ವಸುಂಧರಾ ರಾಜೆ ಕೈಗೊಂಡ ಯಾತ್ರೆಯ ವಿವರ ಸಲ್ಲಿಸಲು ಹೈಕೋರ್ಟ್ ನೋಟಿಸ್

Update: 2018-08-11 03:58 GMT

ಜೈಪುರ, ಆ. 11: ಮುಖ್ಯಮಂತ್ರಿ ವಸುಂಧರಾ ರಾಜೆ ಕೈಗೊಂಡಿರುವ ಗೌರವ ಯಾತ್ರೆಯ ಖರ್ಚು ವೆಚ್ಚಗಳ ವಿವರವನ್ನು ಆ. 16 ಒಳಗಾಗಿ ಸಲ್ಲಿಸುವಂತೆ ರಾಜಸ್ಥಾನ ಹೈಕೋರ್ಟ್, ರಾಜಸ್ಥಾನ ಬಿಜೆಪಿ ಅಧ್ಯಕ್ಷ ಮದನ್‌ಲಾಲ್ ಸೈನಿ ಅವರಿಗೆ ನೋಟಿಸ್ ನೀಡಿದೆ. ಇದರಿಂದ ರಾಜಸ್ಥಾನದ ಆಡಳಿತಾರೂಢ ಬಿಜೆಪಿಗೆ ತೀವ್ರ ಮುಖಭಂಗವಾದಂತಾಗಿದೆ.

"ಮುಖ್ಯಮಂತ್ರಿಯ ಯಾತ್ರೆ ಪಕ್ಷದ ಚುನಾವಣಾ ಭವಿಷ್ಯಕ್ಕಾಗಿ ನಡೆದಿದ್ದರೂ, ಇದರ ವೆಚ್ಚವನ್ನು ಸರ್ಕಾರಿ ಇಲಾಖೆಗಳು ಭರಿಸುತ್ತಿವೆ" ಎಂದು ವಕೀಲ ವಿಭೂತಿಭೂಷಣ್ ಎಂಬವರು ಹೈಕೋರ್ಟ್‌ನಲ್ಲಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಆಪಾದಿಸಿದ್ದಾರೆ. ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರದೀಪ್ ನಂದರಜೋಗ್ ಅವರು ಬಿಜೆಪಿ ಅಧ್ಯಕ್ಷರಿಗೆ ಈ ಸಂಬಂಧ ನೋಟಿಸ್ ನೀಡಿದ್ದಾರೆ.

ಸೈನಿ ಅವರಲ್ಲದೇ ಮುಖ್ಯ ಕಾರ್ಯದರ್ಶಿ, ಲೋಕೋಪಯೋಗಿ ಇಲಾಖೆ ಪ್ರಧಾನ ಕಾರ್ಯದರ್ಶಿ ಮತ್ತು ಮುಖ್ಯ ಎಂಜಿನಿಯರ್ ಅವರನ್ನೂ ಪ್ರತಿವಾದಿಗಳಾಗಿ ಮಾಡಲಾಗಿದೆ. ವಿಚಾರಣೆಯ ವೇಳೆ ವಾದ ಮಂಡಿಸಿದ ಲೋಕೋಪಯೋಗಿ ಇಲಾಖೆ ವಕೀಲರು, "ಸಿಎಂ ಅವರ ಗೌರವ ಯಾತ್ರೆಯ ವೆಚ್ಚವನ್ನು ಭರಿಸುವಂತೆ ಹೊರಡಿಸಿದ್ದ ಆದೇಶವನ್ನು ವಾಪಾಸು ಪಡೆಯಲಾಗಿದೆ" ಎಂದು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News