"ಸಂವಿಧಾನ ಸುಟ್ಟವರು, ಉಮರ್ ಖಾಲಿದ್ ಮೇಲೆ ಗುಂಡು ಹಾರಿಸಿದವರು ದೇಶ ದ್ರೋಹಿಗಳು"

Update: 2018-08-14 15:07 GMT

ಬೆಂಗಳೂರು, ಆ.14: ಸಂವಿಧಾನ ಸುಟ್ಟವರು ಹಾಗೂ ಜೆಎನ್‌ಯು ವಿದ್ಯಾರ್ಥಿ ಉಮರ್ ಖಾಲಿದ್ ಮೇಲೆ ಗುಂಡು ಹಾರಿಸಿದವರು ದೇಶ ದ್ರೋಹಿಗಳಾಗಿದ್ದು, ಕೂಡಲೆ ಬಂಧಿಸಬೇಕೆಂದು ಒತ್ತಾಯಿಸಿ ನಗರದ ಪುರಭವನದ ಮುಂಭಾಗ ಪ್ರತಿಭಟನಾ ಧರಣಿ ನಡೆಸಲಾಯಿತು.

ಸಂವಿಧಾನ ಉಳಿವಿಗಾಗಿ ಕರ್ನಾಟಕ, ಗೌರಿ ಲಂಕೇಶ್ ಬಳಗ ಹಾಗೂ ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ಕಾರ್ಯಕರ್ತರು, ಸಂವಿಧಾನ ಸುಟ್ಟವರಿಗೆ ಪ್ರಜಾಪ್ರಭುತ್ವದ ಬಗ್ಗೆ ನಂಬಿಕೆ, ಗೌರವಗಳಿಲ್ಲ. ತಮ್ಮ ಹಿಂದುತ್ವ ರಾಜಕಾರಣಕ್ಕಾಗಿ ದೇಶದಲ್ಲಿ ಅಶಾಂತಿ ಸೃಷ್ಟಿಸುತ್ತಿದ್ದಾರೆ. ಸಂವಿಧಾನ ಸುಟ್ಟ ದೇಶದ್ರೋಹಿಗಳನ್ನು ಕೂಡಲೆ ಬಂಧಿಸಬೇಕೆಂದು ಆಗ್ರಹಿಸಿದರು.

ಪ್ರಗತಿಪರ ಚಿಂತಕ ಶ್ರೀಪಾದ್‌ ಭಟ್ ಮಾತನಾಡಿ, ದೇಶಕ್ಕೆ ಸಂವಿಧಾನವೆ ಜೀವಾಳ. ಸಂವಿಧಾನದ ಮೂಲ ಆಶಯಗಳಿಂದಾಗಿ ಸಮಾಜದಲ್ಲಿ ಸೌಹಾರ್ದತೆಯ ವಾತಾವರಣ ನಿರ್ಮಾಣವಾಗಿದೆ. ಇಂತಹ ವಾತಾವರಣವನ್ನು ಹಾಳುಗೆಡುವುದಕ್ಕಾಗಿ ಸಂಘಪರಿವಾರದ ಕಾರ್ಯಕರ್ತರು ಸಂವಿಧಾನವನ್ನು ಸುಟ್ಟು ಹಾಕಿದ್ದಾರೆ. ಈ ಪ್ರಕರಣವನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಬೇಕೆಂದು ಒತ್ತಾಯಿಸಿದರು.

ಜೆಎನ್‌ಯು ವಿದ್ಯಾರ್ಥಿ ಉಮರ್ ಖಾಲಿದ್ ಮೇಲೆ ಹಾಡ ಹಗಲೆ ಗುಂಡಿಕ್ಕಿ ಹತ್ಯೆ ಮಾಡಲು ಪ್ರಯತ್ನಿಸಲಾಗಿದೆ. ಈ ಪ್ರಕರಣವನ್ನು ಕೇಂದ್ರ ಸರಕಾರ, ಪೊಲೀಸ್ ಇಲಾಖೆ, ಮಾಧ್ಯಮಗಳು ಗಂಭೀರವಾಗಿ ಪರಿಗಣಿಸಬೇಕಿತ್ತು. ಆದರೆ, ಏನು ನಡೆದೇ ಇಲ್ಲವೆಂಬ ರೀತಿಯಲ್ಲಿ ವರ್ತಿಸುತ್ತಿರುವುದು, ದೇಶ ಎತ್ತ ಸಾಗುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ಸಂಜಯ್ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ನೇತೃತ್ವದಲ್ಲಿ ರಚನೆಗೊಂಡಿರುವ ಸಂವಿಧಾನ ದೇಶದ ಜೀವಾಳ. ಇದರಲ್ಲಿ ಏನೇ ವೈರುಧ್ಯಗಳಿದ್ದರೂ ಚರ್ಚೆಗಳ ಮೂಲಕ ಬಗೆಹರಿಸಿಕೊಳ್ಳಬಹುದು. ಆದರೆ, ಸಂಘಪರಿವಾರ ಸಂವಿಧಾನಕ್ಕೆ ಕಿಂಚಿತ್ತೂ ಬೆಲೆ ಕೊಡುವುದಿಲ್ಲವೆಂಬುದಕ್ಕೆ ಸಂವಿಧಾನವನ್ನು ಸುಟ್ಟಿರುವುದೆ ಸಾಕ್ಷಿಯಾಗಿದೆ ಎಂದು ಕಿಡಿಕಾರಿದರು.

ಜೆಎನ್‌ಯು ವಿದ್ಯಾರ್ಥಿ ಉಮರ್ ಖಾಲಿದ್ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. ತಮ್ಮ ಅನಿಸಿಕೆಗಳನ್ನು ಮುಕ್ತವಾಗಿ ವ್ಯಕ್ತಪಡಿಸುವವರ ಮೇಲೆ ಅಮಾನುಷವಾಗಿ ಹತ್ಯೆ ಮಾಡುವಂತಹ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿದೆ. ಆದರೂ ದೇಶದ ಜನತೆಯನ್ನು ರಕ್ಷಿಸಬೇಕಾದ ಕೇಂದ್ರ ಸರಕಾರವೆ ಪರೋಕ್ಷವಾಗಿ ಬೆಂಬಲ ನೀಡುತ್ತಿರುವುದು, ದೇಶದ ಸಾಮಾನ್ಯ ಪ್ರಜೆಯಾಗಿ ನನಗೆ ಅಚ್ಚರಿ ಮೂಡಿಸಿದೆ ಎಂದು ಅವರು ತಿಳಿಸಿದರು.

ಪ್ರತಿಭಟನೆಯಲ್ಲಿ ಜನಶಕ್ತಿಯ ಮಲ್ಲಿಗೆ, ಗೌರಿ, ಕೆವಿಎಸ್ ಸಂಘಟನೆ ಸರೋವರ್, ತ್ರಿಮೂರ್ತಿ, ಹೋರಾಟಗಾರ ಮಂಗ್ಳೂರು ವಿಜಯ, ಪ್ರಗತಿಪರ ಚಿಂತಕಿ ಕಲೈ ಸೆಲ್ವಿ ಮತ್ತಿತರರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News