ದ್ವಿಚಕ್ರ ವಾಹನ, ಕಾರುಗಳ ಮೂಲಕ ಕಸ ಸಾಗಾಣಿಕೆ: ಶಾಸಕ ಮುನಿರತ್ನ ಆರೋಪ

Update: 2018-08-14 15:10 GMT

ಬೆಂಗಳೂರು, ಆ.14: ನಗರದ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನ, ಕಾರುಗಳ ಮೂಲಕ ಕಸ ಸಾಗಿಸಲಾಗುತ್ತಿದೆ. ಈ ಮೂಲಕ ಲಕ್ಷಾಂತರ ರೂ.ಗಳಷ್ಟು ಬಿಲ್ ಮಾಡಲಾಗುತ್ತಿದೆ ಎಂದು ಶಾಸಕ ಮುನಿರತ್ನ ಆರೋಪಿಸಿದರು.

ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿಂದು ವಿಷಯ ಪ್ರಸ್ತಾಪಿಸಿ ಮಾತನಾಡಿದ ಅವರು, ಕಳೆದ ಎಪ್ರಿಲ್ 16 ರಿಂದ ಡಿಸೆಂಬರ್ 17 ರವರೆಗೆ ಕಸ ಎತ್ತಲು 34 ಲಕ್ಷ ರೂ. ಬಿಲ್ ಪಾವತಿ ಮಾಡಲಾಗಿದೆ ಎಂಬ ಮಾಹಿತಿ ಸಿಕ್ಕಿದೆ. ಆದರೆ, ಈ ಕ್ಷೇತ್ರದಲ್ಲಿ ಕಸ ಎತ್ತಲು 15 ಲಕ್ಷ ರೂ.ಗಳಷ್ಟೇ ಮೀಸಲಿರಿಸಲಾಗಿದೆ. ಇದಕ್ಕಿದ್ದಂತೆ ಅದು 34 ಲಕ್ಷಕ್ಕೆ ಹೇಗೆ ಏರಿಕೆಯಾಗಿದೆ ಎಂದು ಪ್ರಶ್ನಿಸಿದರು.

ಅಧಿಕಾರಿಗಳು ಗುತ್ತಿಗೆದಾರರೊಂದಿಗೆ ಶಾಮೀಲಾಗಿದ್ದಾರೆ. ಆರ್‌ಆರ್ ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನ ಮತ್ತು ಕಾರುಗಳ ಮೂಲಕ ಕಸ ಸಾಗಿಸಲಾಗುತ್ತಿದೆ. ಇಲ್ಲಿ ಕಸ ಎತ್ತುವ ಸಲುವಾಗಿ ಗುತ್ತಿಗೆದಾರರು ನೀಡಿರುವ ಮಾಹಿತಿ ಅನ್ವಯ ಆಟೋ ಟಿಪ್ಪರ್‌ಗಳ ಸಂಖ್ಯೆಯನ್ನು ಪರಿಶೀಲಿಸಿದರೆ 1992 ರ ಅಂಬಾಸೆಡರ್ ಕಾರು ಟಿಪ್ಪರ್ ಎಂದು ನೀಡಲಾಗಿದೆ ಎಂದ ಅವರು, ಇವುಗಳಲ್ಲಿ ಕಸ ಸಾಗಿಸಲು ಸಾಧ್ಯವಾ ಎಂದು ಪ್ರಶ್ನಿಸಿದರು.

ಈ ಕ್ಷೇತ್ರದಲ್ಲಿ 21 ಆಟೋ ಟಿಪ್ಪರ್‌ಗಳು ಕಸ ಸಾಗಾಣೆ ಮಾಡುತ್ತಿವೆ ಎಂದು ಸುಳ್ಳು ದಾಖಲೆ ನೀಡಲಾಗಿದೆ. ಅಲ್ಲದೆ, ಇಷ್ಟು ಸಾಕಾಗುತ್ತಿಲ್ಲ, ಹೆಚ್ಚು ಟಿಪ್ಪರ್‌ಗಳ ಅಗತ್ಯವಿದೆ ಎಂದು ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ. 21 ಆಟೋ ಟಿಪ್ಪರ್‌ಗಳಲ್ಲಿ 13 ಗೂಡ್ಸ್ ವಾಹನಗಳು, ಪ್ಯಾಸೆಂಜರ್ ವಾಹನಗಳಾಗಿವೆ ಎಂದು ಆರ್‌ಟಿಐ ಮೂಲಕ ಮಾಹಿತಿ ದೊರೆತಿದೆ ಎಂದು ಮುನಿರತ್ನ ಹೇಳಿದರು.

ದಾವಣಗೆರೆ, ಹಾವೇರಿಯಲ್ಲಿ ನೋಂದಾಯಿತ ಸಂಖ್ಯೆಯ ವಾಹನಗಳು ಪತ್ತೆಯಾಗಿದ್ದರೆ, ಕೆಜಿಎಫ್‌ನಲ್ಲಿ ನೋಂದಣಿಯಾಗಿದೆ ಎಂದು ನೀಡಿರುವ ವಾಹನ ಸಂಖ್ಯೆ ಅಲ್ಲಿ ನೋಂದಣಿಯಾಗಿಲ್ಲ ಎಂದು ಆರ್‌ಟಿಓ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದು ಅವರು ಸಭೆಯಲ್ಲಿ ತಿಳಿಸಿದರು.

ಬಿಬಿಎಂಪಿಯ ಎಲ್ಲ ವಾರ್ಡ್‌ಗಳಲ್ಲಿ ಕೂಡಲೇ ಕಸ ನಿರ್ವಹಣೆಗಾಗಿ ಟೆಂಡರ್ ಕರೆಯಬೇಕು. ಪಾಲಿಕೆಗೆ ವಂಚನೆ ಮಾಡಿರುವ ಅಧಿಕಾರಿಗಳ ವಿರುದ್ಧ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಪಾಲಿಕೆಯಿಂದ ಸರಕಾರಕ್ಕೆ ಯಾವುದೇ ಕೆಟ್ಟ ಹೆಸರು ಬರಬಾರದು. ಈ ಸಂಬಂಧ ನಾವು ಕಾನೂನು ಹೋರಾಟ ನಡೆಸುತ್ತೇವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News