ಫಲಾನುಭವಿಗಳ ಖಾತೆಗೆ ನೇರವಾಗಿ ಸಹಾಯ ಧನ ಪಾವತಿ: ಸಚಿವ ಪ್ರಿಯಾಂಕ್ ಖರ್ಗೆ

Update: 2018-08-10 13:51 GMT

ಬೆಂಗಳೂರು, ಆ. 10: ಸಮಾಜ ಕಲ್ಯಾಣ ಇಲಾಖೆಯಡಿ ಬರುವ ಎಲ್ಲ ನಿಗಮ ಮಂಡಳಿಗಳ ಮೂಲಕ ನೀಡುವ ಸಹಾಯ ಸೌಲಭ್ಯವನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಪಾವತಿಸುವ ವ್ಯವಸ್ಥೆಯನ್ನು ಶೀಘ್ರದಲ್ಲೆ ಜಾರಿಗೆ ತರಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಶುಕ್ರವಾರ ಡಾ.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಸಹಾಯಧನ ಪಾವತಿ ವ್ಯವಸ್ಥೆಗೆ ಚಾಲನೆ ನೀಡಿ ಮಾತನಾಡಿದ ಅವರು, ಇಲಾಖೆಯ ವ್ಯಾಪ್ತಿಯಲ್ಲಿನ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಮೂಲಕ ಆರ್ಥಿಕ ಸಹಾಯ ಪಡೆಯುವ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಆರ್ಥಿಕ ನೆರವು ಜಮಾ ಮಾಡಲು ಅನುಕೂಲವಾಗುವಂತೆ ಬೆಂಗಳೂರಿನ ವಿಶ್ವೇಶ್ವರಯ್ಯ ಗೋಪುರ ಕಟ್ಟಡದಲ್ಲಿರುವ ನಿಗಮದ ಕಚೇರಿಯಲ್ಲೆ ಬ್ಯಾಂಕ್ ಶಾಖೆಯೊಂದನ್ನು ಆರಂಭಿಸಲಾಗಿದೆ ಎಂದರು.

ಫಲಾನುಭವಿಯೊಬ್ಬರಿಗೆ ಮಂಜೂರಾದ 6ಲಕ್ಷ ರೂ.ಸಹಾಯ ಸೌಲಭ್ಯವನ್ನು ಇದೇ ವೇಳೆ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಆನ್‌ಲೈನ್ ಮೂಲಕ ವರ್ಗಾಯಿಸುವುದರೊಂದಿಗೆ ನೂತನ ಬ್ಯಾಂಕ್ ಶಾಖೆಯಲ್ಲಿ ಈ ಪ್ರಕ್ರಿಯೆಗೆ ಚಾಲನೆ ನೀಡಿದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭಿವೃದ್ಧಿಗಾಗಿ ನಿಗಮವು ಅರ್ಹ ಫಲಾನುಭವಿಗಳನ್ನು ಗುರುತಿಸಿ ಸರಕಾರದ ಸೌಲಭ್ಯಗಳನ್ನು ವಿತರಿಸುವಲ್ಲಿ ಇನ್ನೂ ಹೆಚ್ಚು ಕ್ರಿಯಾಶೀಲವಾಗಬೇಕು ಎಂದು ಅವರು ಇದೇ ಸಂದರ್ಭದಲ್ಲಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಸಚಿವರು ಹಾಗೂ ಶಾಸಕರ ಅಧ್ಯಕ್ಷತೆಗಳಲ್ಲಿರುವ ಸಮಿತಿಗಳ ಶಿಫಾರಸ್ಸಿನಂತೆ ನಿಗಮದ ವಿವಿಧ ಯೋಜನೆಗಳ ಲಾಭ ಪಡೆಯುವ ಫಲಾನುಭವಿಗಳಿಗೆ ಚೆಕ್ ಮೂಲಕ ಹಣಕಾಸಿನ ನೆರವು ನೀಡುತ್ತಿದ್ದ ಪದ್ಧತಿಯಿಂದ ಆಗುತ್ತಿದ್ದ ವಿಳಂಬವನ್ನು ತಪ್ಪಿಸಿ ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾಯಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂದರು.

ನಿಗಮದಿಂದ ವಿವಿಧ ಯೋಜನೆಗಳಡಿ ಲಾಭ ಹೊಂದುವ ಫಲಾನುಭವಿಗಳಿಗೆ ಈ ಪ್ರಯೋಜನ ದೊರೆಯಲಿದೆಯೆಂದ ಅವರು, ಅಭಿವೃದ್ಧಿ ನಿಗಮದ ಮೂಲಕ ಹಿಂದಿನ ವರ್ಷ 35 ಸಾವಿರ ಮಂದಿಗೆ 242 ಕೋಟಿ ರೂ.ಆರ್ಥಿಕ ಸಹಾಯ ನೀಡಲಾಗಿತ್ತು. ಫಲಾನುಭವಿಗಳಿಗೆ ಸೌಲಭ್ಯಗಳನ್ನು ನೀಡುವಲ್ಲಿ ಆಗುತ್ತಿದ್ದ ವಿಳಂಬವನ್ನು ತಪ್ಪಿಸುವ ದೃಷ್ಟಿಯಿಂದ ಹಾಗೂ ಪಾರದರ್ಶಕ ಆಡಳಿತ ನೀಡುವ ಸಲುವಾಗಿ ನಿಗಮದ ಕಚೇರಿಯಲ್ಲಿಯೇ ಇಂಡಿಯನ್ ಬ್ಯಾಂಕ್ ಶಾಖೆಯನ್ನು ಆರಂಭಿಸಲಾಗಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News