ವೀಸಾ ಸಮರ ಗೆದ್ದ ಭಾರತೀಯ ಚೆಸ್ ಪೋರ

Update: 2018-08-11 08:28 GMT

ಲಂಡನ್, ಆ 11: ಭಾರತದ ಒಂಬತ್ತು ವರ್ಷದ ಚೆಸ್ ಪ್ರತಿಭೆ ಬ್ರಿಟನ್‌ನಲ್ಲಿ ಉಳಿಯುವ ಸಂಬಂಧ ನಡೆಸಿದ್ದ ವೀಸಾ ಹೋರಾಟದಲ್ಲಿ ಗೆದ್ದಿದ್ದಾನೆ. ಬ್ರಿಟನ್‌ನ ಗೃಹ ಇಲಾಖೆ, ಈ ಬಾಲಕನ ಅದ್ಭುತ ಪ್ರತಿಭೆ ಹಿನ್ನೆಲೆಯಲ್ಲಿ ಇದನ್ನು ವಿಶೇಷ ಪ್ರಕರಣವಾಗಿ ಪರಿಗಣಿಸಿದೆ. ತಂದೆಯ ಉದ್ಯೋಗ ವೀಸಾ ಅವಧಿ ಮುಗಿದ ಹಿನ್ನೆಲೆಯಲ್ಲಿ, ಬಾಲಕ ಅತಂತ್ರ ಸ್ಥಿತಿಯಲ್ಲಿದ್ದ.

ಹಲವು ಚೆಸ್ ಚಾಂಪಿಯನ್‌ಶಿಪ್‌ಗಳಲ್ಲಿ ಗೆದ್ದಿರುವ ಈ ಅದ್ಭುತ ಪ್ರತಿಭೆಯ ಬಾಲಕ, ಈತನ ವಯೋಮಿತಿಯಲ್ಲಿ ವಿಶ್ವದಲ್ಲಿ ನಾಲ್ಕನೇ ರ್ಯಾಂಕಿಂಗ್ ಹೊಂದಿದ್ದಾನೆ. ತಂದೆ ಜಿತೇಂದ್ರ ಸಿಂಗ್ ಅವರ ಉದ್ಯೋಗ ವೀಸಾ ಅವಧಿ ಮುಗಿದ ಹಿನ್ನೆಲೆಯಲ್ಲಿ ಕುಟುಂಬ ಭಾರತಕ್ಕೆ ಮರಳಲು ನಿರ್ಧರಿಸಿತ್ತು. ಆದರೆ ಹಲವಾರು ಮಂದಿ ಬ್ರಿಟಿಷ್ ಸಂಸದರು ಮಧ್ಯಪ್ರವೇಶಿಸಿ, ಬ್ರಿಟನ್‌ನ ಗೃಹ ಕಾರ್ಯದರ್ಶಿ ಸಾಜಿದ್ ಜಾವೆದ್ ಅವರ ಮನವೊಲಿಸಿದರು. ಈತನ ಅದ್ಭುತ ಪ್ರತಿಭೆ ಹಿನ್ನೆಲೆಯಲ್ಲಿ ವಿಶೇಷ ಪ್ರಕರಣವಾಗಿ ಪರಿಗಣಿಸುವಂತೆ ಕೋರಿದ್ದರು.

"ಈ ವಿಷಯ ಕೇಳಿದ ಬಾಲಕ ಶ್ರೇಯಸ್ ಸಂತೋಷದಿಂದ ಸೋಫಾದಲ್ಲಿ ಕುಣಿದು ಕುಪ್ಪಳಿಸಿದ. ನಮ್ಮನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು. ನಮ್ಮ ಮನವಿಯನ್ನು ಪುರಸ್ಕರಿಸಿದ್ದಕ್ಕೆ ಗೃಹ ಕಾರ್ಯದರ್ಶಿ ಮತ್ತು ಗೃಹ ಇಲಾಖೆಗೆ ಕೃತಜ್ಞತೆಗಳು" ಎಂದು ಸಿಂಗ್ ಹೇಳಿದರು.

ಇಂಗ್ಲಿಷ್ ಚೆಸ್ ಫೆಡರೇಷನ್ ಕೂಡಾ ಈ ನಿರ್ಧಾರವನ್ನು ಸ್ವಾಗತಿಸಿದೆ. ಶ್ರೇಯಸ್‌ನ ಅದ್ಭುತ ಪ್ರತಿಭೆಯನ್ನು ಗುರುತಿಸುವಂತೆ ಸರ್ಕಾರವನ್ನು ಮನವೊಲಿಸುತ್ತೇವೆ ಎಂದು ಅಧ್ಯಕ್ಷ ಡೊಮಿನಿಕ್ ಲಾಸನ್ ಹೇಳಿದ್ದಾರೆ.

ಶ್ರೇಯಸ್ ದೇಶ ತೊರೆದರೆ ಬ್ರಿಟನ್ ಅದ್ಭುತ ಚೆಸ್ ಪ್ರತಿಭೆಯನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಲೇಬರ್ ಪಕ್ಷದ ಸಂಸದರು ಗೃಹ ಕಾರ್ಯದರ್ಶಿಗೆ ಪತ್ರ ಬರೆದಿದ್ದರು. ವಿಶ್ವದ ಅದ್ಭುತ ಪ್ರತಿಭೆಗಳು ಇಲ್ಲಿ ವಾಸಿಸಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದರು.

ಭಾರತದಲ್ಲಿ ಹುಟ್ಟಿದ ಶ್ರೇಯಸ್, ಮೂರು ವರ್ಷದವನಿದ್ದಾಗ ತಂದೆ ಜಿತೇಂದ್ರ ಹಾಗೂ ತಾಯಿ ಅಂಜು ಸಿಂಗ್ ಜತೆ ಆರು ವರ್ಷ ಹಿಂದೆ ಬೆಂಗಳೂರಿನಿಂದ ಬ್ರಿಟನ್‌ಗೆ ಹೋಗಿದ್ದ. ಟಾಟಾ ಸಮೂಹ ಸಂಸ್ಥೆಯ ಲಂಡನ್ ಕಚೇರಿಯಲ್ಲಿ ನಿಗದಿತ ಅವಧಿಗೆ ಬ್ರಿಟನ್‌ನಲ್ಲಿ ಕಾರ್ಯನಿರ್ವಹಿಸಲು ತಂದೆಗೆ ವೀಸಾ ನೀಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News