2ನೇ ಟೆಸ್ಟ್: ಕೊಹ್ಲಿ ನಾಯಕತ್ವದಲ್ಲಿ ಭಾರತಕ್ಕೆ ಮೊದಲ ಬಾರಿ ಇನಿಂಗ್ಸ್ ಅಂತರದ ಸೋಲು

Update: 2018-08-13 05:42 GMT

ಲಾರ್ಡ್ಸ್, ಆ.13:ಆತಿಥೇಯ ಇಂಗ್ಲೆಂಡ್ ತಂಡ ಭಾರತವನ್ನು ಎರಡನೇ ಇನಿಂಗ್ಸ್‌ನಲ್ಲಿ 130 ರನ್‌ಗೆ ಆಲೌಟ್ ಮಾಡುವ ಮೂಲಕ ಎರಡನೇ ಟೆಸ್ಟ್ ಪಂದ್ಯವನ್ನು ಇನಿಂಗ್ಸ್ ಹಾಗೂ 129 ರನ್‌ಗಳ ಅಂತರದಿಂದ ಗೆದ್ದುಕೊಂಡಿದೆ.

ವಿರಾಟ್ ಕೊಹ್ಲಿ ಭಾರತದ ನಾಯಕತ್ವ ವಹಿಸಿಕೊಂಡ ಬಳಿಕ ಮೊದಲ ಬಾರಿ ಇನಿಂಗ್ಸ್ ಅಂತರದಿಂದ ಸೋತಿದ್ದಾರೆ.

ಪಂದ್ಯಕ್ಕೆ ಪದೇ ಪದೇ ಮಳೆ ಅಡ್ಡಿಸಿದರೂ ಉತ್ತಮ ಪ್ರದರ್ಶನ ನೀಡಿದ ಜೇಮ್ಸ್ ಆ್ಯಂಡರ್ಸನ್ ಹಾಗೂ ಸ್ಟುವರ್ಟ್ ಬ್ರಾಡ್ ಭಾರತದ ವಿಕೆಟ್‌ಗಳನ್ನು ಕಬಳಿಸುತ್ತಾ ಹೋದರು. ವಿರಾಟ್ ಕೊಹ್ಲಿ ಹಾಗೂ ದಿನೇಶ್ ಕಾರ್ತಿಕ್ ವಿಕೆಟ್‌ಗಳನ್ನು ಸತತ ಎಸೆತಗಳಲ್ಲಿ ಉರುಳಿಸಿದರು.

ಎರಡನೇ ಟೆಸ್ಟ್‌ನ ಮುಖ್ಯಾಂಶಗಳು ಇಂತಿವೆ.....

*ಮೊದಲ ದಿನದ ಪಂದ್ಯ ಒಂದೂ ಎಸೆತ ಕಾಣದೇ ಮಳೆಗಾಹುತಿಯಾದ ನಂತರ ಭಾರತ ಮೂರನೇ ಬಾರಿ ಟೆಸ್ಟ್ ಪಂದ್ಯವನ್ನು ಸೋತಿದೆ. ಈ ಹಿಂದೆ 1974 ಹಾಗೂ 2002ರಲ್ಲಿ ಬರ್ಮಿಂಗ್‌ಹ್ಯಾಮ್ ಹಾಗೂ ಹ್ಯಾಮಿಲ್ಟನ್‌ನಲ್ಲಿ ಸೋತಿತ್ತು.

* ವಿರಾಟ್ ಕೊಹ್ಲಿ 2014ರಲ್ಲಿ ಭಾರತದ ನಾಯಕತ್ವವಹಿಸಿಕೊಂಡ ಬಳಿಕ ಭಾರತ ಇದೇ ಮೊದಲ ಬಾರಿ ಇನಿಂಗ್ಸ್ ಅಂತರದಿಂದ ಸೋಲುಂಡಿದೆ.

*ಭಾರತ 1974ರ ನಂತರ ಲಾರ್ಡ್ಸ್ ಕ್ರೀಡಾಂಗಣದಲ್ಲಿ ದೊಡ್ಡ ಅಂತರದ ಸೋಲುಂಡಿದೆ. 1974ರಲ್ಲಿ ಅಜಿತ್ ವಾಡೇಕರ್ ನೇತೃತ್ವದ ಭಾರತ ತಂಡ ಇನಿಂಗ್ಸ್ ಹಾಗೂ 285 ರನ್‌ಗಳಿಂದ ಸೋತಿತ್ತು.

*ಇಂಗ್ಲೆಂಡ್ ತಂಡ 2010ರಲ್ಲಿ ಪಾಕಿಸ್ತಾನವನ್ನು ಸೋಲಿಸಿದ ಬಳಿಕ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಇನಿಂಗ್ಸ್ ಅಂತರದಿಂದ ಜಯಭೇರಿ ಬಾರಿಸಿದೆ.

 *ಎರಡನೇ ಟೆಸ್ಟ್‌ನಲ್ಲಿ ಒಟ್ಟು 1023 ಎಸೆತಗಳ ಬೌಲಿಂಗ್ ಸಾಧ್ಯವಾಗಿದ್ದು, ಇದು 100 ವರ್ಷಗಳಲ್ಲಿ ಇಂಗ್ಲೆಂಡ್ ನೆಲದಲ್ಲಿ ದಾಖಲಾದ ಮೂರನೇ ಕಿರು ಅವಧಿಯ ಪರಿಪೂರ್ಣ ಟೆಸ್ಟ್ ಪಂದ್ಯವಾಗಿದೆ. 1888ರ ಬಳಿಕ ಲಾರ್ಡ್ಸ್‌ನಲ್ಲಿ ಕಿರು ಅವಧಿಯ ಪಂದ್ಯ ನಡೆದಿದೆ.

*ಮುರಳಿ ವಿಜಯ್, ಕೆ.ಎಲ್.ರಾಹುಲ್ ಹಾಗೂ ಚೇತೇಶ್ವರ ಪೂಜಾರ ಲಾರ್ಡ್ಸ್‌ನಲ್ಲಿ ಒಟ್ಟು 36 ರನ್ ಗಳಿಸಿದರು. 1996ರಲ್ಲಿ ಭಾರತದ ಅಗ್ರ-3 ದಾಂಡಿಗರು ಕಡಿಮೆ ಸ್ಕೋರ್ ಗಳಿಸಿದ್ದರು. 96ರಲ್ಲಿ ವಿಕ್ರಂ ರಾಥೋಡ್, ಡಬ್ಲುವಿ ರಾಮನ್ ಹಾಗೂ ಸೌರವ್ ಗಂಗುಲಿ ಕೇವಲ 26 ರನ್ ಗಳಿಸಲು ಶಕ್ತರಾಗಿದ್ದರು.

*ಜೇಮ್ಸ್ ಆ್ಯಂಡರ್ಸನ್ ಭಾರತ ವಿರುದ್ಧ ಲಾರ್ಡ್ಸ್ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ 5 ವಿಕೆಟ್ ಗೊಂಚಲು ಪಡೆದ ಇಂಗ್ಲೆಂಡ್‌ನ ಎರಡನೇ ಹಿರಿಯ ಬೌಲರ್(36 ವರ್ಷ, 11 ದಿನ) ಎನಿಸಿಕೊಂಡರು. 1971ರಲ್ಲಿ ದಿ ಓವಲ್‌ನಲ್ಲಿ ರೇ ಇಲ್ಲಿಂಗ್‌ವರ್ತ್(39 ವರ್ಷ, 76 ದಿನಗಳು)5 ವಿಕೆಟ್ ಪಡೆದ ಹಿರಿಯ ಬೌಲರ್ ಎನಿಸಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News