಸಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಪರಿಗಣಿಸಿ ಅವರಿಗೆ ಜಾಮೀನು ನೀಡಲಾಗಿತ್ತು. ಆದರೆ ಅವರ ಪಾಸ್‌ಪೋರ್ಟನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಕಳೆದ ಮೇ ತಿಂಗಳಿನಲ್ಲಿ ನಡೆದ ಚುನಾವಣೆಯಲ್ಲಿ ನಜೀಬ್ ಪರಾಜಿತರಾಗಿದ್ದು, ಬಳಿಕ ನಜೀಬ್ ಹಾಗೂ ಪತ್ನಿಗೆ ದೇಶ ಬಿಟ್ಟು ತೆರಳದಂತೆ ನಿರ್ಬಂಧ ವಿಧಿಸಲಾಗಿದೆ.

ಈ ಹಿಂದೆ ನಜೀಬ್ ಅವರ ಆಪ್ತ ಸಲಹಾಗಾರರಾಗಿದ್ದು ಬಳಿಕ ಅವರ ವಿರೋಧಿಯಾಗಿ ಮಾರ್ಪಟ್ಟಿದ್ದ ಮಹಾತಿರ್ ಮುಹಮ್ಮದ್ ಮಲೇಶ್ಯಾದ ನೂತನ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಸರಕಾರದ ಹಣ ದುರುಪಯೋಗ ಪ್ರಕರಣದ ಮರುತನಿಖೆಗೆ ಆದೇಶಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News