ಮಹಿಳಾ ಸಬಲೀಕರಣದ ಅವಶ್ಯಕತೆ ಇದೆ: ಶಾಸಕಿ ಸೌಮ್ಯಾ ರೆಡ್ಡಿ

Update: 2018-08-14 16:05 GMT

ಬೆಂಗಳೂರು, ಆ.14: ಮಹಿಳೆಯರು ಎಲ್ಲ ಕ್ಷೇತ್ರದಲ್ಲೂ ಸಶಕ್ತರಾಗಲು ಮಹಿಳಾ ಸಬಲೀಕರಣದ ಅವಶ್ಯಕತೆ ಇದೆ ಎಂದು ಜಯನಗರದ ಕಾಂಗ್ರೆಸ್ ಶಾಸಕಿ ಸೌಮ್ಯಾ ರೆಡ್ಡಿ ಅಭಿಪ್ರಾಯಪಟ್ಟರು.

ಮಂಗಳವಾರ ನಗರದ ಪುಟ್ಟಣ ಚೆಟ್ಟಿ ಪುರಭವನದಲ್ಲಿ ಕ್ವೀನ್ ಗ್ಲೋಬಲ್ ಮ್ಯಾನೇಜ್‌ಮೆಂಟ್ ಸೆಲ್ಯೂಶನ್ಸ್ ಹಾಗೂ ವಿಶ್ವಮಾನವ ಯುವ ವೇದಿಕೆ ವತಿಯಿಂದ ಆಯೋಜಿಸಿದ್ದ, ದೇಶದ ಪರಿವರ್ತನೆ ವಿಷಯ ಕುರಿತ ರಾಜ್ಯ ಮಟ್ಟದ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಬೆಂಗಳೂರಿನಲ್ಲಿ ಕೇವಲ ಒಬ್ಬರು ಮಾತ್ರ ಮಹಿಳಾ ಶಾಸಕಿ ಇರುವುದು. ಅದೇ ರೀತಿ, ರಾಜ್ಯ ವ್ಯಾಪ್ತಿಯಲ್ಲಿ 8 ಮಂದಿ ಶಾಸಕಿಯರಿರುವುದು ಮಹಿಳಾ ಸಬಲೀಕರಣದ ಅವಶ್ಯಕತೆಯನ್ನು ತಿಳಿಸುತ್ತದೆ. ಅಲ್ಲದೆ, ರಾಜಕೀಯ ರಂಗದಲ್ಲಿ ಮಾತ್ರವಲ್ಲದೆ, ಎಲ್ಲ ವಲಯಗಳಲ್ಲಿ ಸ್ತ್ರೀ ಶಕ್ತಿ ಹೆಚ್ಚಿಸುವ ಅಗತ್ಯ ಇದೆ ಎಂದು ನುಡಿದರು.

ಯುವಕರಲ್ಲಿ ಒಂದು ಗುರಿಯಿರಬೇಕು, ಆ ಗುರಿಗೆ ದುಡಿಯುವ ತುಡಿತವಿರಬೇಕು. ಯುವ ಪೀಳಿಗೆಯಲ್ಲಿ ನಶಿಸುತ್ತಿರುವಂತಹ ಸಾಮಾಜಿಕ ಹೊಣೆಗಾರಿಕೆ, ಸ್ವಶಿಸ್ತು, ಸಾಮಾಜಿಕ ಕೊಡುಗೆ ಮುಂತಾದ ಮಾನವೀಯ ಮೌಲ್ಯಗಳು ಮರುಕಳಿಸಬೇಕು ಎಂದರು.

ಚಿಕ್ಕಂದಿನಿಂದಲೂ ಹೋರಾಟದ ಮನೋಭಾವ, ಸಮಾಜ ಸೇವೆಯಲ್ಲಿ ಆಸಕ್ತಿ, ಪರಿಸರ ಮತ್ತು ವನ್ಯಜೀವಿ ಸಂರಕ್ಷಣೆಯ ಕಾಳಜಿ ಹಾಗೂ ಸುಪ್ರೀಂ ಕೋರ್ಟ್ ಮಟ್ಟದಲ್ಲೂ ಕೆಲವೊಂದು ಹೋರಾಟ ಮಾಡಿದ್ದು, ನನ್ನಲ್ಲಿ ರಾಜಕೀಯಕ್ಕೆ ಬರಲು ಪ್ರೇರಣೆ ನೀಡಿತು ಎಂದು ಸೌಮ್ಯಾ ರೆಡ್ಡಿ ತಿಳಿಸಿದರು.

ನಾವುಗಳು ಹೇಗಿರುತ್ತೇವೆಯೊ ಸಮಾಜವೂ ಕೂಡ ಹಾಗೇ ಇರುತ್ತದೆ. ನಾವು ಬದಲಾವಣೆಯ ಹರಿಕಾರರಾಗಬೇಕು. ಅಲ್ಲದೆ, ಪ್ರತಿಯೊಬ್ಬರೂ ಕೂಡ ವಿಶಿಷ್ಟವಾದ ಕೌಶಲ್ಯವನ್ನು ಹೊಂದಿರುತ್ತಾರೆ. ಇಲ್ಲಿ ಎಲ್ಲ ಬುದ್ಧಿವಂತರೆ, ಬೇರೆಯವರಿಗೆ ಹೋಲಿಕೆ ಮಾಡಿಕೊಳ್ಳಬೇಡಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಬೆಂಗಳೂರು ಕೇಂದ್ರ ವಿವಿಯ ಕುಲಪತಿ ಪ್ರೊ.ಎಸ್.ಜಾಫೆಟ್ ಮಾತನಾಡಿ, 1950ರಲ್ಲಿ ಮಹಿಳೆಯರ ಶಿಕ್ಷಣ ಶೇ 8.4 ರಷ್ಟು ಇದ್ದದ್ದು, ಈಗ ಅದು ಶೇ.65ರಷ್ಟು ಆಗಿದೆ. ಹುಟ್ಟಿನಿಂದ ಪ್ರತಿಭೆ ಬರುವುದಿಲ್ಲ. ಅದು, ಶಿಕ್ಷಣದಿಂದ ಬರಲು ಮಾತ್ರ ಸಾಧ್ಯ. ಅಲ್ಲದೆ, ಶಿಕ್ಷಣವು ಸಮಾಜದಲ್ಲಿ ವ್ಯಕ್ತಿಗೆ ಗೌರವವನ್ನು ನೀಡುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ತಿಮ್ಮೇಗೌಡ, ನಿವೃತ್ತ ಪೊಲೀಸ್ ಆಯುಕ್ತ ಕೆ.ವಿ.ಆರ್.ಠಾಗೂರ್, ಕ್ವೀನ್ ಗ್ಲೋಬಲ್‌ನ ಅಧ್ಯಕ್ಷೆ ಡಾ.ಮಧುರಾಣಿಗೌಡ ಸೇರಿ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News