×
Ad

ಬೆಂಗಳೂರು: ರಸ್ತೆ ಅಪಘಾತಕ್ಕೆ ನಾಲ್ಕು ವರ್ಷದಲ್ಲಿ ಮೂರು ಸಾವಿರಕ್ಕೂ ಅಧಿಕ ಬಲಿ

Update: 2018-08-14 19:50 IST

ಬೆಂಗಳೂರು, ಆ.14: ಪೊಲೀಸ್ ಅಂಕಿಅಂಶಗಳ ಪ್ರಕಾರ ನಗರದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ರಸ್ತೆ ಅಪಘಾತದಿಂದಾಗಿ ಮೂರು ಸಾವಿರಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ.

ಪ್ರತಿದಿನ ಪೊಲೀಸ್ ಇಲಾಖೆ ಹಾಗೂ ಸಂಚಾರ ಇಲಾಖೆ ಹೆಚ್ಚುತ್ತಿರುವ ಸಂಚಾರ ದಟ್ಟಣೆ ಬಗ್ಗೆ ಹಾಗೂ ಸಂಚಾರಿ ನಿಯಮಗಳನ್ನು ಪಾಲಿಸುವಂತೆ ಅನೇಕ ರೀತಿಯ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಆದರೂ, ರಾಜ್ಯದ ರಾಜಧಾನಿಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿವೆ ಎಂಬ ಅಂಶ ತಿಳಿದುಬಂದಿದೆ.

ನಗರದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ರಸ್ತೆ ಅಪಘಾತದಿಂದ 3250 ಮಂದಿ ಮೃತಪಟ್ಟು, 18,694 ಮಂದಿ ಗಾಯಗೊಂಡಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ ದ್ವಿಚಕ್ರ ವಾಹನಗಳ ಅಪಘಾತ ಸಂಖ್ಯೆ ಹೆಚ್ಚುತ್ತಿರುವುದು ಆತಂಕ ಮೂಡಿಸಿದೆ.

ನಗರದ ಬಹುತೇಕ ರಸ್ತೆಗಳಲ್ಲಿ ಟಾರ್ ಕಿತ್ತು ಗುಂಡಿಗಳಂತಾಗಿವೆ. ಕೆಲದಿನಗಳಿಂದ ನಗರದಲ್ಲಿ ಮಳೆ ಬೀಳುತ್ತಿರುವುದರಿಂದ ರಸ್ತೆಗಳಲ್ಲಿ ಮತ್ತಷ್ಟು ಗುಂಡಿಗಳಾಗಿವೆ. ಎಷ್ಟೇ ಜಾಗೃತಿ ಮೂಡಿಸಿದರೂ ಎಚ್ಚೆತ್ತುಕೊಳ್ಳದ ಪಾದಚಾರಿಗಳು ಅಡ್ಡಾದಿಡ್ಡಿಯಾಗಿ ರಸ್ತೆ ದಾಟುತ್ತಾರೆ. ಇದರಿಂದಲೂ ಅಪಘಾತಗಳು ಸಂಭವಿಸುತ್ತವೆ ಎಂದು ಪೊಲೀಸರು ಅಭಿಪ್ರಾಯಿಸುತ್ತಾರೆ.

ಅಡ್ಡಾದಿಡ್ಡಿ ವಾಹನ ಚಲಾಯಿಸುವುದು, ವ್ಹೀಲಿಂಗ್ ಮಾಡುವ ಕ್ರೇಜ್‌ನಲ್ಲಿರುವ ಯುವಕರು, ಹೆಲ್ಮೆಟ್ ಧರಿಸದಿರುವುದು, ಅವಸರ ಮತ್ತು ಅತಿವೇಗ, ರಸ್ತೆ ಗುಂಡಿಗಳು ಅಪಘಾತಗಳಿಗೆ ಕಾರಣವಾಗುತ್ತಿವೆ. ನಗರದ ಜನದಟ್ಟಣೆ ಪ್ರದೇಶದಲ್ಲೇ ಹೆಚ್ಚಿನ ಅಪಘಾತಗಳು ಸಂಭವಿಸುತ್ತಿವೆ. ರಾತ್ರಿ ವೇಳೆ ಹೆಚ್ಚು ಲಾರಿ ಮತ್ತು ಕಾರುಗಳಿಂದ ಅಪಘಾತಗಳು ಸಂಭವಿಸುತ್ತಿವೆ. ಕಾರು ಮತ್ತು ಲಾರಿ ಚಾಲಕರು ಅತಿವೇಗ ಮತ್ತು ಅಜಾಗರೂಕತೆಯ ವಾಹನ ಚಲಾಯಿಸುತ್ತಿರುವುದು ಪ್ರಮುಖ ಕಾರಣವಾಗುತ್ತಿದೆ ಎಂದು ಸಂಚಾರಿ ಪೊಲೀಸರು ಹೇಳುತ್ತಾರೆ.

ವರ್ಷವಾರು ವಿವರ:

2014 ಒಟ್ಟು ಅಪಘಾತ 711, ಮೃತಪಟ್ಟರು 737
2015 ಅಪಘಾತಗಳು 714, ಮೃತಪಟ್ಟವರು 740
2016 ಅಪಘಾತಗಳು 754, ಮೃತಪಟ್ಟವರು 793
2017 ಅಪಘಾತಗಳು 609, ಮೃತಪಟ್ಟವರು 642
2018 ಜೂನ್‌ವರೆಗೆ ಒಟ್ಟು ಅಪಘಾತಗಳು 330, ಮೃತಪಟ್ಟವರು 338

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News