ಕೊಲೆಗಡುಕರಿಗೆ ಬಿಜೆಪಿ ರಕ್ಷಣೆ ನೀಡುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಪ್ರತಿಭಟನೆ

Update: 2018-08-10 18:46 GMT

ಬೆಂಗಳೂರು, ಆ.10: ಅಮಾಯಕ ಹಿಂದೂಗಳಿಬ್ಬರನ್ನು ಹತ್ಯೆಗೈದಿರುವ ಆರೋಪಿಗಳಿಗೆ ಬಿಜೆಪಿ ರಕ್ಷಣೆ ನೀಡುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಶುಕ್ರವಾರ ನಗರದ ಆನಂದ ವೃತ್ತದ ಗಾಂಧಿ ಪ್ರತಿಮೆ ಎದುರು ರಾಜಾಜಿನಗರ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಕಮಿಟಿಯ ಮಾಹಿತಿ ತಂತ್ರಜ್ಞಾನ ವಿಭಾಗದ ನೇತೃತ್ವದಲ್ಲಿ ಜಮಾಯಿಸಿದ ಕಾಂಗ್ರೆಸ್ ಸದಸ್ಯರು, ಇಬ್ಬರು ಮುಗ್ಧ ಹಿಂದೂಗಳನ್ನು ಕೊಂದ ಬಿಜೆಪಿ ಪಕ್ಷದ ಯುವ ಮೋರ್ಚ ಮುಖಂಡನ ರಕ್ಷಣೆಗೆ ಬಿಜೆಪಿ ಪಕ್ಷ ನಿಂತಿದೆ ಎಂದು ಆರೋಪಿಸಿದರು.

ಈ ಕುರಿತು ಮಾತನಾಡಿದ ಕಾಂಗ್ರೆಸ್ ಮುಖಂಡ ವಿ.ಶೇಖರ್, ಇತ್ತೀಚಿಗೆ ನಗರದಲ್ಲಿ ನಡೆದ ಇಬ್ಬರು ಅಮಾಯಕರನ್ನು ಕೊಲೆ ಮಾಡಲಾಗಿದಲ್ಲದೆ, ಅವರ ಮೃತದೇಹಗಳನ್ನು ಪತ್ತೆಯಾಗದಂತೆ ನಗರದ ಹೊರವಲಯದಲ್ಲಿ ಸುಟ್ಟ ಹಾಕಲಾಗಿದೆ. ಈ ಪ್ರಕರಣದ ಪ್ರಮುಖ ಆರೋಪಿಸಿ ತೇಜಸ್ ಎಂಬಾತ ಬಿಜೆಪಿ ಪಕ್ಷದ ಸಕ್ರಿಯ ಕಾರ್ಯಕರ್ತನಾಗಿದ್ದಾನೆ ಎಂದು ದೂರಿದರು.

ಆರೋಪಿ ತೇಜಸ್, ಬಿಜೆಪಿ ನಾಯಕರ ಸಂಪರ್ಕದಲ್ಲಿದ್ದು, ಸುಮಾರು ದಿನಗಳ ಕಾಲ ರಾಜರೋಷವಾಗಿ ತಿರುಗಾಡುತ್ತಿದ್ದು, ಆತನ ಬಂಧನದ ನಂತರವೂ ಬಿಜೆಪಿ ನಾಯಕರು ಏಕೆ ವೌನಕ್ಕೆ ಶರಣಾಗಿದ್ದಾರೆ ಎಂಬುದನ್ನು ಜನತೆಗೆ ತಿಳಿಸಬೇಕು ಎಂದು ಆಗ್ರಹಿಸಿದರು.
ಚುನಾವಣೆ ಸಂದರ್ಭದಲ್ಲಿ ರಾಜ್ಯದಲ್ಲಿ ಯಾರೇ ಮೃತಪಟ್ಟರು ಹಾಗೂ ಕೊಲೆಯಾದರೂ ಉದ್ದೇಶಪೂರ್ವಕವಾಗಿ ಹಿಂದೂಗಳು ಎಂದೆಲ್ಲಾ ಸುಳ್ಳು ಹೇಳಿಕೊಂಡು ಬಿಜೆಪಿ ನಾಯಕರು ರಾಜ್ಯವ್ಯಾಪ್ತಿ ಧರಣಿ ಪ್ರತಿಭಟನೆಗಳನ್ನು ನಡೆಸಿದ್ದರು. ಅಷ್ಟೇ ಅಲ್ಲದೆ, ರಾಜ್ಯದ ಜನತೆಗೆ ತಪ್ಪು ಮಾಹಿತಿಯನ್ನು ರವಾನಿಸುತ್ತಿದ್ದರು. ಮೃತಪಟ್ಟ ವ್ಯಕ್ತಿಗಳ ಮಾಹಿತಿಯನ್ನೆ ಪಡೆಯದೆ ರಾಜ್ಯದ ಬಿಜೆಪಿ ಮುಖಂಡರು ಅವರ ಮನೆಗೆ ಹೋಗಿ ಸಾಂತ್ವನ ಹೇಳುವುದೇ ನಿತ್ಯದ ಕಾರ್ಯಕ್ರಮವನ್ನಾಗಿ ಮಾಡಿಕೊಂಡಿದ್ದರು ಎಂದು ವಾಗ್ದಾಳಿ ನಡೆಸಿದರು.

ಸಾವಿನಲ್ಲೂ ರಾಜಕೀಯ ಮಾಡುವ ಬಿಜೆಪಿ ನಾಯಕರು ಈ ಜೋಡಿ ಕೊಲೆಯಲ್ಲಿ ಮೃತಪಟ್ಟ ಕುಟುಂಬಕ್ಕೆ ಏಕೆ ಸಾಂತ್ವನ ಹೇಳಲಿಲ್ಲ. ಈ ಮುಗ್ಧರು ಹಿಂದೂಗಳಲ್ಲವೆ ಎಂದು ಪ್ರಶ್ನಿಸಿದ ಅವರು, ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ರಾಜ್ಯಾಧ್ಯಕ್ಷರಾದ ಬಿ.ಎಸ್.ಯಡಿಯೂರಪ್ಪ, ಆರ್. ಅಶೋಕ್, ಶೋಭಾ ಕರದ್ಲಾಂಜೆ ಮುಗ್ಧರ ಸಾವಿನಲ್ಲಿ ಮೌನ ವಹಿಸಿರುವುದೇಕೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News