ಶೆಹ್ಲಾ ರಶೀದ್ ಗೆ ಭೂಗತ ಪಾತಕಿ ರವಿ ಪೂಜಾರಿಯಿಂದ ಬೆದರಿಕೆ : ದೂರು

Update: 2018-08-14 06:19 GMT

ಶ್ರೀನಗರ, ಆ. 14 : ಭೂಗತ ಪಾತಕಿ ರವಿ ಪೂಜಾರಿ ತನಗೆ ಜೀವ ಬೆದರಿಕೆಯೊಡ್ಡಿದ್ದಾನೆಂದು ಆರೋಪಿಸಿ ಜೆಎನ್‌ಯು ವಿದ್ಯಾರ್ಥಿ ಹಕ್ಕುಗಳ ಕಾರ್ಯಕರ್ತೆ ಶೆಹ್ಲಾ ರಶೀದ್ ಶ್ರೀನಗರ ಪೊಲೀಸರಿಗೆ ದೂರು ನೀಡಿದ್ದಾರೆ.

ಜೆಎನ್‌ಯು ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ಮೇಲೆ ದಾಳಿ ನಡೆಸಲು ಅಪರಿಚಿತ ದುಷ್ಕರ್ಮಿಯೊಬ್ಬ ನಡೆಸಿದ ವಿಫಲ ಯತ್ನದ ಬೆನ್ನಿಗೇ ಈ ಬೆಳವಣಿಗೆ ನಡೆದಿದೆ.

ತಾನು ಪೊಲೀಸ್ ದೂರು ನೀಡಿರುವ ಬಗ್ಗೆ ಟ್ವಿಟ್ಟರ್ ನಲ್ಲಿ ಹೇಳಿಕೊಂಡಿರುವ ಶೆಹ್ಲಾ ರಶೀದ್, ರವಿ ಪೂಜಾರಿ ತನಗೆ, ಖಾಲಿದ್ ಹಾಗೂ ದಲಿತ ನಾಯಕ ಜಿಗ್ನೇಶ್ ಮೇವಾನಿಗೆ ಬಾಯ್ಮುಚ್ಚಿಕೊಂಡಿರುವಂತೆ ಹೇಳಿದ್ದಾನೆಂದು ದೂರಿದ್ದಾರೆ.

‘‘ಸುಮ್ಮನೆ ನಿಮ್ಮ ಬಾಯಿ ಮುಚ್ಚಿ, ಇಲ್ಲವೇ ನಾವು ನಿಮ್ಮ ಬಾಯಿಯನ್ನು ಖಾಯಂ ಆಗಿ ಮುಚ್ಚಿಸುತ್ತೇವೆ. ಉಮರ್ ಖಾಲಿದ್ ಹಾಗೂ ಜಿಗ್ನೇಶ್ ಮೇವಾನಿಗೂ ಹೇಳಿ’’ ಎಂದು ಮಾಫಿಯಾ ದೊರೆ ರವಿ ಪೂಜಾರಿ ಹೆಸರಿನಲ್ಲಿ ಶೆಹ್ಲಾ ರಶೀದ್ ಗೆ ಬೆದರಿಕೆ ಎಸ್ಸೆಮ್ಮೆಸ್ ಬಂದಿದ್ದು ಅದನ್ನು ಅವರು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಸೋಮವಾರ ದಿಲ್ಲಿಯ ಕಾನ್‌ಸ್ಟಿಟ್ಯೂಶನ್ ಕ್ಲಬ್ ನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುವ ನಿಮಿತ್ತ ಆಗಮಿಸಿದ್ದ ಉಮರ್ ಖಾಲಿದ್ ಮೇಲೆ ಅಪರಿಚಿತನೊಬ್ಬ ಗುಂಡು ಹಾರಿಸುವ ಯತ್ನ ನಡೆಸಿದ್ದರೂ ಆತನ ಗುರಿ ತಪ್ಪಿ ಖಾಲಿದ್ ಬಚಾವಾಗಿದ್ದರು. ‘ಯುನೈಟೆಡ್ ಅಗೇನ್ಸ್ಟ್ ಹೇಟ್’ ಎಂಬ ಸಂಘಟನೆ ಆಯೋಜಿಸಿದ್ದ ಖೌಫ್ಫ್ ಸೆ ಆಜಾದಿ’ ಕಾರ್ಯಕ್ರಮ ಅಲ್ಲಿ ನಡೆಯಲಿತ್ತು. ಕಾರ್ಯಕ್ರಮಕ್ಕೆ ಉಮರ್ ಖಾಲಿದ್ ಹೊರತಾಗಿ ವಕೀಲ ಪ್ರಶಾಂತ್ ಭೂಷಣ್, ದಲಿತ ವಿದ್ಯಾರ್ಥಿ ರೋಹಿತ್ ವೇಮುಲಾ ಅವರ ತಾಯಿ ರಾಧಿಕಾ ವೇಮುಲಾ, ಗೋರಖಪುರ್ ಆಸ್ಪತ್ರೆಯ ಉಚ್ಛಾಟಿತ ವೈದ್ಯ ಕಫೀಲ್ ಖಾನ್ ಹಾಗೂ ಕೊಲೆಗೀಡಾದ ದಿಲ್ಲಿ ಯುವಕ ಅಂಕಿತ್ ಸಕ್ಸೇನಾ ತಂದೆ ಯಶಪಾಲ್ ಸಕ್ಸೇನಾ ಅವರಿಗೆ ಆಹ್ವಾನ ನೀಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News