ಕೃಷಿ ಭೂಮಿ ಖರೀದಿಗೆ ಅವಕಾಶ ನೀಡದಿರಲು ರೈತ ಸಂಘ ಆಗ್ರಹ

Update: 2018-08-11 13:14 GMT

ಬೆಂಗಳೂರು, ಆ. 11: ಕೃಷಿ ಭೂಮಿ ಖರೀದಿಗೆ ಸರಕಾರ ಆದಾಯ ಮಿತಿ ರದ್ದುಗೊಳಿಸಿರುವುದರಿಂದ ಕಾರ್ಪೋರೇಟ್, ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ, ಭ್ರಷ್ಟ ರಾಜಕಾರಣಿಗಳು ಹಾಗೂ ಅಧಿಕಾರಿಗಳಲ್ಲಿರುವ ಕಪ್ಪುಹಣವನ್ನು ಅಧಿಕೃತಗೊಳಿಸಲು ಸಹಾಯಕವಾಗಿದೆ ಎಂದು ರಾಜ್ಯ ರೈತ ಸಂಘ ಟೀಕಿಸಿದೆ.

ಕೃಷಿ ಭೂಮಿ ಖರೀದಿ ಸಂಬಂಧ ದೇಶದಲ್ಲೇ ಅತ್ಯಂತ ವಿಶಿಷ್ಟವೆನಿಸಿದ ಭೂ ಸುಧಾರಣೆ ಕಾಯ್ದೆ ಕರ್ನಾಟಕದಲ್ಲಿದೆ. 1974ರಲ್ಲಿ ಜಾರಿಗೆ ಬಂದ ಕರ್ನಾಟಕ ಭೂ ಸುಧಾರಣೆ ಕಾಯ್ದೆ 61ರ ಪ್ರಕಾರ ರಾಜ್ಯದಲ್ಲಿ ಕೃಷಿಕರಲ್ಲದವರು ಕೃಷಿ ಭೂಮಿ ಖರೀದಿಸಬೇಕೆಂದರೆ ಆದಾಯ 12 ಸಾವಿರ ರೂ.ಮೀರುವಂತಿರಲಿಲ್ಲ. 1991ರಲ್ಲಿ ಕಾಯ್ದೆಗೆ ತಿದ್ದುಪಡಿ ತಂದು ಆದಾಯ ಮಿತಿಯನ್ನು 50 ಸಾವಿರ ರೂ.ಗಳಿಗೆ ಹೆಚ್ಚಿಸಿದ ಬಳಿಕ 1995ರಲ್ಲಿ ದೇವೇಗೌಡ ಸಿಎಂ ಆಗಿದ್ದ ವೇಳೆ ತಿದ್ದುಪಡಿ ತಂದು ಆದಾಯ ಮಿತಿ 2 ಲಕ್ಷ ರೂ.ಗಳಿಗೆ ಏರಿಸಲಾಯಿತು. 2015ರಲ್ಲಿ ಸಿದ್ದರಾಮಯ್ಯ ಅದನ್ನು 25 ಲಕ್ಷ ರೂ.ಗಳಿಗೆ ಏರಿಸಿದ್ದರು. ಆದರೆ, ಇದೀಗ ಸರಕಾರ ಆದಾಯ ಮಿತಿ ರದ್ದುಗೊಳಿಸಿರುವುದು ರೈತರ ವಿರೋಧಿ ಎಂದು ಟೀಕಿಸಿದೆ.

ಉದ್ಯೋಗ ಸೃಷ್ಟಿ ಮಾಡಲು ಮತ್ತು ವಿದ್ಯಾವಂತರು ಕೃಷಿ ಮಾಡಲು ಅನುಕೂಲ ಮಾಡುವ ಉದ್ದೇಶದಿಂದ ತಿದ್ದುಪಡಿ ಮಾಡುವ ಆಲೋಚನೆ ಇದೆ ಎಂದು ಸರಕಾರ ಹೇಳುತ್ತಿದೆ. ಆದರೆ, 1ಸಾವಿರ ಎಕರೆ ಭೂಮಿಯಲ್ಲಿ ಈಗ ಹಾಲಿ ಅವಿದ್ಯಾವಂತರು, ರೈತರು, ಕೃಷಿಕಾರ್ಮಿಕರು ಸೇರಿ 10 ಸಾವಿರ ಜನ ಉದ್ಯೋಗ ಮಾಡುತ್ತಿದ್ದಾರೆ. ಈ ಭೂಮಿ ಕಾರ್ಪೋರೇಟ್ ವಲಯಕ್ಕೆ ಕೊಟ್ಟರೆ 1 ಸಾವಿರ ಜನಕ್ಕೆ ಉದ್ಯೋಗ ಕೊಡಬಹುದು. ಭೂಮಿ ಮಾರಾಟ ಮಾಡಿದ ರೈತ ಆತನಿಗೆ ಬೇರೆ ಉದ್ಯೋಗದಲ್ಲಿ ಅನುಭವವಿಲ್ಲದೆ ಮಾರಾಟ ಮಾಡಿದ ಸಂಪೂರ್ಣ ಹಣವನ್ನು ಕಳೆದುಕೊಂಡು ನಿರಾಶ್ರಿತರಾಗುತ್ತಾರೆ. ಇಂದಿಗೂ ರೈತರು ಲಾಭ-ನಷ್ಟದ ಅರಿವಿಲ್ಲದೆ ಬೇಸಾಯ ಮಾಡಿ ಈ ದೇಶದ ಜನರಿಗೆ ಆಹಾರ ಉತ್ಪಾದನೆ ಮಾಡುತ್ತಿದ್ದಾರೆ. ಸ್ವಾವಲಂಬಿ, ಗೌರವಯುತವಾಗಿ ತಾನು ಊಟ ಮಾಡಿ ಬೇರೆಯವರಿಗೂ ಊಟ ಕೊಡುತ್ತಿದ್ದಾನೆ. ಈಗಾಗಲೇ ಕೋಟ್ಯಾಧಿಪತಿಗಳು ಬೆಂಗಳೂರು ಮತ್ತು ಇತರೆ ನಗರಗಳ ಸುತ್ತ ಸಾವಿರಾರು ಎಕರೆ ಜಮೀನು ಖರೀದಿಸಿ ಬೇಲಿ ಹಾಕಿಕೊಂಡು ಬೀಳುಬಿಟ್ಟಿದ್ದಾರೆ.

ಬೆಂಗಳೂರು ನಗರ ಸುತ್ತ ಸುಮಾರು 2ಲಕ್ಷ ಎಕರೆ ಸಾಗುವಳಿ ಮಾಡದೆ ಇರುವ ಭೂಮಿ ಉದ್ಯಮಿಗಳ ವಶದಲ್ಲಿದೆ. ಆದಾಯ ಮಿತಿ ತೆಗೆದು ಹಾಕಿದರೆ ಕಪ್ಪುಹಣ ಹೊಂದಿರುವಂತವರು ಸರಕಾರಗಳಿಗೆ ತೆರಿಗೆ ಕಟ್ಟದೆ ಮೋಸ ಮಾಡಿ ಹಣ ರಕ್ಷಣೆ ಮಾಡಿಕೊಳ್ಳಲು ಇದೊಂದು ಸುಲಭ ವಿಧಾನ ಎಂದು ರೈತ ಸಂಘ ಟೀಕಿಸಿದೆ.

ಕೈಗಾರಿಕೆ ಮತ್ತು ಕೃಷಿ ಅಭಿವೃದ್ಧಿ ಪಡಿಸಲು ಕಂಪೆನಿಗಳು ರೈತನ ಭೂಮಿಯನ್ನು ದೀರ್ಘಾವಧಿಗೆ ಬಾಡಿಗೆಗೆ ಸಹಕಾರಿ ತತ್ವದ ಅಡಿಯಲ್ಲಿ ನಡೆಸಬಹುದು ಅಥವಾ ಕಂಪೆನಿಗಳು ರೈತರನ್ನು ಪಾಲುದಾರರನ್ನಾಗಿ ಮಾಡಿಕೊಳ್ಳಬಹುದು ಮತ್ತು ಈ ರೀತಿ ಉದ್ಯಮ ನಡೆಸುವರು ಕೃಷಿಯನ್ನೇ ಮಾಡಬೇಕು. ಆದಾಯ ಮಿತಿ ಸಂಪೂರ್ಣ ರದ್ದುಗೊಳಿಸುವ ಮೂಲಕ ಬಂಡವಾಳಶಾಹಿಗಳಿಗೆ, ಕಾರ್ಪೊರೇಟ್ ಕಂಪೆನಿಗಳಿಗೆ ಕೃಷಿ ಭೂಮಿ ಧಾರೆ ಎರೆದು ಕೊಡಲು ಸರಕಾರ ಉತ್ಸಾಹ ತೋರಬಾರದು. ಈಗಾಗಲೇ ಭ್ರಷ್ಟರು ಬೇನಾಮಿ ಹೆಸರಿನಲ್ಲಿ ಕೋಟಿಗಟ್ಟಲೆ ಆಸ್ತಿ ಮಾಡುತ್ತಿದ್ದಾರೆ. ಇದಕ್ಕೆ ಅವಕಾಶ ಕೊಡದೆ, ರೈತರನ್ನು ಬೀದಿಗೆ ತಳ್ಳುವುದನ್ನು ತಡೆಯಬೇಕು ಎಂದು ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News