ಐಸಿಯುನಲ್ಲಿದ್ದ ಮೃತದೇಹವನ್ನು ಕಚ್ಚಿದ ಇಲಿಗಳು !

Update: 2018-08-09 08:17 GMT

ಭೋಪಾಲ್, ಆ. 9: ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಾಗಿ ನಂತರ ಮೃತಪಟ್ಟ 70 ವರ್ಷದ ವೃದ್ಧರೊಬ್ಬರ ಮೈಯ್ಯಲ್ಲಿ ಇಲಿ ಕಚ್ಚಿದ ಗುರುತುಗಳಿವೆ ಎಂದು ಅವರ ಕುಟುಂಬ ಸದಸ್ಯರು ಆರೋಪಿಸಿದ್ದಾರೆ.

ಈ ಘಟನೆ ಮಧ್ಯ ಪ್ರದೇಶದ ದಾಮೋಹ್ ಜಿಲ್ಲೆಯ ಸುಖ ಸತ್ಪರ ಗ್ರಾಮದಲ್ಲಿ ನಡೆದಿದೆ. ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿದ್ದ ವೃದ್ಧ ವ್ಯಕ್ತಿ ಜಗದೀಶ್ ಚದರ್ ಮೃತಪಟ್ಟ ನಂತರ ಆಸ್ಪತ್ರೆ ಕುಟುಂಬಕ್ಕೆ ಮೃತದೇಹ ಹಸ್ತಾಂತರಿಸಿದಾಗ ಇಲಿ ಕಚ್ಚಿದ ಗುರುತುಗಳು ಕಂಡು ಬಂದಿದ್ದು ಈ ಬಗ್ಗೆ ಆಸ್ಪತ್ರೆ ತನಿಖೆಗೆ ಆದೇಶಿಸಿದೆ.

ಸೋಮವಾರ ರಾತ್ರಿ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತಾದರೆ ಮರುದಿನ ಮುಂಜಾವು 2 ಗಂಟೆಗೆ ಅವರು ಮೃತಪಟ್ಟರೆಂದು ಘೋಷಿಸಲಾಗಿತ್ತು. ಮೃತದೇಹ ಕುಟುಂಬಕ್ಕೆ ಹಸ್ತಾಂತರಿಸಲ್ಪಟ್ಟ ನಂತರ ಎಡಗಣ್ಣಿನ ಬದಿಯಲ್ಲಿ ಗಾಯ ಹಾಗೂ ಮುಲಾಮು ಹಚ್ಚಿದ ಗುರುತುಗಳಿದ್ದವು. ಏನೆಂದು ಪ್ರಶ್ನಿಸಿದಾಗ ಆಸ್ಪತ್ರೆ ಸಿಬ್ಬಂದಿ ಇಲಿ ಕಚ್ಚಿದ್ದಾಗಿ ತಿಳಿಸಿದರು ಎಂದು ಮೃತರ ಪುತ್ರ ವೀರೇಂದರ್ ಚದರ್ ಹೇಳಿದ್ದಾರಲ್ಲದೆ ಈ ಬಗ್ಗೆ ಸೂಕ್ತ ಕ್ರಮಕ್ಕಾಗಿ ಆಸ್ಪತ್ರೆಯನ್ನು ಆಗ್ರಹಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಸಿವಿಲ್ ಸರ್ಜನ್ ಡಾ. ಮಮತಾ ತಿಮೊರಿ ತಾವು ಆ ದಿನ ಕರ್ತವ್ಯದಲ್ಲಿದ್ದ ದಾದಿಯನ್ನು ಸೇವೆಯಿಂದ ವಜಾಗೊಳಿಸಿದ್ದಾಗಿ ಹಾಗೂ ಪ್ರಕರಣದ ತನಿಖೆಗೆ ಆದೇಶಿಸಿದ್ದಾಗಿ ತಿಳಿಸಿದ್ದಾರೆ. ಇಲಿಗಳ ನಾಶಕ್ಕಾಗಿ ಇಂದೋರ್ ಮೂಲದ ಕಂಪೆನಿಯನ್ನು ಸಂಪರ್ಕಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಆಸ್ಪತ್ರ್ರೆಯೊಂದರ ತೀವ್ರ ನಿಗಾ ಘಟಕದಲ್ಲಿ ಇಲಿಗಳಿರುವುದು ಒಂದು ಗಂಭೀರ ವಿಚಾರ, ಈ ಬಗ್ಗೆ ತನಿಖೆ ನಡೆದು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮಾನವ ಹಕ್ಕು ಕಾರ್ಯಕರ್ತ ಮನೋಜ್ ದೇವರಿಯ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News