ಕೊಲ್ಕತ್ತಾ: ಅಮಿತ್ ಶಾರನ್ನು ಸ್ವಾಗತಿಸಿದ ‘ಬಿಜೆಪಿ ಗೋ ಬ್ಯಾಕ್’ ಪೋಸ್ಟರ್ ಗಳು

Update: 2018-08-11 07:56 GMT

ಕೊಲ್ಕತ್ತಾ, ಆ.11: ನಗರದಲ್ಲಿ ಇಂದು ನಡೆಯಲಿರುವ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ರ್ಯಾಲಿಯ ಹಿನ್ನೆಲೆಯಲ್ಲಿ ತೃಣಮೂಲ ಕಾಂಗ್ರೆಸ್ ಬಿಜೆಪಿ ವಿರುದ್ಧ ಪೋಸ್ಟರ್ ಯುದ್ಧ ಆರಂಭಿಸಿದ್ದು “ಆ್ಯಂಟಿ-ಬೆಂಗಾಲ್ ಬಿಜೆಪಿ ಗೋ ಬ್ಯಾಕ್” (ಬಂಗಾಳ ವಿರೋಧಿ ಬಿಜೆಪಿ ಹಿಂದಕ್ಕೆ ಹೋಗು) ಎಂಬ ಘೋಷವಾಕ್ಯಗಳನ್ನು ಹೊಂದಿರುವ ಪೋಸ್ಟರುಗಳು ಶಾ ರ್ಯಾಲಿ ನಡೆಯಲಿರುವ ಮಾಯೊ ರಸ್ತೆಯ ಸುತ್ತಮುತ್ತ ಕಾಣಿಸಿಕೊಂಡಿವೆ. ಅಸ್ಸಾಂನ ನ್ಯಾಷನಲ್ ರಿಜಿಸ್ಟರ್ ಆಫ್ ಸಿಟಿಜನ್ಸ್ ವಿರೋಧಿಸಿ ಟಿಎಂಸಿ ಈ ಪೋಸ್ಟರ್ ಅಭಿಯಾನವನ್ನು ಆರಂಭಿಸಿದೆ.

ಟಿಎಂಸಿ ಈಗಾಗಲೇ ಎನ್‍ಆರ್‍ಸಿ ವಿರುದ್ಧ ರಾಜ್ಯವ್ಯಾಪಿ ಪ್ರತಿಭಟನೆ ಹಮ್ಮಿಕೊಂಡಿದ್ದರೆ, ಬಿಜೆಪಿ ಇದನ್ನು ಟೀಕಿಸಿ ಇದು ಶಾ ರ್ಯಾಲಿಯನ್ನು ಕೆಡಿಸುವ ಉದ್ದೇಶ ಹೊಂದಿದೆ ಎಂದು ಆರೋಪಿಸಿದೆ.

ಶಾ ರ್ಯಾಲಿಗೆ ರಾಜ್ಯ ಸರಕಾರ ಅನುಮತಿ ನಿರಾಕರಿಸಿದೆ ಎಂದೂ ಆರಂಭದಲ್ಲಿ ಕೆಲ ವರದಿಗಳು ಹೇಳಿದ್ದರೂ ಕೊಲ್ಕತಾ ಪೊಲೀಸರು ರ್ಯಾಲಿಗೆ ಅನುಮತಿ ನೀಡಿದ್ದಾರೆ. ತಾನು ಕೊಲ್ಕತ್ತಾಗೆ ಹೋಗುವುದು ಮಾತ್ರವಲ್ಲದೆ ಅಲ್ಲಿ ಬಂಧನಕ್ಕೊಳಗಾಗಲೂ ಸಿದ್ಧ ಎಂದು ಶಾ ಈ ಹಿಂದೆ ಹೇಳಿದ್ದರು. “ನನಗೆ ಅನುಮತಿ ದೊರೆತರೂ ದೊರೆಯದೇ ಇದ್ದರೂ ನಾನು ಕೊಲ್ಕತ್ತಾಗೆ ಹೋಗಿಯೇ ಹೋಗುತ್ತೇನೆ. ಬೇಕಿದ್ದರೆ ರಾಜ್ಯ ಸರಕಾರ ನನ್ನನ್ನು ಬಂಧಿಸಲಿ” ಎಂದು ಶಾ ಹೇಳಿದ್ದರು.

ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಅಸ್ತಿತ್ವವನ್ನು ಇನ್ನಷ್ಟು ಸುದೃಢಗೊಳ್ಳಲು ಶಾ ಕೊಲ್ಕತ್ತಾಗೆ ಭೇಟಿ ನೀಡುತ್ತಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಕೇವಲ 2 ಸ್ಥಾನಗಳನ್ನು ಪಡೆದಿದ್ದ ಬಿಜೆಪಿ ಈ ಬಾರಿ ಇನ್ನಷ್ಟು ಹೆಚ್ಚು ಸ್ಥಾನಗಳನ್ನು ಗೆಲುವು  ನಿರೀಕ್ಷೆಯಲ್ಲಿದೆ.ರಾಜ್ಯದ ಶೇ 50ರಷ್ಟು ಸ್ಥಾನಗಳನ್ನು ಗೆಲ್ಲಬೇಕೆಂಬ ಗುರಿಯನ್ನು ಶಾ ಈಗಾಗಲೇ ಇಲ್ಲಿನ ಬಿಜೆಪಿಗೆ  ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News