ಕಾವೇರಿ ಐದನೇ ಹಂತದ ಯೋಜನೆ: ಅಧಿಕಾರಿಗಳೊಂದಿಗೆ ಡಿಸಿಎಂ ಪರಮೇಶ್ವರ್ ಸಭೆ

Update: 2018-08-14 16:03 GMT

ಬೆಂಗಳೂರು, ಆ.14: ಕಾವೇರಿ ಐದನೇ ಹಂತದ ಯೋಜನೆ ಕುರಿತು ಬೆಂಗಳೂರು ನೀರು ಸರಬರಾಜು ಮತ್ತು ಜಲಮಂಡಲಿ ಅಧಿಕಾರಿಗಳೊಂದಿಗೆ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಾ.ಜಿ.ಪರಮೇಶ್ವರ್ ಸಭೆ ನಡೆಸಿದರು.

ಮಂಗಳವಾರ ನಗರದ ಅಲಿ ಅಸ್ಕರ್ ರಸ್ತೆಯಲ್ಲಿರುವ ಬಿಎಂಆರ್‌ಡಿಎ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಬೆಂಗಳೂರು ನಗರದ ಜನರ ನೀರಿನ ಬವಣೆ ನೀಗಿಸುವ ನಿಟ್ಟಿನಲ್ಲಿ ವಿವಿಧ ಯೋಜನೆಗಳನ್ನು ಕೈಗೆತ್ತಿಕೊಂಡಿರುವ ಬಗ್ಗೆ ವಿಸ್ತೃತವಾಗಿ ಚರ್ಚೆ ನಡೆಸಲಾಯಿತು.

ಬೆಂಗಳೂರಿಗೆ ವಾರ್ಷಿಕ 19 ಟಿಎಂಸಿ ನೀರನ್ನು ಕಾವೇರಿಯಿಂದ ಪೂರೈಕೆ ಮಾಡಲಾಗುತ್ತಿದೆ. ಕಾವೇರಿ ಐದನೇ ಹಂತದ ಯೋಜನೆ ಅನುಷ್ಠಾನದಿಂದ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಹೊಸದಾಗಿ ಸೇರ್ಪಡೆಯಾಗಿರುವ 110 ಹಳ್ಳಿಗಳಿಗೆ ನೀರು ಪೂರೈಕೆ ಹಾಗೂ ಬೇಡಿಕೆ ನೀಗಿಸಲು ಇರುವ ಪರ್ಯಾಯ ಮಾರ್ಗಗಳ ಬಗ್ಗೆ ಚರ್ಚಿಸಲಾಯಿತು.

ನೀರು ಸೋರಿಕೆ ತಡೆಗಟ್ಟುವಿಕೆ ಹಾಗೂ ಹೊಸ ಯೋಜನೆ ಅನುಷ್ಠಾನಗೊಂಡರೆ ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ನೀಗಲಿದೆ. ಈ ನಿಟ್ಟಿನಲ್ಲಿ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ ಪರಮೇಶ್ವರ್, ನೂತನ ಯೋಜನೆಗಳನ್ನು ಆದಷ್ಟು ಶೀಘ್ರವೇ ಅನುಷ್ಠಾನಗೊಳಿಸುವಂತೆ ನಿರ್ದೇಶಿಸಿದರು. ಸಭೆಯಲ್ಲಿ ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್ ಹಾಗೂ ಬೆಂಗಳೂರು ನೀರು ಸರಬರಾಜು ಮತ್ತು ಜಲಮಂಡಳಿಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News