ಭಾರತದ ಬ್ಯಾಟಿಂಗ್ ವೈಫಲ್ಯ: ಕೋಚ್ ಶಾಸ್ತ್ರಿ ಬಗ್ಗೆ ಸಿಒಎ ಅಸಮಾಧಾನ

Update: 2018-08-14 05:58 GMT

ಕೋಲ್ಕತಾ, ಆ.14: ಇಂಗ್ಲೆಂಡ್ ವಿರುದ್ಧ ಸರಣಿಗೆ ತಯಾರಾಗಲು ಸಾಕಷ್ಟು ಸಮಯಾವಕಾಶ ಲಭಿಸಿದ್ದರೂ ಬ್ಯಾಟಿಂಗ್‌ನಲ್ಲಿ ವೈಫಲ್ಯ ಅನುಭವಿಸಿರುವುದು ಸ್ವೀಕಾರಾರ್ಹವಲ್ಲ ಎಂದು ಬಿಸಿಸಿಐ ಮೇಲ್ವಿಚಾರಣೆ ನಡೆಸುತ್ತಿರುವ ಆಡಳಿತಾಧಿಕಾರಿಗಳ ಸಮಿತಿ(ಸಿಒಎ)ಮುಖ್ಯ ಕೋಚ್ ರವಿ ಶಾಸ್ತ್ರಿ ಕುರಿತು ಅಸಮಾಧಾನ ಹೊರಹಾಕಿದೆ.

 ಎಜ್‌ಬಾಸ್ಟನ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಗೆಲ್ಲಲು 194 ರನ್ ಗುರಿ ಪಡೆದಿದ್ದ ಭಾರತ ಗೆಲುವಿನ ದಡ ಸೇರಲು ವಿಫಲವಾಗಿ 31 ರನ್‌ಗಳಿಂದ ಸೋತಿತ್ತು. ವಿರಾಟ್ ಕೊಹ್ಲಿ ಪಡೆ ಎರಡನೇ ಟೆಸ್ಟ್ ಪಂದ್ಯವನ್ನು ಇನಿಂಗ್ಸ್ ಹಾಗೂ 159 ರನ್‌ಗಳ ಅಂತರದಿಂದ ಸೋತು ಇಂಗ್ಲೆಂಡ್‌ಗೆ 5 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಲು ಕಾರಣರಾಗಿದ್ದರು.

 ‘‘ಇಂಗ್ಲೆಂಡ್ ವಾತಾವರಣಕ್ಕೆ ಹೊಂದಿಕೊಳ್ಳಲಿ ಎಂಬ ಕಾರಣ ಟೀಮ್ ಇಂಡಿಯಾವನ್ನು ಇಂಗ್ಲೆಂಡ್‌ಗೆ ಬೇಗನೆ ಕಳುಹಿಸಿಕೊಡಲಾಗಿತ್ತು. ಅಗ್ರ ಕ್ರಮಾಂಕದ ದಾಂಡಿಗರ ಈ ರೀತಿಯ ಪ್ರದರ್ಶನ ಉತ್ತೇಜನಕಾರಿಯಾಗಿಲ್ಲ. ಸಿಒಎ ಈ ಕುರಿತು ಕೋಚ್ ಬಳಿ ಚರ್ಚೆ ನಡೆಸಲಿದೆ’’ ಎಂದು ಮೂಲಗಳು ತಿಳಿಸಿವೆ.

ಭಾರತ ತಂಡ ಐರ್ಲೆಂಡ್ ಹಾಗೂ ಇಂಗ್ಲೆಂಡ್ ವಿರುದ್ಧ ಸೀಮಿತ ಓವರ್ ಕ್ರಿಕೆಟ್ ಸರಣಿಯನ್ನಾಡಲು ಜೂನ್ ಕೊನೆಯ ವಾರ ಇಂಗ್ಲೆಂಡ್‌ಗೆ ಪ್ರವಾಸ ಕೈಗೊಂಡಿತ್ತು. ಆಗಸ್ಟ್ 1 ರಂದು ಮೊದಲ ಟೆಸ್ಟ್ ಆರಂಭವಾಗುವ ವೇಳೆಗೆ ಭಾರತ ತಂಡ ಇಂಗ್ಲೆಂಡ್‌ಗೆ ತೆರಳಿ ಒಂದು ತಿಂಗಳು ಕಳೆದಿತ್ತು. ಮುರಳಿ ವಿಜಯ್ ಹಾಗೂ ಅಜಿಂಕ್ಯ ರಹಾನೆ ಸೀಮಿತ ಓವರ್ ಕ್ರಿಕೆಟ್ ತಂಡದಲ್ಲಿರಲಿಲ್ಲ. ಆದಾಗ್ಯೂ ಅವರನ್ನು ಭಾರತ ‘ಎ’ ತಂಡದೊಂದಿಗೆ ಆಡಲು ಇಂಗ್ಲೆಂಡ್‌ಗೆ ಕಳುಹಿಸಿಕೊಡಲಾಗಿತ್ತು.

ಟೆಸ್ಟ್ ಸರಣಿಯ 2 ಪಂದ್ಯಗಳ ನಾಲ್ಕು ಇನಿಂಗ್ಸ್‌ಗಳಲ್ಲಿ ಭಾರತ ನಿರಾಶಾದಾಯಕ ಪ್ರದರ್ಶನ ನೀಡಿದೆ. 274,162, 107 ಹಾಗೂ 130 ರನ್ ಗಳಿಸಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News