ಕೇರಳದಲ್ಲಿ ಮಳೆಯ ಆರ್ಭಟಕ್ಕೆ 22 ಬಲಿ

Update: 2018-08-09 16:00 GMT

ತಿರುವನಂತಪುರಂ, ಆ.9: ಕೇರಳದಲ್ಲಿ ಬುಧವಾರದಿಂದ ಸುರಿಯುತ್ತಿರುವ ಮುಸಲಧಾರೆ ಮಳೆಯಿಂದ ಪ್ರವಾಹಪರಿಸ್ಥಿತಿ ನೆಲೆಸಿದ್ದು ರಾಜ್ಯ ಸರಕಾರ ಭೂಸೇನೆ, ನೌಕಾದಳ ಹಾಗೂ ವಾಯುಸೇನೆಯ ನೆರವು ಯಾಚಿಸಿದೆ. ಈ ಮಧ್ಯೆ, ಮಳೆಯಿಂದ 20 ಮಂದಿ ಸಾವನ್ನಪ್ಪಿದ್ದು ವಿಶ್ವದ ಅತ್ಯಂತ ದೊಡ್ಡ ಕಮಾನು ಅಣೆಕಟ್ಟು ಎನಿಸಿರುವ ಇಡುಕ್ಕಿ ಅಣೆಕಟ್ಟಿನ ಗೇಟುಗಳನ್ನು 26 ವರ್ಷದ ಬಳಿಕ ತೆರೆದು ಹೆಚ್ಚುವರಿ ನೀರನ್ನು ಹೊರಬಿಡಲಾಗಿದೆ.

ಕೇರಳದ ಅಳಪ್ಪುಝದಲ್ಲಿ ನಡೆಯುವ ಪ್ರಸಿದ್ಧ ನೆಹರೂ ಟ್ರೋಫಿ ದೋಣಿ ಸ್ಪರ್ಧೆಯನ್ನು ರದ್ದುಗೊಳಿಸಲಾಗಿದೆ. ಪೆರಿಯಾರ್ ನದಿಯಲ್ಲಿ ನೀರಿನ ಮಟ್ಟ ಏರುತ್ತಿರುವ ಹಿನ್ನೆಲೆಯಲ್ಲಿ ಕೊಚ್ಚಿ ವಿಮಾನನಿಲ್ದಾಣ ಭಾಗಶಃ ಕಾರ್ಯ ನಿರ್ವಹಿಸಿದ್ದು ಇಲ್ಲಿ ವಿಮಾನಗಳನ್ನು ಇಳಿಯಲು ಅಧಿಕಾರಿಗಳು ಅನುಮತಿ ನೀಡಿಲ್ಲ. ರಾಜ್ಯದಲ್ಲಿ ಪರಿಸ್ಥಿತಿ ನಿಜಕ್ಕೂ ಗಂಭೀರವಾಗಿದೆ. ಎಡೆಬಿಡದೆ ಮಳೆ ಸುರಿಯುತ್ತಿರುವುದರಿಂದ ರಾಜ್ಯದಲ್ಲಿರುವ 22 ಅಣೆಕಟ್ಟಿನ ಗೇಟುಗಳನ್ನು ತೆರೆಯುವುದು ಅನಿವಾರ್ಯವಾಗಿದೆ. ಇತ್ತೀಚಿನ ದಿನಗಳಲ್ಲಿ ಇಂತಹ ಪರಿಸ್ಥಿತಿ ಎದುರಾಗಿಲ್ಲ. ಮೂರೂ ಸೇನಾಪಡೆಗಳ ನೆರವನ್ನು ಕೋರಿದ್ದೇವೆ. ಅತೀ ಹೆಚ್ಚು ಹಾನಿಗೊಳಗಾದ ಆರು ಜಿಲ್ಲೆಗಳಲ್ಲಿ ನಿಯಂತ್ರಣಾ ಕೊಠಡಿಗಳನ್ನು ಆರಂಭಿಸಲಾಗುವುದು ಎಂದು ತುರ್ತು ಸಚಿವ ಸಂಪುಟ ಸಭೆ ನಡೆಸಿದ ಬಳಿಕ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.

ವಯನಾಡ್ ಜಿಲ್ಲೆಯಲ್ಲಿ ಭೂಕುಸಿತ ಸಂಭವಿಸಿದ್ದು ಹೊರಪ್ರದೇಶದೊಂದಿಗೆ ಕಡಿತಗೊಂಡಿರುವ ರಸ್ತೆ ಸಂಪರ್ಕವನ್ನು ಸರಿಪಡಿಸಲು ಸೇನಾಪಡೆಯ ನೆರವು ಕೋರಲಾಗಿದೆ. ಉತ್ತರ ಕೇರಳದಲ್ಲಿ ಭೂಕುಸಿತ ಹಾಗೂ ಮಳೆಹಾವಳಿಯಿಂದ ಇಡುಕ್ಕಿಯಲ್ಲಿ ಒಂದೇ ಕುಟುಂಬದ ಐದು ಮಂದಿ ಸೇರಿದಂತೆ 11 ಮಂದಿ, ಮಲಪ್ಪುರಂನಲ್ಲಿ 6, ಕಣ್ಣೂರಿನಲ್ಲಿ ಇಬ್ಬರು ಹಾಗೂ ವಯನಾಡ್‌ನಲ್ಲಿ ಒಬ್ಬರು ಸೇರಿದಂತೆ 20 ಮಂದಿ ಸಾವನ್ನಪ್ಪಿದ್ದು 10 ಮಂದಿ ನಾಪತ್ತೆಯಾಗಿದ್ದಾರೆ. ಆರು ಜಿಲ್ಲೆಗಳಲ್ಲಿ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದ್ದು, ಭೂಕುಸಿತದ ಭೀತಿ ಇರುವ ಕಾರಣ ಬೆಟ್ಟಪ್ರದೇಶಗಳಿಗೆ ಪ್ರವಾಸ ತೆರಳದಂತೆ ಜನತೆಗೆ ಸಲಹೆ ನೀಡಲಾಗಿದೆ. ಅಲ್ಲದೆ ಅಣೆಕಟ್ಟು ಪ್ರದೇಶಗಳಲ್ಲಿ ಗುಂಪುಗೂಡಬೇಡಿ ಹಾಗೂ ಸೆಲ್ಫೀ ತೆಗೆದುಕೊಳ್ಳುವ ಸಾಹಸಕ್ಕೆ ಮುಂದಾಗಬೇಡಿ ಎಂದು ಮುಖ್ಯಮಂತ್ರಿ ಜನತೆಗೆ ಮನವಿ ಮಾಡಿದ್ದಾರೆ.

ರಾಜ್ಯದ ತಗ್ಗುಪ್ರದೇಶಗಳಲ್ಲಿ ನೆರೆಹಾವಳಿಯ ಭೀತಿ ತಲೆದೋರಿದ್ದು ಸುಮಾರು 3,000 ಕುಟುಂಬಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ(ಎನ್‌ಡಿಆರ್‌ಎಫ್)ಯ ಮೂರು ತುಕಡಿಗಳು ಕಾರ್ಯ ನಿರತವಾಗಿದ್ದು ಹೆಚ್ಚುವರಿಯಾಗಿ ಆರು ತುಕಡಿಗಳನ್ನು ರಾಜ್ಯಕ್ಕೆ ರವಾನಿಸುವಂತೆ ಕೋರಲಾಗಿದೆ. ಯಾವುದೇ ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತ ಸನ್ನದ್ಧ ಸ್ಥಿತಿಯಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇಡುಕ್ಕಿ ಅಣೆಕಟ್ಟಿನ ಗೇಟ್ ಓಪನ್

ವಿಶ್ವದ ಅತೀ ದೊಡ್ಡ ಕಮಾನು ಅಣೆಕಟ್ಟು ಎನಿಸಿರುವ ಇಡುಕ್ಕಿ ಅಣೆಕಟ್ಟಿನ ಗೇಟನ್ನು ಕಳೆದ 26 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ತೆರೆದು ಹೆಚ್ಚುವರಿ ನೀರನ್ನು ಹೊರಗೆ ಬಿಡಲಾಗಿದೆ. ಇಡುಕ್ಕಿ ಜಲಾಶಯ ಮೂರು ಆಣೆಕಟ್ಟುಗಳನ್ನು ಹೊಂದಿದೆ. ಪೆರಿಯಾರ್‌ನಲ್ಲಿರುವ ಮುಖ್ಯ ಅಣೆಕಟ್ಟಿನಲ್ಲಿ ಅತ್ಯಧಿಕ ನೀರು ಸಂಗ್ರಹವಾಗುತ್ತದೆ. ಈ ಅಣೆಕಟ್ಟಿಗೆ ಗೇಟು ನಿರ್ಮಿಸಿಲ್ಲ, ಆದರೆ ಎರಡೂ ಬದಿಯಲ್ಲಿರುವ ಬೆಟ್ಟದ ಕಲ್ಲಿನ ಗೋಡೆಯಿಂದ ಇಲ್ಲಿ ಪ್ರಾಕೃತಿಕ ಗೇಟ್‌ನ ರಚನೆಯಾಗಿದೆ. ಚೆರುಥೋನಿ ಮತ್ತು ಕುಳಮಾವು ಇತರ ಎರಡು ಅಣೆಕಟ್ಟುಗಳು. ಚೆರುಥೋನಿ ಅಣೆಕಟ್ಟಿನ ಗೇಟನ್ನು ಅರ್ಧ ತೆರೆದರೂ ಇತರ ಅಣೆಕಟ್ಟಿನಲ್ಲಿ ನೀರು ಹರಿವಿನ ಪ್ರಮಾಣ ಹೆಚ್ಚಾಗುವ ಕಾರಣ ಈ ಆಣೆಕಟ್ಟುಗಳ ಗೇಟನ್ನೂ ತೆರೆಯಬೇಕಾಗುತ್ತದೆ. ಜಿಲ್ಲೆಯಲ್ಲಿ 14 ಅಣೆಕಟ್ಟುಗಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News